ADVERTISEMENT

ಹಾಸನ | ಗರ್ಭಿಣಿಯ ತಪ್ಪು ಸ್ಕ್ಯಾನಿಂಗ್‌ ವರದಿ: ₹30 ಲಕ್ಷ ಪರಿಹಾರಕ್ಕೆ ಸೂಚನೆ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಆದೇಶ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 13:39 IST
Last Updated 14 ಜೂನ್ 2024, 13:39 IST
   

ಹಾಸನ: ಗರ್ಭಿಣಿಯೊಬ್ಬರ ಸ್ಕ್ಯಾನಿಂಗ್‌ ವರದಿಯನ್ನು ತಪ್ಪಾಗಿ ನೀಡುವ ಮೂಲಕ ಸೇವಾನ್ಯೂನತೆ ಎಸಗಿದ ನಗರದ ರೆಡಿಯೊಲಾಜಿಸ್ಟ್‌ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹30 ಲಕ್ಷ ದಂಡ ವಿಧಿಸಿದೆ.

ಆಲೂರು ತಾಲ್ಲೂಕಿನ ಹಳ್ಳಿಕೊಪ್ಪಲು ಗ್ರಾಮದ ಪವಿತ್ರಾ ಬಿ.ಆರ್. ಅವರು ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಪ್ರಸವ ಪೂರ್ವ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸವ ಪೂರ್ವ ಅನೋಮಲಿ ಸ್ಕ್ಯಾನಿಂಗ್ ಮಾಡಿಸುವಂತೆ ಆಸ್ಪತ್ರೆಯ ವೈದ್ಯೆ ಡಾ.ಪ್ರತಿಮಾ ಆದರ್ಶ್ ಸೂಚಿಸಿದ್ದರು. ಅದರಂತೆ ನಗರದ ಕೆ.ಆರ್‌.ಪುರಂನಲ್ಲಿರುವ ರೆಡಿಯೊಲಾಜಿಸ್ಟ್‌ ಡಾ.ಕೆ.ವಿ.ಸುಜಾತಾ ಅವರ ಬಳಿ ಪವಿತ್ರಾ ಅವರು ಸ್ಕ್ಯಾನಿಂಗ್‌ ಮಾಡಿಸಿದ್ದರು. 2023ರ ಮಾರ್ಚ್‌ 15 ರಂದು ಸ್ಕ್ಯಾನಿಂಗ್ ವರದಿ ನೀಡಿದ್ದು, ‘ಸೀಳು ತುಟಿ ಇರುವುದಿಲ್ಲ. ಕಣ್ಣು ಮತ್ತು ಮೂಗು ಸರಿಯಿರುತ್ತದೆ’ ಎಂದು ವರದಿಯಲ್ಲಿ ತಿಳಿಸಿದ್ದರು.

ಆದರೆ, 2023 ರ ಜುಲೈ 19 ರಂದು ಪವಿತ್ರಾ ಅವರಿಗೆ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಸೀಳು ತುಟಿ ಇತ್ತು. ಬಾಯಿಯ ಒಳಗೆ ಸೀಳು ಅಂಗುಳು ಹಾಗೂ ಮೂಗಿನ ಒಳಗೆ ಸರಿಯಾದ ಬೆಳವಣಿಗೆ ಆಗಿರಲಿಲ್ಲ. ಮಗುವಿನಲ್ಲಿ ನ್ಯೂನತೆ ಇರುವುದನ್ನು ಸ್ಕ್ಯಾನಿಂಗ್‌ನಲ್ಲಿ ತಿಳಿಸಿದ್ದರೆ, ಗರ್ಭಪಾತ ಮಾಡಿಸಲು ಅವಕಾಶವಿತ್ತು. ಆದರೆ, ಡಾ.ಸುಜಾತಾ ಅವರು, ಸ್ಕ್ಯಾನಿಂಗ್ ವರದಿಯಲ್ಲಿ ಈ ವಿಷಯ ತಿಳಿಸದೇ ಸೇವಾ ನ್ಯೂನತೆ ಎಸಗಿದ್ದಾರೆ. ಇದರಿಂದ ಮಗು ಜೀವಿತಾವಧಿವರೆಗೂ ಶಾಶ್ವತ ವೈದ್ಯೋಪಚಾರ ಪಡೆಯುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಉಂಟಾದ ಮಾನಸಿಕ ಹಿಂಸೆ, ನೋವು, ವೈದ್ಯಕೀಯ ವೆಚ್ಚದ ಪರಿಹಾರವಾಗಿ ಒಟ್ಟು ₹ 50ಲಕ್ಷ ಪರಿಹಾರ ಹೊಡಿಸುವಂತೆ ಪವಿತ್ರಾ ಅವರು, ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅರ್ಜಿ ದಾಖಲಿಸಿದ್ದರು.

