ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ರೋಗಿಗಳಿಗಾಗಿ ಹಗಳಿರುಳು ಸೇವೆ...

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಹಾಸನ ಜಿಲ್ಲೆಯ ಕೊರೊನಾ ಸೇನಾನಿಗಳು
ಹಾಸನ ಜಿಲ್ಲೆಯ ಕೊರೊನಾ ಸೇನಾನಿಗಳು   

ಹಾಸನ: ಮೆಡ್‌ ಪ್ಲಸ್ ಉದ್ಯೋಗಿಯಾಗಿರುವ ಅರಕಲಗೂಡು ತಾಲ್ಲೂಕಿನ ಅತ್ನಿ ಅವರು ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಬೈಕ್‌ನಲ್ಲಿ ನಗರ, ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಅಂತರ ಪಾಲನೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದೆ. ಬೆಳಿಗ್ಗೆ ಉಪಹಾರ ಸೇವಿಸಿ ಮನೆ ಬಿಟ್ಟರೆ, ರಾತ್ರಿ 10 ಗಂಟೆಗೆ ಮನೆ ಸೇರುತ್ತಿದ್ದೆ. ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳಿಗೂ ಆಹಾರ ಪೊಟ್ಟಣ, ನೀರು, ಹಣ್ಣು, ಮಾಸ್ಕ್‌ಗಳನ್ನು ಒದಗಿಸಿದೆ. ದಾನಿಗಳು ನೀಡಿದ ಔಷಧ ಜತೆಗೆ ವೈಯಕ್ತಿಕವಾಗಿಯೂ ವೃದ್ಧರು ಮತ್ತು ರೋಗಿಗಳಿಗೆ ನೀಡಿದ್ದೇನೆ. ಕೆಲವೊಮ್ಮೆ ರಾತ್ರಿ 11 ಗಂಟೆ ವೇಳೆಯೂ ರೋಗಿಗಳಿಗೆ ಔಷಧ ತಲುಪಿಸಿರುವ ಉದಾಹರಣೆ ಇದೆ.

–ಉಮೇಶ್‌, ಸಾಮಾಜಿಕ ಕಾರ್ಯಕರ್ತ

ADVERTISEMENT

**
ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಶುಶ್ರೂಷಕ
ಹಾಸನ: ಕೋವಿಡ್–19 ಕಾಣಿಸಿಕೊಂಡ ಸಂದರ್ಭದಲ್ಲಿ ಹಲವರು ಭಯಗೊಂಡರು. ಹದಿಮೂರು ವರ್ಷದಿಂದ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶುಶ್ರೂಷಕನಾಗಿ ಕೆಲಸ ನಿರ್ವಹಿಸುತ್ತಿದ್ದರಿಂದ ಧೈರ್ಯದಿಂದಲೇ ನನ್ನ ಕರ್ತವ್ಯ ನಿಭಾಯಿಸಿದೆ.

ಶಂಕಿತರ ಗಂಟಲು ದ್ರವದ ಮಾದರಿ ತೆಗೆಯುವುದರಿಂದ ಹಿಡಿದು, ಪ್ರಯೋಗಾಲಯದ ವರದಿ ಬಂದೊಡನೆ, ಕೋವಿಡ್ ದೃಢಪಟ್ಟವರನ್ನು ವಾರ್ಡ್‌ ಗೆ‌ ದಾಖಲಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೇನೆ. ಕೋವಿಡ್‌ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳಿಗೆ ಔಷಧ ನೀಡುವುದರ ಜತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಮೊಬೈಲ್‌ಗೆ ಕರೆ ಮಾಡಿ, ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸಿದ್ದೇನೆ. ಆರು ತಿಂಗಳು ರಜೆ ಇಲ್ಲದೆ ಕೆಲಸ ಮಾಡಿದೆ. ನನಗೆ ಕೊರೊನಾ ಸೋಂಕು ತಗುಲಿದಾಗ ಆಸ್ಪತ್ರೆಯ ನಿರ್ದೇಶಕರು ಮತ್ತು ಶಸ್ತ್ರಚಿಕಿತ್ಸಕರು ಧೈರ್ಯ ಹೇಳಿ, ಎಲ್ಲಾ ರೀತಿಯ ಸಹಕಾರ ನೀಡಿದರು. ಗುಣಮುಖನಾದ ಬಳಿಕ ಮತ್ತೆ ಕೋವಿಡ್‌ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡೆ. ಜೀವದ ಹಂಗು ತೊರೆದು ಕೆಲಸ ಮಾಡಿ, ನೂರಾರು ಮಂದಿಗೆ ಸ್ಪಂದಿಸಿದ್ದಕ್ಕೆ ಹೆಮ್ಮೆ ಇದೆ.

