ADVERTISEMENT

ಹಳೇಬೀಡು: ಪಂಚಕಲ್ಯಾಣದ ಪ್ರಚಾರದ ಜೊತೆಗೆ ಧರ್ಮ ಪ್ರಸಾರ

ಹೊಯ್ಸಳ ಶೈಲಿಯ ವೀರಶಾಸನ ಪ್ರಭಾವನಾ ರಥ: ಭಕ್ತರ ಆಕರ್ಷಣೆ

ಪ್ರಜಾವಾಣಿ ವಿಶೇಷ
Published 23 ಅಕ್ಟೋಬರ್ 2024, 6:39 IST
Last Updated 23 ಅಕ್ಟೋಬರ್ 2024, 6:39 IST
ಮುನಿಸುವ್ರತ ಹಾಗೂ ಶೀತಲನಾಥ ತೀರ್ಥಂಕರ ಮೂರ್ತಿ ಹಾಗೂ 40 ದಿಗಂಬರ ಜೈನ ಮುನಿಗಳ ಭಾವಚಿತ್ರ ಹೊಂದಿರುವ ಪ್ರಚಾರದ ರಥ.
ಮುನಿಸುವ್ರತ ಹಾಗೂ ಶೀತಲನಾಥ ತೀರ್ಥಂಕರ ಮೂರ್ತಿ ಹಾಗೂ 40 ದಿಗಂಬರ ಜೈನ ಮುನಿಗಳ ಭಾವಚಿತ್ರ ಹೊಂದಿರುವ ಪ್ರಚಾರದ ರಥ.   

ಹಳೇಬೀಡು: ಜೈನರಗುತ್ತಿಯಲ್ಲಿ ನವೆಂಬರ್ 29ರಿಂದ ಡಿಸೆಂಬರ್ 24ರವರಗೆ ನಡೆಯಲಿರುವ ಬೃಹತ್ ಪಂಚಕಲ್ಯಾಣ ಮಹೋತ್ಸವದ ವೀರಶಾಸನ ಪ್ರಭಾವನ ಪ್ರಚಾರ ರಥ ಕಲಾತ್ಮಕವಾಗಿದ್ದು, ಭಕ್ತರಿಗೆ ಆಕರ್ಷಣೀಯವಾಗಿದೆ.

ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿ ಪ್ರಚಾರ ಕೈಗೊಂಡಿರುವ ರಥ ಸಾವಿರಾರು ಕಿ.ಮೀ. ಸಾಗಿದೆ. ಜೈನ ಸಮಾಜ ನೆಲೆಸಿರುವ ಪುಟ್ಟ ಹಳ್ಳಿಯನ್ನು ಬಿಡದೇ ರಥದ ಸಂಚಾರ ನಡೆಯುತ್ತಿದೆ. ಈಗ ಹಾಸನ ಜಿಲ್ಲೆಯಲ್ಲಿ ರಥ ಸಂಚಾರ ಆರಂಭವಾಗಿದೆ. ರಥ ಸಾಗಿದ ಕಡೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಾಹನ ಹೊರತುಪಡಿಸಿ ರಥ ನಿರ್ಮಾಣಕ್ಕೆ ₹3 ಲಕ್ಷ ವೆಚ್ಚವಾಗಿದೆ. ಜೈನರಗುತ್ತಿಯಲ್ಲಿ ಪ್ರತಿಷ್ಠಾಪಿಸಿರುವ 31 ಅಡಿ ಎತ್ತರದ ಮುನಿಸುವ್ರತ ತೀರ್ಥಂಕರ ಹಾಗೂ ಪ್ರತಿಷ್ಠಾಪನೆ ಆಗಲಿರುವ 24 ಅಡಿ ಎತ್ತರದ ಪದ್ಮಾಸನ ಭಂಗಿಯ ಶೀತಲನಾಥ ತೀರ್ಥಂಕರರ ಪ್ರತಿಕೃತಿಯ ಪುಟ್ಟ ಮೂರ್ತಿಗಳನ್ನು ಈ ರಥದಲ್ಲಿ ಆರೋಹಣ ಮಾಡಲಾಗಿದೆ.

