ಹೊಳೆನರಸೀಪುರ: ಹಳ್ಳಿಯಲ್ಲಿ ಆಧುನಿಕ ಶೈಲಿಯಲ್ಲಿ ನಡೆಯುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿದ ಗ್ರಾಮಾಂತರ ಪೊಲೀಸ್ ಠಾಣೆ ಎಸ್.ಐ.ಮೋಹನ್ ಕೃಷ್ಣ ಮತ್ತು ಅವರ ತಂಡ 7 ಯುವಕರನ್ನು ಬಂಧಿಸಿದೆ.
ಅವರಿಂದ ₹ 5 ಸಾವಿರ ಮೌಲ್ಯದ 75 ಗ್ರಾಂ ಗಾಂಜಾ, ₹ 1,700 ನಗದು ಹಾಗೂ ಹುಕ್ಕಾ ಸೇದುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಅಡಿಕೆ ಕೆರೆ ಹೊಸೂರು ಗ್ರಾಮದ ಒಂಟಿ ಮನೆಯೊಂದರಲ್ಲಿ ಹುಕ್ಕಾ ಬಾರ್ ನಡೆಯುತ್ತಿತ್ತು. ಈ ಬಾರ್ ನಡೆಸುತ್ತಿದ್ದ ಹೊನ್ನಶೆಟ್ಟಿಹಳ್ಳಿ ಗ್ರಾಮದ ಎಚ್.ವಿ.ಸುಹಾನ್ (22), ಗ್ರಾಮದ ಒಂಟಿ ಮನೆಯಲ್ಲಿ ಪರವಾನಗಿ ಇಲ್ಲದೆ ಹುಕ್ಕಾ ಬಾರ್ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಹಾನ್ ಜೊತೆಯಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಮೇಲೂರು ಗ್ರಾಮದ ಅಜಿತ್ (27), ಚನ್ನರಾಯಪಟ್ಟಣದ ರಿಹಾನ್ (22), ಹೊಳೆನರಸೀಪುರ ಪಟ್ಟಣದ ಮನು (21), ಲಿಖಿತ್ (22), ಅಫ್ರಿದಿಉಲ್ಲಾಷರೀಷ್ (20) ಹಾಗೂ ತಾಲ್ಲೂಕಿನ ಉದ್ದೂರುಹೊಸಳ್ಳಿ ಗ್ರಾಮದ ಸಂದೇಶ್ (20) ಎಂಬವರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಡಿವೈಎಸ್ಪಿ ಲಕ್ಷ್ಮೇಗೌಡ ಮಾರ್ಗದರ್ಶನದಲ್ಲಿ ಸಿಪಿಐ ಆರ್.ಪಿ.ಅಶೋಕ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪಿಎಸ್‍ಐ ಮೋಹನಕೃಷ್ಣ, ನಗರ ಠಾಣೆ ಎಸ್.ಐ.ಕುಮಾರ್, ಸಿಬ್ಬಂದಿ ಭೋಜರಾಜ, ರೂಪೇಶ್ ರಾಜೇಅರಸ್, ಸತೀಶ್, ಮಂಜೇಗೌಡ, ಹರೀಶ, ಪುರುಷೋತ್ತಮ್, ನಾಗೇಶ್, ಶ್ರೀನಿವಾಸ, ಮನು, ಹಾಗೂ ಚಾಲಕರಾದ ನವೀನ್ ಹಾಗೂ ಧನರಾಜ್ ಅವರ ತಂಡ ರಚಿಸಿ, ಕಾರ್ಯಚರಣೆ ನಡೆಸಿದ್ದಾರೆ.
ತಾಲ್ಲೂಕಿನ ನಿರ್ಜನ ಪ್ರದೇಶಗಳಲ್ಲಿ ಇಸ್ಪೀಟ್ ಆಟ ನಡೆಯುತ್ತಿದ್ದು, ಪೊಲೀಸರು ದಾಳಿ ನಡೆಸಿ ಅಕ್ರಮ ತಡೆಗಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.