–ಸಿ.ಆರ್‌.ಕುಮಾರ್‌, ಶೂಶ್ರಷಕ ಅಧಿಕಾರಿ, ಹಿಮ್ಸ್‌, ಹಾಸನ

**
ಪ್ರಾಣಿಗಳ ಹಸಿವು ನೀಗಿಸಿದ ಗಿರೀಶ್‌
ಹಾಸನ: ಲಾಕ್‌ಡೌನ್‌ನಿಂದ ಜನರು ಮಾತ್ರವಲ್ಲದೇ ಪ್ರಾಣಿಗಳು ಸಂಕಷ್ಟದಲ್ಲಿದ್ದವು. ಆಹಾರ ಇಲ್ಲದೆ ಪ್ರಾಣಿಗಳು ಸಾಯಬಹುದು ಅಥವಾ ಮನುಷ್ಯರ ಮೇಲೆ ಮೇಲೂ ದಾಳಿ ನಡೆಸುವ ಸಾಧ್ಯತೆ ಇತ್ತು. ಹಾಗಾಗಿ ಪ್ರಾಣಿಗಳ ಹಸಿವು ನೀಗಿಸಲು ನಿರ್ಧರಿಸಿದೆ. ನಗರದಲ್ಲಿ ಜನರಿಗೆ ಕೊರೊನಾ ವೈರಾಣು ಕುರಿತು ಅರಿವು ಮೂಡಿಸುವುದರ ಜತೆಗೆ ಹಸಿವಿನಿಂದ ಬಳಲುತ್ತಿದ್ದ ಬೀದಿ ಬದಿ ನಾಯಿಗಳಿಗೆ ಆಹಾರ, ಹಸುಗಳಿಗೆ ತರಕಾರಿ, ಮಂಗಗಳಿಗೆ ಬಾಳೆ ಹಣ್ಣು, ಕಲ್ಲಂಗಡಿ ಹಣ್ಣುಗಳನ್ನು ನೀಡಿದ್ದೇನೆ. ಹಣ್ಣಿನ ಮಂಡಿಗಳಲ್ಲಿ ಬಾಳೆ ಹಣ್ಣಿನ ಗೊನೆಗಳನ್ನು ಖರೀದಿಸಿ, ಅರಸೀಕೆರೆ ಭಾಗದಲ್ಲಿ ಕೋತಿಗಳಿಗೆ ಹೊಟ್ಟೆ ತುಂಬುವಷ್ಟು ಬಾಳೆ ಹಣ್ಣು ಕೊಟ್ಟೆ, ಉಳಿದ ಗೊನೆಗಳನ್ನು ತಿನ್ನಲೆಂದು ರಸ್ತೆ ಬದಿಯ ಮರಕ್ಕೆ ತೂಗು ಹಾಕಿದೆ.

ಜನನಿಬಿಡ ಪ್ರದೇಶದಲ್ಲಿ ಸೋಂಕು ನಿವಾರಕ ಸಿಂಪಡಣೆ ಕಾರ್ಯದಲ್ಲೂ ತೊಡಗಿಸಿಕೊಂಡೆ. ದಾನಿಗಳು ನೀಡಿದ ಮಾಸ್ಕ್‌, ಔಷಧ, ಆಹಾರ ಪದಾರ್ಥಗಳ ಕಿಟ್‌ಗಳನ್ನು ಕಾರ್ಮಿಕರು, ಅಶಕ್ತರು, ಎಪಿಎಂಸಿ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರಿಗೆ ತಲುಪಿಸಿದೆ. ಇದರ ನಡುವೆ ಅರಸೀಕೆರೆ ತಾಲ್ಲೂಕಿನ ಹಂದ್ರಾಳು, ಮುರುಂಡಿ, ಹರಳಹಳ್ಳಿಯ, ಹಾಸನ ತಾಲ್ಲೂಕಿನ ಹೆರಗು ಗ್ರಾಮದ ಕಲ್ಯಾಣಿಗಳನ್ನು ಸ್ಥಳೀಯರು ಹಾಗೂ ಏಕಲವ್ಯ ಜೀವಜಲ ಫೌಂಡೇಷನ್‌ ಸದಸ್ಯರೊಂದಿಗೆ ಪುನಶ್ಚೇತನ ಮಾಡಲಾಯಿತು.

