ಹಳೇಬೀಡು: ಗ್ರಾಮೀಣ ಭಾಗದ, ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಕಲ ಸೌಲಭ್ಯದೊಂದಿಗೆ 1ರಿಂದ 12ನೇ ತರಗತಿವರೆಗೆ ಶಿಕ್ಷಣ ನೀಡುವ ಪಬ್ಲಿಕ್ ಶಾಲೆ ಈ ಶೈಕ್ಷಣಿಕ ವರ್ಷದಿಂದ ಹಳೇಬೀಡಿನಲ್ಲಿ ಆರಂಭವಾಗಿದೆ.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಹಾಗೂ ಪಿಯು ಶಿಕ್ಷಣ ತರಗತಿಗಳನ್ನು ಒಂದೆ ಆಡಳಿತ ವ್ಯಾಪ್ತಿಗೆ ತರಲಾಗಿದೆ.
‘ಸದ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 510 ಮಕ್ಕಳು, ಪ್ರೌಢಶಾಲೆಯಲ್ಲಿ 400 ಹಾಗೂ ಪಿಯು ತರಗತಿಗಳಲ್ಲಿ 120 ವಿದ್ಯಾರ್ಥಿಗಳಿದ್ದರೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಕಾರಣ ಮುಂದಿನ ವರ್ಷ ಹಾಜರಾತಿ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ಪ್ರಾಂಶುಪಾಲ ಹಾಲಸಿದ್ದಪ್ಪ
ಉತ್ತಮ ಕಟ್ಟಡ, ಶೌಚಾಲಯ ವ್ಯವಸ್ಥೆ, ವಿಶಾಲ ಆಟದ ಮೈದಾನ, ಪ್ರಯೋಗಾಲಯ, ಕಂಪ್ಯೂಟರ್ ಶಿಕ್ಷಣ ಸೌಲಭ್ಯ, ಸುಸಜ್ಜಿತ ಪುಸ್ತಕ ಭಂಡಾರ, ಪ್ರತಿ ವಿಷಯಕ್ಕೂ ಪ್ರತ್ಯೇಕ ಶಿಕ್ಷಕರು ಸೇರಿ ಎಲ್ಲ ಸೌಕರ್ಯಗಳೂ ಶಾಲೆಯಲ್ಲಿರಲಿವೆ. ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆಗೆ ಜಿಲ್ಲೆಯಲ್ಲಿ ಅರಕಲಗೂಡು, ಬೇಲೂರು ತಾಲ್ಲೂಕು ಆಯ್ಕೆ ಆಗಿದ್ದು, ಹಳೇಬೀಡಿನಲ್ಲಿ ಈ ವರ್ಷ ಆರಂಭವಾಗಿದೆ. ಉತ್ತಮ ಪ್ರತಿಕ್ರಿಯೆ ಇದೆ ಎಂದು ಮುಖ್ಯಶಿಕ್ಷಕ ಎಂ.ಎ.ನಾಗರಾಜು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಕೂಗುಗಳ ಹಿಂದೆಯೇ ಶಿಕ್ಷಣ ಇಲಾಖೆ ಸಕಲ ಸೌಲಭ್ಯದ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿದೆ ಎಂದು ಉಪ ಪ್ರಾಂಶುಪಾಲ ಮುಳ್ಳಯ್ಯ ಹೇಳುತ್ತಾರೆ. ಒಂದೆ ಸೂರಿನಡಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ತರಗತಿ ನಡೆಯುವುದರಿಂದ ಪರಸ್ಪರ ಹೊಂದಾಣಿಕೆಯಿಂದ ಗುಣಮಟ್ಟದ ಶಿಕ್ಷಣ ಕಲ್ಪಿಸುವುದು ಸಾಧ್ಯವಾಗಲಿದೆ ಎಂಬ ಅನಿಸಿಕೆ ಉಪನ್ಯಾಸಕ ಧರ್ಮೇಗೌಡ ಅವರದು.
ಪಬ್ಲಿಕ್ ಶಾಲೆ ಪ್ರತಿ ಹೋಬಳಿ ಕೇಂದ್ರದಲ್ಲಿ ಆರಂಭವಾಗಬೇಕು. ಶೈಕ್ಷಣಿಕವಾಗಿ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಮಾಡಬೇಕು.
ಕೆ.ಆರ್.ಸೋಮಶೇಖರ್, ಪೋಷಕ
ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆಯಿಂದ ಸರ್ಕಾರಿ ವ್ಯವಸ್ಥೆಯಲ್ಲಿಯೂ ಮಕ್ಕಳಿಗೆ ಹೈಟೆಕ್ ಶಿಕ್ಷಣ ದೊರಕಲಿದೆ. ಮಕ್ಕಳ ಕಲಿಕೆಯ ಸಾಮರ್ಥ್ಯವೂ ಹೆಚ್ಚಲಿದೆ
-ಶಾಕೀರ್ ಅಲಿಖಾನ್ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.