ADVERTISEMENT

‘ಜಿನ ಭಕ್ತರು ರಥವನ್ನು ಒಂದು ಸುತ್ತ ಬಂದಾಕ್ಷಣ ಶಿಲ್ಪ ಕಲಾಕೃತಿ ಮನಸ್ಸಿಗೆ ಮುದ ನೀಡುತ್ತದೆ. ಆಚಾರ್ಯರು ಹಾಗೂ ಜೈನ ಮುನಿಗಳ ಚಿತ್ರಗಳು ಭಕ್ತಿಯ ಲೋಕಕ್ಕೆ ಕೊಂಡೊಯ್ಯುವಂತಿದೆ’ ಎನ್ನುತ್ತಾರೆ ಮನ್ಮಥರಾಜು.

‘ವಿಶಿಷ್ಟವಾದ ರಥದ ಮುಖಾಂತರ ಪ್ರಚಾರ ಕೈಗೊಳ್ಳುವುದರಿಂದ ಕೇವಲ ಧಾರ್ಮಿಕ ಸಭೆಗೆ ಮಾತ್ರ ಉಪಯುಕ್ತವಲ್ಲ. ವಿವಿಧ ಊರುಗಳಲ್ಲಿ ರಥ ಸಾಗುವುದರಿಂದ ಜನರಲ್ಲಿ ಸನ್ಮಾರ್ಗದೆಡೆಗೆ ಸಾಗುವ ಚಿಂತನೆ ಮೂಡುತ್ತದೆ’ ಎಂದು ಹಾಸನದ ಎಂ. ಧನಪಾಲ್ ಹೇಳಿದರು.

‘ರಥ ಸಾಗಿದ ಕಡೆ ಬೃಹತ್ ಪಂಚಕಲ್ಯಾಣ ಮಹೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಥ ಸಂಚಾರದಿಂದ ಧರ್ಮ ಪ್ರಚಾರ ಆಗಿದೆ. ದೂರದ ಊರಿನಿಂದ ಲೆಕ್ಕವಿಲ್ಲದಷ್ಟು ಜನರು ಪಂಚಕಲ್ಯಾಣಕ್ಕೆ ಬರಲು ಕಾತುರರಾಗಿದ್ದಾರೆ. ರಥದ ಜೊತೆ ಭಕ್ತಿ  ಭಾವವನ್ನು ವೀರಸಾಗರ ಮುನಿಮಹಾರಾಜರು ಕಳುಹಿಸಿದ್ದಾರೆ. ರಥ ವೀಕ್ಷಣೆ ಮಾಡಿ ಪುನೀತರಾದೆವು’ ಎನ್ನುತ್ತಾರೆ ಅಡಗೂರಿನ ನಾಗೇಂದ್ರ ಕುಮಾರ್.

ಹಳೇಬೀಡು ಸಮೀಪದ ಜೈನರಗುತ್ತಿ ಕ್ಷೇತ್ರದ 24 ಅಡಿ ಎತ್ತರದ ಶೀತಲನಾಥ ತೀರ್ಥಂಕರ ಮೂರ್ತಿ ಪ್ರತಿಷ್ಠಾಪನೆಯ ಪಂಚಕಲ್ಯಾಣ ಮಹೋತ್ಸವದ ಪ್ರಚಾರ ರಥ ವೀಕ್ಷಿಸುತ್ತಿರುವ ಭಕ್ತರು.

