ಹಳೇಬೀಡು: ಹತ್ತಿ ಬೆಳೆ, ಹಳೇಬೀಡು ಭಾಗದಲ್ಲಿ ಸೊಂಪಾಗಿ ಬೆಳೆಯುತ್ತಿದ್ದು, ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಸಮೃದ್ಧ ಮಳೆ ಆಗಿರುವುದರಿಂದ ಬೆಳೆಯ ಬೆಳವಣಿಗೆ ಉತ್ತಮವಾಗಿದೆ.
ಹತ್ತಿ ಮೊಳಕೆ ಒಡೆದು ಬೆಳೆಯುವ ಹಂತದಲ್ಲಿ ಭರಣಿ ಮಳೆ ಬೀಳಬೇಕು. ಕಳೆದ ವರ್ಷ ಭರಣಿ ಮಳೆ ಬೀಳಲಿಲ್ಲ. ಇಂದಲ್ಲ ನಾಳೆ ಭರಣಿ ಮಳೆ ಬೀಳುತ್ತದೆ ಎಂಬ ನಂಬಿಕೆಯಿಂದ ಹತ್ತಿ ಬಿತ್ತನೆ ಮಾಡಿದರು. ಆದರೆ ಮಳೆ ಕೈಕೊಟ್ಟಿದ್ದರಿಂದ ಹತ್ತಿ ಗಿಡಗಳ ಬೆಳವಣಿಗೆ ಕುಂಠಿತವಾಯಿತು. ಹತ್ತಿ ಬೆಳೆದು ಸೋಲುಂಡ ರೈತರು, ಈ ವರ್ಷ ಬೆಳೆಯ ಬೆಳವಣಿಗೆ ಕಂಡು ಹರ್ಷಿತರಾಗಿದ್ದಾರೆ.
ಭರಣಿ ನಂತರದ ಮಳೆ ಸಹ ಉತ್ತಮವಾಗಿರುವುದರಿಂದ, ಹತ್ತಿ ಗಿಡಗಳು ಒಂದು ಅಡಿ ಎತ್ತರ ಬೆಳೆದಿವೆ. ಸಮರ್ಪಕವಾಗಿ ಕಾಯಿ ಕಟ್ಟಿ ಹತ್ತಿ ಅರಳುತ್ತದೆ ಎಂಬುದು ರೈತರ ಕನಸಾಗಿದೆ.
ಭರಣಿ ಮಳೆ ಬಿದ್ದರೆ ಧರಣಿಯೆಲ್ಲ ಬೆಳೆ ಎಂಬ ಮಾತನ್ನು ನಂಬಿರುವ ರೈತರು, ಭರಣಿ ಮಳೆ ಬಿದ್ದಾಗಲೆ ಬಿತ್ತನೆಗೆ ಸಜ್ಜಾದರು. ಸಾಕಷ್ಟು ರೈತರು ಭರಣಿ ಮಳೆಯಲ್ಲಿ ತರಾತುರಿಯಲ್ಲಿ ಬಿತ್ತನೆ ಕೆಲಸ ಮುಗಿಸಿದರು. ಬಿತ್ತನೆ ಮಾಡಿದ ಮಳೆ ಆಶ್ರಿತ ಬೆಳೆಗಳು ಸಮೃದ್ಧವಾಗಿ ಬೆಳೆಯಲಾರಂಭಿಸಿವೆ.
ಮತ್ತಷ್ಟು ರೈತರು ಮಳೆ ಬಿಡುವು ಕೊಟ್ಟಾಗ ಹಂತಹಂತವಾಗಿ ಬಿತ್ತನೆ ಮಾಡುತ್ತಿದ್ದಾರೆ. ಹೆಚ್ಚಿನ ತೇವಾಂಶ ಜಮೀನಿನ ರೈತರು ಮಳೆ ಬಿಡುವು ಕೊಡುವುದನ್ನು ಕಾಯುತ್ತಿದ್ದಾರೆ.