ADVERTISEMENT

ಆಯೋಗದ ಅಧ್ಯಕ್ಷೆ ಚಂಚಲಾ ಸಿ.ಎಂ., ಸದಸ್ಯರಾದ ಎಚ್.ವಿ.ಮಹಾದೇವ, ಅನುಪಮಾ ಆರ್. ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಡಾ.ಸುಜಾತಾ ಅವರ ಸೇವಾ ನಿರ್ಲಕ್ಷ್ಯದಿಂದ ತಪ್ಪಾದ ಸ್ಕ್ಯಾನಿಂಗ್ ವರದಿ ನೀಡಿದ್ದು, ಅಂಗವಿಕಲ ಮಗು ಜನಿಸಲು ಕಾರಣವಾಗಿದ್ದಾರೆ ಎಂದು ತೀರ್ಮಾನಿಸಿದ ಪೀಠವು, ದೂರುದಾರ ಮಹಿಳೆ ಪವಿತ್ರಾ ಅವರಿಗೆ ₹ 30 ಲಕ್ಷ ಪರಿಹಾರ ಕೊಡುವಂತೆ ಡಾ.ಸುಜಾತಾ ಅವರಿಗೆ ಸೂಚಿಸಿದೆ. ಇದರಲ್ಲಿ ₹15ಲಕ್ಷ ಅನ್ನು ಮಗು 18 ವರ್ಷ ವಯಸ್ಸಿಗೆ ಬರುವವರೆಗೂ ಮಗುವಿನ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಡುವಂತೆ ಹಾಗೂ ಉಳಿದ ₹15ಲಕ್ಷ ಅನ್ನು ವೈದ್ಯಕೀಯ ವೆಚ್ಚ ಹಾಗೂ ಮಾನಸಿಕ ಹಿಂಸೆಯ ಪರಿಹಾರವಾಗಿ ನೀಡುವಂತೆ ಸೂಚಿಸಿದೆ.

ನಿಶ್ಚಿತ ಠೇವಣಿಯಿಂದ ಬರುವ ಬಡ್ಡಿಯ ಹಣದಿಂದ ಮಗುವಿನ ಭವಿಷ್ಯದ ವೈದ್ಯಕೀಯ ವೆಚ್ಚಗಳನ್ನು ಹಾಗೂ ಇತರೆ ಖರ್ಚುಗಳನ್ನು ಭರಿಸಬಹುದು ಎಂದು ತಿಳಿಸಿದ ಪೀಠ, ದೂರುದಾರರ ಖರ್ಚಿಗಾಗಿ ₹50ಸಾವಿರ ನೀಡುವಂತೆ ಆದೇಶಿಸಿದೆ.

ಈ ಮೊತ್ತವನ್ನು ಆದೇಶವಾದ ದಿನಾಂಕದಿಂದ 45 ದಿನಗಳೊಳಗಾಗಿ ನೀಡಬೇಕು. ತಪ್ಪಿದ್ದಲ್ಲಿ ಒಟ್ಟು ಮೊತ್ತಗಳ ಮೇಲೆ ವಾರ್ಷಿಕ ಶೇ 10ರ ಬಡ್ಡಿಯೊಂದಿಗೆ ಪಾವತಿಸುವಂತೆ ಜೂನ್‌ 11 ರಂದು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.