ADVERTISEMENT

ಹಾಸನ ಜಿಲ್ಲೆಯ ಹೆಸರಿಗೆ ಕಳಂಕ ತಂದ ಪ್ರಜ್ವಲ್ ರೇವಣ್ಣ: ಗೋಪಾಲಸ್ವಾಮಿ

ಮಗ ದಾರಿ ತಪ್ಪಲು ತಂದೆ ಎಚ್‌.ಡಿ. ರೇವಣ್ಣ ಕಾರಣ: ಗೋಪಾಲಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಮೇ 2024, 14:23 IST
Last Updated 4 ಮೇ 2024, 14:23 IST

ಹಾಸನ: ರಾಜ್ಯದಲ್ಲಿಯೇ ಸಂಚಲನ ಮೂಡಿಸಿರುವ ಅಶ್ಲೀಲ ವಿಡಿಯೋ ಪ್ರಕರಣ ಹಾಸನ ಜಿಲ್ಲೆಗೆ ಕಳಂಕ ಪ್ರಾಯವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ವಿಕೃತಕಾಮಿಯಂತೆ ವರ್ತಿಸಿದ್ದು, ಅವರ ನೂರಾರು ಅಶ್ಲೀಲ ವಿಡಿಯೋಗಳು ಹೊರಬರುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡುವ ಹಂತದಲ್ಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ ಗೋಪಾಲಸ್ವಾಮಿ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ಪ್ರಜ್ವಲ್ ದಾರಿ ತಪ್ಪಲು ಅವರ ತಂದೆ ಎಚ್.ಡಿ. ರೇವಣ್ಣ ಕಾರಣರಾಗಿದ್ದಾರೆ. ಈ ಹಿಂದೆ ಯುಪಿಎ ಬೆಂಬಲದೊಂದಿಗೆ ಸಂಸದರಾದ ಪ್ರಜ್ವಲ್ ರೇವಣ್ಣ, ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಸಂಸದರಾಗಿದ್ದ ಸಂದರ್ಭದಲ್ಲಿ ಪ್ರಜ್ವಲ್ ತೋಟದ ಮನೆಯಲ್ಲಿ ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ಎಚ್.ಡಿ. ರೇವಣ್ಣ ಹಾಗೂ ಕುಟುಂಬ ವರ್ಗ ಗಮನಹರಿಸಬೇಕಿತ್ತು ಎಂದರು.

ಜಿಲ್ಲೆಯಲ್ಲಿ ಹಲವಾರು ರಾಜಕೀಯ ನಾಯಕರು ಆಡಳಿತ ನಡೆಸಿದ್ದು, ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡ ಸೇರಿದಂತೆ ಅನೇಕರು ಉತ್ತಮ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣರಂತೆ ವರ್ತಿಸಿ ಜಿಲ್ಲೆಗೆ ಕೆಟ್ಟ ಹೆಸರು ತಂದಿರುವುದು ನೋವುಂಟು ಮಾಡಿದೆ ಎಂದು ಹೇಳಿದರು.

ADVERTISEMENT

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಸಂಸದರ ಪರ ಚುನಾವಣೆ ಪ್ರಚಾರಕ್ಕೆ ಬಂದಾಗ ಪ್ರಜ್ವಲ್ ಸಣ್ಣಪುಟ್ಟ ತಪ್ಪು ಮಾಡಿದ್ದಾರೆ ಕ್ಷಮಿಸಿ ಎನ್ನುತ್ತಾರೆ. ಅಶ್ಲೀಲ ಪ್ರಕರಣ ಅವರಿಗೆ ಸಣ್ಣಪುಟ್ಟ ತಪ್ಪೇ ಎಂದು ಪ್ರಶ್ನಿಸಿದರು.

ಜೆಡಿಎಸ್‌ನ ಚಿನ್ಹೆ ತೆನೆ ಹೊತ್ತ ಮಹಿಳೆಯಾಗಿದ್ದು, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಮಹಿಳೆಯ ಚಿಹ್ನೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಹೋಗಲು ಬಿಟ್ಟವರು ಯಾರು ಎಂದು ಪ್ರಶ್ನಿಸಿದ ಗೋಪಾಲಸ್ವಾಮಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೆ ನಮಗೆ ಅವಮಾನವಾದಂತೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವೈದ್ಯರು, ಎಂಜಿನಿಯರ್‌ಗಳು, ಪೊಲೀಸ್ ಅಧಿಕಾರಿಗಳು ಡೈರಿಯಲ್ಲಿ ಕೆಲಸ ಮಾಡುವ ನೌಕರರು, ಜೆಡಿಎಸ್ ಕಾರ್ಯಕರ್ತರನ್ನು ಬಳಸಿಕೊಂಡಿರುವುದು ಸಣ್ಣ ಪುಟ್ಟ ತಪ್ಪೇ ಎಂದು ಪ್ರಶ್ನಿಸಿದರು.

ಇಂತಹ ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ದೇವೇಗೌಡರ ಕುಟುಂಬಕ್ಕೆ ಅವಮಾನವಾಗಿದ್ದು, ಒಕ್ಕಲಿಗ ಸಮಾಜದ ಪ್ರಮುಖ ಮುಖಂಡರಾಗಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೂ ಅವಮಾನ ಆದಂತಾಗಿದೆ ಎಂದರು.

ಕೂಡಲೇ ಎಸ್ಐಟಿ ಸೂಕ್ತ ತನಿಖೆ ಕೈಗೊಂಡು ಆರೋಪಿಗಳಿಗೆ ಶಿಕ್ಷೆ ನೀಡಬೇಕು. ಅಶ್ಲೀಲ ವಿಡಿಯೋಗಳು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.