ADVERTISEMENT

ಮಲೆನಾಡಿನಲ್ಲಿ ನಿಲ್ಲದ ಮಳೆ ಆರ್ಭಟ; ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳ

ತುಂಬಿ ಹರಿಯತ್ತಿರುವ ಹಳ್ಳ, ಕೊಳ್ಳ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 14:59 IST
Last Updated 17 ಜೂನ್ 2021, 14:59 IST
ಹಾಸನದ ಬಿ.ಎಂ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಕೊಡೆ ಹಿಡಿದು ಸಾಗುತ್ತಿರುವ ದೃಶ್ಯ.
ಹಾಸನದ ಬಿ.ಎಂ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಕೊಡೆ ಹಿಡಿದು ಸಾಗುತ್ತಿರುವ ದೃಶ್ಯ.   

ಹಾಸನ: ಜಿಲ್ಲೆಯಲ್ಲಿ ಐದು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಗುರುವಾರ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಧ್ಯಾಹ್ನದಿಂದ ಕೆಲ ತಾಸು ಬಿಡುವು ನೀಡಿ,ಸಂಜೆಯಿಂದ ಮತ್ತೆ ಸುರಿಯಿತು.

ಹಾಸನ ನಗರ, ಸುತ್ತಮುತ್ತಲ ಪ್ರದೇಶ, ಸಕಲೇಶಪುರ ಪಟ್ಟಣ, ಹೆತ್ತೂರು, ಮಾರನಹಳ್ಳಿ, ಯಸಳೂರು, ಹಾನುಬಾಳು ಹೋಬಳಿಯಲ್ಲಿ ಧಾರಾಕಾರ ಮಳೆಯಾಗಿದೆ. ನಿರಂತರಮಳೆಗೆ ಸಕಲೇಶಪುರ ತಾಲ್ಲೂಕಿನ ಅಡ್ರಹಳ್ಳಿ ಗ್ರಾಮದ ರಾಮೇಗೌಡರ ಮನೆಯ ಸಂದಿಯಲ್ಲಿ ಅಂತರ್ಜಲ ಉಕ್ಕುತ್ತಿದ್ದು, ಇದರಿಂದ ಮನೆ ಶಿಥಿಲಗೊಳ್ಳುವ ಸಾಧ್ಯತೆ ಇದೆ.

ADVERTISEMENT

ಕಾಫಿ ತೋಟಗಳಲ್ಲಿ ಮರ ಸವರುವ ಕೆಲಸ ಪೂರ್ಣಗೊಳ್ಳುವ ಮೊದಲೇ ಮಳೆರಾಯ ಕಾಲಿಟ್ಟಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಚನ್ನರಾಯಪಟ್ಟಣ, ಅರಕಲಗೂಡು, ಅರಸೀಕೆರೆ, ಹೊಳೆನರಸೀಪುರ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆ ಬಿತ್ತನೆ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದೆ.

ಹಾಸನ ನಗರದಲ್ಲಿ ಜೋರು ಗಾಳಿ ಬೀಸುವುದರ ಜತೆಗೆ ಮಳೆ ಸುರಿದ ಪರಿಣಾಮ ರಂಗೋಲಿ ಹಳ್ಳ, ಅಮಿರ್ ಮೊಹಲ್ಲಾ, ಚಿಪ್ಪಿನಕಟ್ಟೆಯ ತಗ್ಗುಪ್ರದೇಶದ ಮನೆಯೊಳಗೆನೀರು ನುಗ್ಗಿ ನಿವಾಸಿಗಳು ಭಾರಿ ತೊಂದರೆ ಅನುಭವಿಸಬೇಕಾಯಿತು. ಬಿಡುವು ನೀಡದೆಸುರಿದ ಮಳೆಯಿಂದ ಸಾರ್ವಜನಿಕರು ಹೈರಾಣಾದರು.

ಅರಕಲಗೂಡು, ಕೊಣನೂರು, ಶ್ರವಣಬೆಳಗೊಳ, ಹಳೇಬೀಡಿನಲ್ಲಿ ತುಂತುರು ಮಳೆಯಾದರೆ, ಆಲೂರಿನಲ್ಲಿ ಜೋರು ಮಳೆಯಾಗಿದೆ.

ಸಕಲೇಶಪುರ, ಮೂಡಿಗೆರೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಹೇಮಾವತಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. 2922 ಅಡಿಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 2883.35 ಅಡಿ ನೀರಿತ್ತು. ಸದ್ಯ 10,454 ಕ್ಯುಸೆಕ್ಒಳಹರಿವಿದ್ದು, 200 ಕ್ಯುಸೆಕ್ ಹೊರ ಬಿಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.