ಆಲೂರು: ಎರಡು ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆಯಿಂದ ಮುಸುಕಿನ ಜೋಳದ ಬೆಳೆ ಕಟಾವಿಗೆ ತೊಡಕಾಗಿದೆ. ಜೋಳ ಬಿತ್ತನೆ ಮಾಡಿ ನಾಲ್ಕು ತಿಂಗಳು ಕಳೆದಿರುವುದರಿಂದ ಕಟಾವಿಗೆ ತಯಾರಾಗಿದೆ. ಐದು ತಿಂಗಳು ಕಳೆದಿರುವುದರಿಂದ ಗಿಡಗಳಲ್ಲಿರುವ ಜೋಳದ ತೆನೆ ಒಣಗಿದ್ದು, ಸರಿಯಾದ ಸಮಯದಲ್ಲಿ ಕಟಾವು ಮಾಡದಿರುವುದರಿಂದ ಗಿಡದಲ್ಲೇ ಮೊಳಕೆ ಒಡೆಯುತ್ತಿದೆ.
ಎರಡು ದಿನ ಬಿಸಿಲು ವಾತಾವರಣ ಇದ್ದ ಕಾರಣ, ರೈತರು ತೆನೆ ಕಟಾವಿಗೆ ಮುಂದಾದರು. ಕಟಾವು ಮಾಡುವ ಸಂದರ್ಭದಲ್ಲಿ ಮಳೆ ಆಗಿದ್ದರಿಂದ ಮಾತೆಯನ್ನು ಟಾರ್ಪಾಲು ಮುಚ್ಚಿ ಸಂಗ್ರಹಿಸಿದರು. ಶೀತ ವಾತಾವರಣವಿದ್ದ ಕಾರಣ ಮೊಳಕೆ ಅತಿಯಾಗಿ ತೆನೆಯಿಂದ ಕಾಳು ಬೇರ್ಪಡಿಸಲು ಹರಸಾಹಸ ಪಡಬೇಕಾಯಿತು.
ಜೋಳ ಬಿತ್ತನೆ ಮಾಡಿದ ಸುಮಾರು ನಾಲ್ಕು ತಿಂಗಳ ನಂತರ ತೆನೆಗಳನ್ನು ಕಟಾವು ಮಾಡಬೇಕು. ಬಿತ್ತನೆ ಮಾಡಿದ ಸಂದರ್ಭದಲ್ಲಿ ಭಾರಿ ಮಳೆಗೆ ತುತ್ತಾಯಿತು. ನಂತರದ ದಿನಗಳಲ್ಲಿ ಅಳಿದುಳಿದು ಹುಟ್ಟಿದ ಗಿಡಗಳಿಗೆ ರೋಗ ರುಜಿನಗಳು ಎದುರಾಯಿತು. ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಿ ಗಿಡಗಳನ್ನು ಉಳಿಸಿಕೊಂಡರು. ಕೆಲ ರೈತರು ಕಟಾವು ಮಾಡಿದಾಗ ತುಂತುರು ಮಳೆಯಾಗಿ ಜೋಳ ತೋಯ್ದಿತ್ತು. ಕಾಳು ಬಿಡಿಸಲು ಸಾಧ್ಯವಾಗದೇ ಇದ್ದಲ್ಲೆ ಬೂಸಲಾಗಿ ಬಲೆಗಟ್ಟುತ್ತಿದೆ.
ತೆನೆಯಿಂದ ಕಾಳು ಬೇರ್ಪಡಿಸಲು ಹೊಲದ ಬಳಿ ಸ್ಥಳಾವಕಾಶ ಇಲ್ಲದೇ ಕೆಲ ರೈತರು ರಾಷ್ಟ್ರೀಯ ಹೆದ್ದಾರಿಯ ಸಿಮೆಂಟ್ ರಸ್ತೆ ಮೇಲೆ ಹಾಕಿಕೊಂಡು ಒಣಗಿಸಲು ಪ್ರಾರಂಭಿಸಿದರು. ಒಣಗಿಸುವ ಸಂದರ್ಭದಲ್ಲಿ ಜೋರು ಮಳೆ ಆಗಿದ್ದರಿಂದ ಹಸಿ ತೆನೆಗಳನ್ನು ಯಂತ್ರದ ಮೂಲಕ ಬೇರ್ಪಡಿಸಿದರು. ಬಿಡಿಸಿದ ಜೋಳದ ಕಾಳುಗಳನ್ನು ಒಣಗಿಸಲು ತೊಂದರೆಗೆ ಒಳಗಾಗಿದ್ದಾರೆ. ಜೋಳ ಉತ್ತಮವಾಗಿ ಒಣಗದಿದ್ದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ ಎನ್ನುವುದು ರೈತರ ಆತಂಕ.
ಜೋಳವನ್ನು ಯಂತ್ರದ ಮೂಲಕ ಬಿಡಿಸುವಾಗ ಶೇ 30 ಕ್ಕೂ ಹೆಚ್ಚು ತೆನೆಗಳು ಯಂತ್ರಕ್ಕೆ ಸಿಲುಕುವುದಿಲ್ಲ. ಹೊಲದಲ್ಲಿ ಉಳಿದ ತೆನೆಗಳನ್ನು ಮತ್ತೆ ಕಾರ್ಮಿಕರ ಸಹಾಯದಿಂದ ಶೇಖರಿಸಿ, ಕಾಳು ಬಿಡಿಸಬೇಕು. ಆಗ ಎರಡು ಪಟ್ಟು ಖರ್ಚಾಗುತ್ತದೆ. ಮಾರಾಟ ಮಾಡುವ ಸಂದರ್ಭದಲ್ಲಿ ಜೋಳ ಒಣಗಿಲ್ಲವೆಂಬ ಸಬೂಬು ಹೇಳುವ ವ್ಯಾಪಾರಗಾರರು ಕಡಿಮೆ ಬೆಲೆಗೆ ಕೊಳ್ಳುತ್ತಾರೆ ಎನ್ನುತ್ತಾರೆ ರೈತರು.
ಜೋಳ ಬಿತ್ತನೆ ಮಾಡಿದಾಗಿನಿಂದ ಕೊಯ್ಲು ಮಾಡುವವರೆಗೂ ಹವಾಮಾನ ವ್ಯತ್ಯಾಸದಿಂದ ಕಾಲಕ್ಕೆ ಸರಿಯಾಗಿ ಮಳೆಯಾಗದೇ, ಒಮ್ಮೊಮ್ಮೆ ಅತಿ ಮಳೆಯಾಗಿ ರೋಗಗಳು ಬರುತ್ತಿವೆ. ಇಳುವರಿ ಕುಂಠಿತವಾಗಿ ಕೃಷಿಗೆ ಖರ್ಚು ಮಾಡಿರುವ ಹಣ ಸಹ ವಾಪಸ್ ಬಾರದಂತಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.