ಅರಕಲಗೂಡು: ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಲು ಹೆಚ್ಚಿನ ಗಮನ ಹರಿಸುವಂತೆ ಶಾಸಕ ಎ. ಮಂಜು ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ರಕ್ಷಾ ಸಮಿತಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ತುರ್ತು ಅಗತ್ಯ ಸೇವೆಗಳನ್ನು ಒದಗಿಸಲು ಗಮನ ಹರಿಸಬೇಕು. ನೂರು ಹಾಸಿಗೆಗಳ ಆಸ್ಪತ್ರೆಯಾಗಿದ್ದರೂ ಹೆರಿಗೆಗೆ ಬರುವ ಗರ್ಭಿಣಿಯರನ್ನು ಜಿಲ್ಲಾ ಕೇಂದ್ರಕ್ಕೆ ಕಳಿಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
11 ಮಂದಿ ಸ್ಟಾಫ್ ನರ್ಸ್ ಹಾಗೂ ಲ್ಯಾಬ್ ಟೆಕ್ನೀಶಿಯನ್ ಕೊರತೆ ಇದ್ದು, ಇದು ರಾಜ್ಯದಾದ್ಯಂತ ಇರುವ ಸಮಸ್ಯೆಯಾಗಿದೆ. ಈ ಕುರಿತು ಸದನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
‘ರಾತ್ರಿ ಪಾಳಿಯ ನೌಕರರು ಮತ್ತು ಆಂಬುಲೆನ್ಸ್ ಚಾಲಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲು ಶಾಸಕರ ನಿಧಿಯಿಂದ ₹5ಲಕ್ಷ ಅನುದಾನ ಒದಗಿಸುವುದಾಗಿ ತಿಳಿಸಿ, ರೋಗಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕಟ್ಟು ನಿಟ್ಟಿನ ಕ್ರಮ ವಹಿಸಬೇಕು’ ಎಂದರು.
ರಕ್ಷಾ ಸಮಿತಿ ಉಪಾಧ್ಯಕ್ಷ ಎಂ. ರಘು, ಸದಸ್ಯರಾದ ಕೆ. ಗಣೇಶ್, ಜಬೀಉಲ್ಲಾ, ಬಸವಾನಾಯಕ್, ಬಾಣದಹಳ್ಳಿ ಗಣೇಶ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ ದೀಪಕ್, ವೈದ್ಯರಾದ ಡಾ ಕಿರಣ್, ಡಾ. ರಮೀಜ್, ಡಾ.ಸುನೀಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.