‘ಮನಸ್ಸು ಪ್ರಫುಲ್ಲ’

'ರಥ ನೋಡಿದಾಕ್ಷಣ ಮನಸ್ಸು ಪ್ರಫುಲ್ಲವಾಗುತ್ತದೆ. ಭಕ್ತಿಯಲ್ಲಿ ಮಿಂದೆದ್ದ ಅನುಭವ ಆಗುತ್ತದೆ ಎಂಬ ಮಾತು ಜಿನ ಭಕ್ತರಿಂದ ಕೇಳಿ ಬರುತ್ತಿದೆ’ ಎನ್ನುತ್ತಾರೆ ಅಡಗೂರಿನ ಶಶಿಕುಮಾರ್. ‘ಪಂಚಕಲ್ಯಾಣ ಮಹೋತ್ಸವದ ಸಾನಿಧ್ಯ ವಹಿಸುವ ತ್ರಯಾಚಾರ್ಯರಾದ ವಿಶುದ್ಧಸಾಗರ ಮುನಿಮಹಾರಾಜ್ ಕುಲರತ್ನ ಭೂಷಣ ಮುನಿ ಮಹಾರಾಜ್ ಚಂದ್ರಪ್ರಭಸಾಗರ ಮುನಿಮಹಾರಾಜ್ ಜೈನರಗುತ್ತಿ ಕ್ಷೇತ್ರದ ಅಭಿವೃದ್ದಿಯ ಹರಿಕಾರ ಜಿನಧರ್ಮ ಪ್ರಭಾವಕ ವೀರಸಾಗರ ಮುನಿಮಹಾರಾಜ್ ಹಾಗೂ 40 ಮಂದಿ ಜೈನಮುನಿಗಳ ಭಾವಚಿತ್ರಗಳನ್ನು ರಥದಲ್ಲಿ ಅಳವಡಿಸಲಾಗಿದೆ’ ಎಂದು ಹೇಳಿದರು. ‘ರಥದ ಉಬ್ಬು ಚಿತ್ರಗಳು ಹೊಯ್ಸಳ ಶಿಲ್ಪಗಳನ್ನು ನೆನಪಿಸುತ್ತದೆ. ಹೂವಿನ ಬಳ್ಳಿ ಹಂಸ ಕುದುರೆಯ ಸಾಲುಗಳನ್ನು ರಥದ ಸುತ್ತ ಮೂಡಿಸಲಾಗಿದೆ. ರಥ ಬಂದು ನಿಂತಾಗ ಹೊಯ್ಸಳರ ಕಾಲದ ಜಿನ ಮಂದಿರ ಬಂದು ನಿಂತಂತೆ ಕಾಣಿಸುತ್ತದೆ’ ಎನ್ನುತ್ತಾರೆ ಧಾವನ್ ಜೈನ್.

ವೀರಸಾಗರ ಮುನಿಮಹಾರಾಜರ ಪರಿಕಲ್ಪನೆಯಂತೆ ಜೈನಧರ್ಮ ಸಂಸ್ಕೃತಿ ಬಿಂಬಿಸುವುದಲ್ಲದೇ ಇತಿಹಾಸವನ್ನು ನೆನಪಿಸುವಂತೆ ಕಲಾಕಾರರು ರಥದ ನಿರ್ಮಾಣ ಮಾಡಿದ್ದಾರೆ.
-ಕುಣಿಗಲ್ ಬ್ರಹ್ಮದೇವಯ್ಯ, ಪಂಚಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ
ಅಂಹಿಸೆಯ ಸಂದೇಶ ಸಾರುವುದರೊಂದಿಗೆ ಪಂಚಕಲ್ಯಾಣ ಮಹೋತ್ಸವದ ಪ್ರಚಾರಕ್ಕೆ ಈ ರಥ ನಿರ್ಮಿಸಲಾಗಿದೆ. ರಥದ ಸಾಗಿದ ಊರಿನಲ್ಲಿ ಜಿನ ಧರ್ಮದ ಪ್ರಭಾವನೆ ಹೆಚ್ಚಾಗಿದೆ.
-ವೀರಸಾಗರ ಮುನಿಮಹಾರಾಜ್ ಜೈನ ಮುನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.