ಆಲೂರು: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಸೋನೆ ಮಳೆಯಿಂದಾಗಿ ಬುಧವಾರ ನಡೆದ ವಾರದ ಸಂತೆ ಗ್ರಾಹಕರಿಲ್ಲದೆ ಭಣಗುಡುತ್ತಿತ್ತು.
ಮಂಗಳವಾರ ರಾತ್ರಿಯಿಂದ ಸುರಿಯುತ್ತಿದ್ದ ಮಳೆ ಬುಧವಾರವೂ ಮುಂದುವರಿದಿದ್ದರಿಂದ ಸಂತೆ ದಿನದಂದು ಮಾತ್ರ ನಡೆಯುವ ನಾಟಿ ಕೋಳಿ, ಬೆಣ್ಣೆ ವ್ಯಾಪಾರ ಮಂಕಾಗಿತ್ತು.
ವಾರದ ಹಿಂದೆ ಆಷಾಢ ಮಾಸವಾಗಿದ್ದರಿಂದ ನಾಟಿ ಕೋಳಿಗಳನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದರು. ಈ ವಾರ ನಾಟಿಕೋಳಿ, ಬೆಣ್ಣೆ ಸಂತೆಗೆ ಬಂದಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.
ಟೊಮೆಟೊ ಮತ್ತು ಹಸಿ ಮೆಣಸಿನಕಾಯಿ ದರ ಕೆ.ಜಿ.ಗೆ ₹100 ಇತ್ತು. ಮೂಲಂಗಿ, ಗೆಡ್ಡೆಕೋಸು, ನುಗ್ಗೆಕಾಯಿ, ಹೂಕೋಸು, ಬೀನ್ಸ್, ಎಲೆಕೋಸು, ಸೊಪ್ಪಿನ ಬೆಲೆ ಇಳಿಮುಖವಾಗಿತ್ತು. ಹೂವಿನ ವ್ಯಾಪಾರ ಕಡಿಮೆಯಾಗಿತ್ತು.
ಹಾಸನ ಸೇರಿದಂತೆ ವಿವಿಧೆಡೆ ಬಂದಿದ್ದ ವ್ಯಾಪಾರಿಗಳು ತಾವು ತಂದಿದ್ದ ತರಕಾರಿ, ಹಣ್ಣು, ಆಹಾರ ಪದಾರ್ಥಗಳನ್ನು ವಾಪಸ್ ಕೊಂಡೊಯ್ಯುವ ಸ್ಥಿತಿ ನಿರ್ಮಾಣವಾಗಿತ್ತು.
‘ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಂತೆ ದಿನ ವ್ಯಾಪಾರ ಕುಂಠಿತವಾಗಿದೆ. ತರಕಾರಿ, ಸೊಪ್ಪು ಉಳಿದಿದ್ದು, ನಷ್ಟ ಉಂಟಾಗಿದೆ’ ಎಂದು ತರಕಾರಿ ವ್ಯಾಪಾರಿ ಇರ್ಫಾನ್ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.