–ಆರ್‌.ಜಿ.ಗಿರೀಶ್‌, ಸ್ಕೌಟ್‌, ಗೈಡ್ಸ್‌ ಏಕಲವ್ಯ ರೋವರ್ ಮುಕ್ತದಳದ ನಾಯಕ

**

ಕೋವಿಡ್‌ ಕಾಲದಲ್ಲಿ ಹಗಲಿರುಳು ಸೇವೆ
ಹಾಸನ: ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಕೊರೊನಾ ನಿಯಂತ್ರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗಿಳಿದ ವಾಹನ ಸವಾರರಿಗೆ ಕಿವಿ ಮಾತು ಹೇಳಿದೆ. ಒತ್ತಡದ ನಡುವೆ ತಾಳ್ಮೆ ಕಳೆದುಕೊಳ್ಳದೆ ಸೌಜನ್ಯದಿಂದ ಕೊರೊನಾ ಜಾಗೃತಿ ಮೂಡಿಸುವ ಜತೆಗೆ ಲಾಕ್‌ಡೌನ್ ಆದೇಶ ಉಲ್ಲಂಘನೆ ಆಗದಂತೆ ಕರ್ತವ್ಯ ನಿರ್ವಹಿಸಿದೆ.

-ಬಿ.ಎನ್‌.ನಂದಿನಿ


ಲಾಕ್‌ಡೌನ್ ಘೋಷಣೆ ದಿನದಿಂದ ಕೊರೊನಾ ಜಾಗೃತಿ ಹಾಡು, ವಿಡಿಯೊ, ಅಂತರ ಪಾಲನೆ ಮಾಡುವಂತೆ ಜನರ ಮನವೊಲಿಸಿದೆ. ನಡುರಾತ್ರಿ ಚೆಕ್‌ಪೋಸ್ಟ್‌ಗಳಿಗೆ ಭೇಟಿ, ಪರಿಶೀಲನೆ, ಮುಂಜಾನೆ ತರಕಾರಿ ಮಾರುಕಟ್ಟೆಗಳಿಗೆ ಭೇಟಿ, ತಾಲ್ಲೂಕು ಕೇಂದ್ರಗಳಿಗೆ ಪ್ರವಾಸ ಹೀಗೆ ಬಿಡುವಿಲ್ಲದ ಕೆಲಸ ಒಂದೆಡೆಯಾದರೆ, ಹೊರ ಊರಿಗೆ, ಜಿಲ್ಲೆಗೆ ಹೋಗಲು ಪಾಸ್‌ಗಾಗಿ ಗಂಟೆಗಟ್ಟಲೆ ಕಾದು ನಿಲ್ಲುವವರ ಸಮಸ್ಯೆ ಆಲಿಸಿ ಪಾಸ್‌ಗೆ ಅನುಮತಿ ನೀಡುತ್ತಿದೆ. ಮೊದಲ ಬಾರಿಗೆ ಕಂಟೈನ್‌ಮೆಂಟ್‌ ವಲಯ ಘೋಷಣೆ ಮಾಡಿ ಸೀಲ್‌ಡೌನ್‌ ಮಾಡುವಾಗ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಹೋದೆ.

ಹಸಿದವರಿಗೆ ಅನ್ನದಾನಿಗಳ ಮೂಲಕ ಅನ್ನ, ನೀರು, ಮಾಸ್ಕ್ ಜನರಿಗೆ ದೊರೆಯುವಂತೆ ಮಾಡಲಾಗಿದೆ. ಪೊಲೀಸರು ಕೋವಿಡ್ ರೋಗಕ್ಕೆ ತುತ್ತಾದಾಗ ಆತ್ಮಸ್ಥೈರ್ಯ ತುಂಬಿದೆ. ಹಗಲಿರುಳು ಶ್ರಮಿಸಿದ್ದೇನೆ. ಹಲವು ತಿಂಗಳು ರಜೆ ಇಲ್ಲದೆ ಕೆಲಸ ಮಾಡಿದೆ. ಕೋವಿಡ್ ರೋಗಕ್ಕೆ ಚಿಕಿತ್ಸೆ ಪಡೆದು ಮತ್ತೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ.

–ಬಿ.ಎನ್‌.ನಂದಿನಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

**
ಸಮಾಜದ ಒಳಿತಿಗಾಗಿ ಕೆಲಸ
ಹಾಸನ: ಕೋವಿಡ್ ಪ್ರಕರಣಗಳು ಹೆಚ್ಚಿದಂತೆ ಸಹಜವಾಗಿ ಭಯ ಶುರುವಾಯಿತು. ಆದರೆ ಕರ್ತವ್ಯಕ್ಕೆ ಮಾತ್ರ ಗೈರು ಹಾಜರಾಗಲಿಲ್ಲ. ಜೀವಕ್ಕೆ ಹೆದರಿ ಕೆಲಸದಿಂದ ಹಿಂದೆ ಸರಿಯದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದೆ. ನಗರದ ಸ್ವಚ್ಚತೆ ಕಾಪಾಡದಿದ್ದರೆ ಮತ್ತಷ್ಟ ಆರೋಗ್ಯ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಮನಗಂಡು ಸಹದ್ಯೋಗಿಗಳಿಗೂ ಧೈರ್ಯ ತುಂಬಿ, ಕೆಲಸದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ.

