ADVERTISEMENT

ದ್ವಾರಸಮುದ್ರ: ಬೆಳೆ ಹಾನಿ, ರಸ್ತೆ, ಬಯಲು ಜಲಾವೃತ

ದ್ವಾರಸಮುದ್ರ ಕೆರೆ ಕೋಡಿ ಹರಿದು ಅವಾಂತರ

ಎಚ್.ಎಸ್.ಅನಿಲ್ ಕುಮಾರ್
Published 20 ಅಕ್ಟೋಬರ್ 2024, 6:00 IST
Last Updated 20 ಅಕ್ಟೋಬರ್ 2024, 6:00 IST
ಶುಕ್ರವಾರ ಸಂಜೆ ಭಾರೀ ಪ್ರಮಾಣದ ಮಳೆ ಸುರಿದ ಹಿನ್ನಲೆಯಲ್ಲಿ ಹಳೇಬೀಡಿನ ದ್ವಾರಸಮುದ್ರ ಕೆರೆ ಕೋಡಿಯಲ್ಲಿ ರಭಸವಾಗಿ ನೀರು ಹರಿಯುತ್ತಿರುವುದರಿಂದ ಹಾಲಿನಡೇರಿ ಬಳಿಯ ಗದ್ದೆ ರಸ್ತೆಯಲ್ಲಿ ನೀರು ಹರಿಯುತ್ತಿದೆ.
ಶುಕ್ರವಾರ ಸಂಜೆ ಭಾರೀ ಪ್ರಮಾಣದ ಮಳೆ ಸುರಿದ ಹಿನ್ನಲೆಯಲ್ಲಿ ಹಳೇಬೀಡಿನ ದ್ವಾರಸಮುದ್ರ ಕೆರೆ ಕೋಡಿಯಲ್ಲಿ ರಭಸವಾಗಿ ನೀರು ಹರಿಯುತ್ತಿರುವುದರಿಂದ ಹಾಲಿನಡೇರಿ ಬಳಿಯ ಗದ್ದೆ ರಸ್ತೆಯಲ್ಲಿ ನೀರು ಹರಿಯುತ್ತಿದೆ.   

ಹಳೇಬೀಡು:  ಭಾರಿ ಮಳೆಗೆ ಹಳೇಬೀಡಿನ ದ್ವಾರಸಮುದ್ರ ಕೆರೆ ಕೋಡಿಯಲ್ಲಿ ಶನಿವಾರ ನೀರಿನ ಹರಿವು ಹೆಚ್ಚಾಗಿದೆ. ನೀರು ಹರಿಯುವ ವೇಗದ ಪರಿಣಾಮ ಕಾಲುವೆಗಳಿಂದ  ನೀರು ರಸ್ತೆ, ಗದ್ದೆಗಳಿಗೆ ನುಗ್ಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

ದ್ವಾರಸಮುದ್ರ ಕೆರೆಯ ಕೋಡಿಹಳ್ಳದ ಪಕ್ಕದ ಭೂದಿಗುಂಡಿ ಬಡಾವಣೆಯ ಮನೆಗಳು ಜಲಾವೃತವಾಗಿವೆ. ಕಾಲುವೆ ಸ್ವಚ್ಛವಾಗಲಿ ಎಂದು ನಿವಾಸಿಗಳು ಪೇಟೆ ಕಾಲುವೆಗೆ ನೀರು ಬಿಟ್ಟಿದ್ದಾರೆ. ಕಿರಿದಾದ ನಾಲೆಗಳ ಮೂಲಕ ಹೊರ ಚೆಲ್ಲಿದ ನೀರು ಗದ್ದೆಗಳನ್ನು ಆವರಿಸಿದೆ.

ಸಂಪರ್ಕ ಸ್ಥಗಿತ: ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದ್ವಿಚಕ್ರ ವಾಹನವೂ ಚಲಿಸಲಾಗದೆ, ರೈತರು ತಮ್ಮ ಜಮೀನಿನ ಸ್ಥಿತಿಗತಿ ನೋಡಲು ಸಾದ್ಯವಿಲ್ಲದಂತಾಗಿದೆ.  ಹಳೇಬೀಡು ಹಾಗೂ ಮಲ್ಲಾಪುರ ಗ್ರಾಮಸ್ಥರ ಜಮೀನುಗಳು ಹೆಚ್ಚಾಗಿದ್ದು, ಎರಡೂ ಗ್ರಾಮದ ರೈತರಿಗೆ ತೊಂದರೆ ಉಂಟಾಗಿದೆ.

ADVERTISEMENT

ಬೆಳೆ ಹಾನಿ: 100 ಎಕರೆಗೂ ಹೆಚ್ಚಿನ ಗದ್ದೆಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಹಾನಿಯಾಗಿದೆ. ಬಾಳೆ, ಟೊಮೆಟೊ, ಮೆಣಸು, ಬದನೆ, ಬೀನ್ಸ್, ಶುಂಠಿ ಬೆಳೆದ ಗದ್ದೆಗಳಲ್ಲಿ ನೀರು ತುಂಬಿ, ಬೆಳೆಗಳು ಕೊಳೆಯ ತೊಡಗಿವೆ ಎಂದು ರೈತರು ತಿಳಿಸಿದರು.

