ADVERTISEMENT

ರಾಜಘಟ್ಟ ನಿವಾಸಿಗಳ ಪ್ರತಿಭಟನೆ: ಭೂಸ್ವಾಧೀನಕ್ಕೆ ಪ್ರಕ್ರಿಯೆ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮೇ 2022, 15:48 IST
Last Updated 4 ಮೇ 2022, 15:48 IST
ಹಾಸನದ ರಾಜಘಟ್ಟ ನಿವಾಸಿಗಳು ಪ್ರತಿಭಟನೆ ನಡೆಸಿದರು
ಹಾಸನದ ರಾಜಘಟ್ಟ ನಿವಾಸಿಗಳು ಪ್ರತಿಭಟನೆ ನಡೆಸಿದರು   

ಹಾಸನ: ನಗರಸಭೆ 1ನೇ ವಾರ್ಡ್‌ ರಾಜಘಟ್ಟ ಬಡಾವಣೆಯ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ರೈತರು ಹಾಗೂ ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿದರು.

ನಿವಾಸಿಗಳ ಒಪ್ಪಿಗೆ ಇಲ್ಲದೆ ಕಾನೂನು ಬಾಹಿರವಾಗಿ ಅತಿಕ್ರಮಣ ಪ್ರವೇಶ ಮಾಡಿದರೆ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಕಸಬಾ ಹೋಬಳಿಯ ಗವೇನಹಳ್ಳಿ, ಕಸ್ತೂರವಳ್ಳಿ ಮೊದಲಾದ 7 ಗ್ರಾಮಗಳ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಆದರೆ, ಇದು ಕಾನೂನು ಬಾಹಿರ. ಹುಡಾದಿಂದ ಆಡುವಳ್ಳಿ ದಾಖಲೆ ರಾಜಘಟ್ಟ ಬಡಾವಣೆಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಅದೇ ಪ್ರಕಾರ ಬುಸ್ತೇನಹಳ್ಳಿ, ಗವೇನಹಳ್ಳಿ ಬೊಮ್ಮನಾಯಕನಹಳ್ಳಿ ಆಡುವಳ್ಳಿ ಜಮೀನನ್ನು 1992 ರಲ್ಲಿ ಕೃಷಿಗಾಗಿ ಮಾತ್ರ ಎಂದು ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.‌

ADVERTISEMENT

ಐಐಟಿ ಪ್ರಸ್ತಾವನೆ ಅಥವಾ ಮಂಜೂರಾತಿ ಇಲ್ಲದಿದ್ದರೂ ಕೆಐಎಡಿಬಿ ಅವರು ಐಐಟಿ ಹೆಸರಿನಲ್ಲಿ ಭೂಸ್ವಾಧೀನ ಮಾಡಿ ಅಭಿವೃದ್ಧಿಪಡಿಸಲು ಟೆಂಡರ್ ಆಹ್ವಾನಿಸಿದ್ದರು. 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಉದ್ದೇಶಿತ ಕಾರಣಕ್ಕೆ ಬಳಸದೇ ಇದ್ದರೆ ಅಥವಾ 5 ವರ್ಷದೊಳಗೆ ಯಾವುದೇ ಪರಿಹಾರ ನೀಡದಿದ್ದಲ್ಲಿ ಮೂಲ ವಾರಸುದಾರರಿಗೆ ಹಿಂದಿರುಗಿಸತಕ್ಕದ್ದು ಎಂದು ಹೇಳಲಾಗಿದೆ. ಆದರೆ, ಅಧಿಕಾರಿಗಳು ಇದನ್ನು ಪಾಲನೆ ಮಾಡಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣಿಗಳ ಹಣದ ಆಸೆಗಾಗಿ ಕಾನೂನು ಬಾಹಿರವಾಗಿ ಜಮೀನನ್ನು ಕಬಳಿಸಲು ಹೊರಟಿದ್ದಾರೆ ಎಂದು ದೂರಿದ ಅವರು, 2015ರಲ್ಲಿ ಹೈಕೋರ್ಟ್‍ನಲ್ಲಿ ಮೊಕದ್ದಮೆ ಹೂಡಲಾಗಿದೆ. ಅದು ಇತ್ಯರ್ಥವಾಗುವ ಮುನ್ನವೇ ಆಮಿಷ ಮತ್ತು ರಾಜಕೀಯ ಕುತಂತ್ರಕ್ಕೆ ಒಳಗಾಗಿ ರೈತರನ್ನು ಬಲಿಪಶು ಮಾಡಿ ಸ್ವಾಧೀನಕ್ಕೆ ರೈತರೆಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.‌

ಈ ವಿಚಾರವಾಗಿ ಶಾಸಕ ಪ್ರೀತಂಗೌಡ ಅವರು, ಚುನಾವಣೆಗೂ ಮೊದಲು ನಮ್ಮ ಜಮೀನನ್ನು ಬಿಡಿಸಿಕೊಡುವುದಾಗಿ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಪ್ರಮಾಣ ಮಾಡಿದ್ದರು. ಆದರೀಗ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಜಮೀನಿಗೆ ಸಂಬಂಧಿಸಿದ ಅನೇಕ ರೈತರು ಮೃತಪಟ್ಟಿದ್ದಾರೆ. ಅವರ ಮಕ್ಕಳು, ಮೊಮ್ಮಕ್ಕಳು ಆಸ್ತಿ ವರ್ಗಾವಣೆ ಮಾಡಿಕೊಂಡು ಮದುವೆ ಮತ್ತಿತರೆ ಕಾರ್ಯಕ್ಕೆ ಜಮೀನು ಮಾರಾಟ ಮಾಡಿದ್ದಾರೆ. ಕೆಲವರು ಹೆಣ್ಣು ಮಕ್ಕಳಿಗೆ ಪಾಲು ನೀಡಿದ್ದಾರೆ. ಆದರೀಗ ಅವರೆಲ್ಲಾ ತೊಂದರೆ ಪಡುವಂತಾಗಿದೆ ಎಂದು ಅಳಲು ತೋಡಿಕೊಂಡರು.

ರಾಜಘಟ್ಟ ಸುತ್ತ ಮುತ್ತಲ ನಿವಾಸಿಗಳಾದ ಮೋಹನ್ ಕುಮಾರ್, ಆರ್.ಜಿ. ಕುಮಾರ್, ಜಗದೀಶ್, ಚಂದ್ರೇಗೌಡ, ಲೋಕೇಶ್, ಸುನಂದ, ಜಯಮ್ಮ, ಚಂದ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.