ಬೇಲೂರು ತಾಲ್ಲೂಕಿನಲ್ಲಿ ಮುಸುಕಿನ ಜೋಳ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ರೈತರಲ್ಲಿ ಹತ್ತಿ ಬೆಳೆಯುವ ಆಸಕ್ತಿ ಕಡಿಮೆಯಾಗಿದೆ. ಹಳೇಬೀಡು ಹೋಬಳಿಯಲ್ಲಿ ಮಾತ್ರ 200 ಹೆಕ್ಟೇರ್ ಹತ್ತಿ ಬೆಳೆಯಲಾಗುತ್ತಿದೆ. ಮಾದಿಹಳ್ಳಿ, ಕಸಬಾ ಹೋಬಳಿಯಲ್ಲಿ ತಲಾ 30 ಹೆಕ್ಟೇರ್ ಹತ್ತಿ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಕೃಷಿ ಇಲಾಖೆ ಸಮೀಕ್ಷೆಯಿಂದ ಲಭ್ಯವಾಗಿದೆ. ನರಸೀಪುರ, ಕೆ.ಮಲ್ಲಾಪುರ, ಜೋಡಿ ತಿಪ್ಪನಹಳ್ಳಿ ಗ್ರಾಮಗಳಲ್ಲಿ ಸಾಕಷ್ಟು ರೈತರು ಹತ್ತಿ ಬೆಳೆದಿದ್ದಾರೆ.
ರೋಗದ ಭೀತಿ: ಸೀಮಿತವಾಗಿ ಮಳೆ ಬಂದರೆ, ಹತ್ತಿ ಗಿಡಗಳು ಚೆನ್ನಾಗಿ ಬೆಳೆದು, ಉತ್ತಮ ಫಸಲು ದೊರಕುತ್ತದೆ. ಅಗತ್ಯಕ್ಕಿಂತ ಮಳೆ ಹೆಚ್ಚಾದರೆ ಬೆಳೆಗೆ ರೋಗ ಬಾಧೆ ಕಾಣಿಸಿಕೊಳ್ಳುತ್ತದೆ.
ಬಿಡುವಿಲ್ಲದ ಮಳೆಯಿಂದ ಬೆಳೆ ರೋಗಪೀಡಿತವಾದರೆ ಎಂಬ ಭಯ ರೈತರನ್ನು ಕಾಡುತ್ತಿದೆ. ಎತ್ತರದ ಜಮೀನಿನಲ್ಲಿ ಮಾತ್ರ ಹತ್ತಿ ಬೆಳೆದಿರುವುದರಿಂದ ಸಮಸ್ಯೆ ಆಗುವುದಿಲ್ಲ ಎಂಬ ಮಾತು ಸಹ ರೈತರಿಂದ ಕೇಳಿ ಬರುತ್ತಿದೆ.
ಬೇಲೂರು ತಾಲ್ಲೂಕಿನಲ್ಲಿ ಕಡಿಮೆ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಬೆಳೆಗೆ ರೋಗ ಕೀಟ ಬಾಧೆ ಕಾಣಿಸಿಕೊಂಡರೆ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ಹತ್ತಿ ಬೆಳೆಗಾರರಿಗೆ ಸೂಚಿಸಲಾಗಿದೆ- ರಂಗಸ್ವಾಮಿ ಸಹಾಯಕ ಕೃಷಿ ನಿರ್ದೇಶಕ
ಹತ್ತಿ ರೈತರ ಕೈಹಿಡಿಯುವ ಬೆಳೆ. ಕಾರ್ಮಿಕರ ಅವಲಂಬನೆ ಇಲ್ಲದೆ ಹತ್ತಿ ಬೆಳೆಯುವುದು ಕಷ್ಟ. ಶುಂಠಿ ಬೆಳೆಯಿಂದ ದಿನದ ಕೂಲಿ ಬೆಲೆ ಹೆಚ್ಚಾಗಿದೆ. ಹಣ ಕೊಟ್ಟರೂ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲರವಿ ಎಂ.ಬಿ. ಕೆ.ಮಲ್ಲಾಪುರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.