ನಗರಸಭೆಯಲ್ಲಿ 20 ವರ್ಷಗಳಿಂದ ಹೊರಗುತ್ತಿಗೆ ಪೌರಕಾರ್ಮಿಕಳಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ವೃತ್ತಿಯಲ್ಲಿದ್ದ ಅನೇಕರಿಗೆ ರೋಗಗಳು ಬಂದು, ಮೃತಪಟ್ಟಿರುವ ಉದಾಹರಣೆಯೂ ಇದೆ. ಆದರೂ ಸಮಾಜದ ಒಳಿತಿಗಾಗಿ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಸೋಂಕಿಗೆ ಹೆದರುತ್ತಿದ್ದ ಕಠಿಣ ಸಂದರ್ಭದಲ್ಲಿ ಕೋವಿಡ್‌ ಆಸ್ಪತ್ರೆ ಹಾಗೂ ಸುತ್ತಮುತ್ತ ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ ಬಳಸಿಕೊಂಡು ಮುಂಜಾಗ್ರತಾ ಕ್ರಮ ಕೈಗೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೂ ಕಾರ್ಯ ನಿರ್ವಹಿಸುತ್ತಿದ್ದೆವು.

–ಅನುರಾಧ, ಪೌರಕಾರ್ಮಿಕ ಮಹಿಳೆ, ಹಾಸನ

**

ಬಡವರಿಗೆ ಸೇವೆ ಮಾಡಿದ ತೃಪ್ತಿ
ಹಾಸನ: ಕೊರೊನಾ ವೈರಸ್‌ ತಡೆಗೆ ಸರ್ಕಾರ ಲಾಕ್‌ಡೌನ್ ಘೋಷಿಸಿದಾಗ ದುಡಿಯಲು ಕೆಲಸವಿಲ್ಲದೆ, ಊಟಕ್ಕೂ ಪರದಾಡುತ್ತಿದ್ದ ಬಡವರಿಗೆ ತಿಂಗಳಿಗಾಗುವಷ್ಟು ಅಕ್ಕಿ, ಗೋಧಿ, ಬೆಳೆ, ಎಣ್ಣೆ, ಸೋಪು ಒಳಗೊಂಡ ಕಿಟ್‌ಗಳನ್ನು ವಿತರಿಸಿದೆ. ದುಡಿದ ಹಣದಲ್ಲಿ ಉಳಿಸಿ ಕೈಲಾದಷ್ಟು ಸೇವೆ ಮಾಡಿದ್ದೇನೆ.

ಮೊದಲಿಗೆ ನಾನು ವಾಸಿಸುವ ಹೊಳೆನರಸೀಪುರ ಪಟ್ಟಣದಲ್ಲಿ ನಂತರ ಹಾಸನದ ಶ್ರೀನಗರ, ಕೆಎಚ್‌ಬಿ ಕಾಲೊನಿ, ಆಜಾದ್ ರಸ್ತೆ, ಸಿದ್ದಯ್ಯ ನಗರ ನಿವಾಸಿಗಳಿಗೆ ಅಕ್ಕಿ, ಗೋಧಿ, ಬೆಲೆ, ಎಣ್ಣೆ ಕಿಟ್‌ ವಿತರಿಸಿದೆ. ಕಾರ್ಮಿಕರಿಗೆ ಮಾಸ್ಕ್‌, ಸ್ಯಾನಿಟೈಸರ್‌ ಸಹ ನೀಡಿದ್ದೇನೆ. ಇದಕ್ಕಾಗಿ ಅಂದಾಜು ಐದು ಲಕ್ಷ ರೂಪಾಯಿಗೂ ಹೆಚ್ಚು ವ್ಯಯಿಸಿದೆ.

ಹಾಸನದ ಎಪಿಎಂಸಿಯಲ್ಲಿ ಸಗಟು ಅಕ್ಕಿ ವ್ಯಾಪಾರಿ ಮಾಡಿಕೊಂಡಿರುವ ನನಗೆ ಬಡವರ ಕಷ್ಟ ಏನೆಂಬುದು ಗೊತ್ತು. ಸಂಕಷ್ಟಕ್ಕೀಡಾಗಿದ್ದ ನೂರಾರು ಕುಟುಂಬಗಳಿಗೆ ಸ್ವಂತ ಹಣದಿಂದ ಕೈಲಾದಷ್ಟು ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈ ಕೆಲಸದಲ್ಲಿ ಆತ್ಮ ತೃಪ್ತಿ ಇದೆ.

–ವಸೀಂ ದಸ್ತಗೀರ್‌, ಸಗಟು ಅಕ್ಕಿ ವ್ಯಾಪಾರಿ, ಹಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.