ಬೆಳೆ ಹಾನಿಯಾದ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ. ರಸ್ತೆಯಲಿ ನೀರು ಹರಿಯುತ್ತಿದೆ. ಗದ್ದೆ , ಜಮೀನುಗಳು ಎರೆ ಮಣ್ಣಿನ ಭೂಮಿಯಾಗಿರುವುದರಿಂದ ಕಾಲು ಹೂತುಕೊಳ್ಳುತ್ತದೆ.  ಗದ್ದೆಯಿಂದ ನೀರು ಹೊರ ಹಾಕಲು ಸಾಧ್ಯವಾಗದೆ ರೈತರು ಪರದಾಡುತ್ತಿದ್ದಾರೆ. 

ಶಾಲೆ ಮೈದಾನ ಜಲಾವೃತ: ಎಸ್‌ಜಿಆರ್ ಶೈಕ್ಷಣಿಕ ಸಮೂಹದ ಮೈದಾನದಲ್ಲಿಯೂ ನೀರು ತುಂಬಿ ಮೈದಾನ ಜಲಾವೃತವಾಗಿದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಕ್ರೀಡಾ ಚಟುವಟಿಕೆಗೆ  ಅಡಚಣೆಯಾಗಿದೆ.  

ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಸುಂದರರಾಜು ಭೇಟಿ ನೀಡಿ  ರೈತರ ಜೊತೆ ಚರ್ಚೆ ನಡೆಸಿದರು. ಬೂದಿಗುಂಡಿಯಲ್ಲಿ ಪೇಟೆ ಕಾಲುವೆಗೆ ನೀರು ಬಿಟ್ಟಿರುವುದನ್ನು ಇಲಾಖೆಯೇ  ಸರಿಪಡಿಸಬೇಕು ಎಂದು ರೈತರು  ಆಗ್ರಹಿಸಿದರು.  ರಸ್ತೆ ನಿರ್ಮಾಣದ ಜಲ್ಲಿ, ಡಾಂಬರ್ ಮಿಶ್ರಣವನ್ನು ಪೇಟೆ ಕಾಲುವೆಗೆ ತುಂಬಿಸಿ ನೀರನ್ನು ನಿಯಂತ್ರಿಸಲಾಯಿತು.

ಪೇಟೆಯ ಗಟಾರದಲ್ಲಿ ನೀರು ಹರಿಸಿ, ಸೊಳ್ಳೆ ಸಮಸ್ಯೆ ಬಗೆ ಹರಿಸಲು ಬೂದಿಗುಂಡಿ ಜನ ಅದರ ಮೂಲಕ ನೀರು ಹರಿಸಿದ್ದರು. ಇಲ್ಲದ್ದರೆ ಕೋಡಿ  ನೀರು ಮನೆಗಳಿಗೆ ನುಗ್ಗುತ್ತಿತ್ತು.  ಇನ್ನಷ್ಟು ಬೆಳೆ ಹಾನಿಯಾಗಿ ರೈತರಿಗೂ ಸಮಸ್ಯೆಯಾಗುತ್ತಿತ್ತು. ಸುಂದರೇಶ್ ತಿಳಿಸಿದರು.

ದ್ವಾರಸಮುದ್ರ ಕೆರೆ ಕೋಡಿ ನೀರು ದಿಕ್ಕಪಾಲಾಗಿರುವುದರಿಂದ ಎಸ್ಜಿಆರ್ ಕಾಲೇಜು ಮೈದಾನದಲ್ಲಿ ನೀರು ನಿಂತಿದೆ.
ಶುಕ್ರವಾರ ಸಂಜೆ ಜೋರಾಗಿ ಮಳೆ ಸುರಿದ ಪರಿಣಾಮ ದ್ವಾರಸಮುದ್ರ ಕೆರೆ ಕೋಡಿಯಲ್ಲಿ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದೆ.
ಪೇಟೆ ಕಾಲುವೆಗೆ ಅಗತ್ಯವಿದ್ದಾಗ ನೀರು ಬಿಡಲು ಅನುಕೂಲವಾಗುವಂತೆ ಒಂದು ತೂಬನ್ನು 50 ವರ್ಷಕ್ಕೂ ಮೊದಲೇ ನಿರ್ಮಿಸಲಾಗಿದೆ. ತೂಬು ಕಿತ್ತು ಹೋಗಿರುವುದರಿಂದ ನೀರಿನ ನಿಯಂತ್ರಣ ಆಗಿಲ್ಲ. ತೂಬುದನ್ನೂ ಸರಿಪಡಿಸಬೇಕು.
ಎಚ್.ಸಿ.ಚೇತನ್ ಸ್ಥಳೀಯ ರೈತ
- ಬೂದಿಗುಂಡಿಯಲ್ಲಿ ನಾಲೆ ಅಭಿವೃದ್ಧಿ ಕೆಲಸಕ್ಕೆ ಹಣ ಮಂಜೂರಾಗಿದೆ. ನೀರು ಸರಾಗವಾಗಿ ಹರಿಯುವಂತೆ ಮಾಡುತ್ತೇವೆ. .
ಸುಂದರರಾಜು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.