ADVERTISEMENT

ರಾಮ ಮಂದಿರ ನಿರ್ಮಿಸದಿದ್ದರೆ ಹಿಂದೂ ಧರ್ಮಕ್ಕೆ ಹಿನ್ನಡೆ: ವಿಶ್ವೇಶತೀರ್ಥ ಸ್ವಾಮೀಜಿ

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆತಂಕ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 16:19 IST
Last Updated 2 ಜನವರಿ 2019, 16:19 IST
ವಿಶ್ವೇಶತೀರ್ಥ ಸ್ವಾಮೀಜಿ
ವಿಶ್ವೇಶತೀರ್ಥ ಸ್ವಾಮೀಜಿ    

ಹಾಸನ: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದಿದ್ದರೆ ಬಿಜೆಪಿಗೆ ನಷ್ಟವಾಗುತ್ತದೆ ಎಂಬುದು ಮುಖ್ಯವಲ್ಲ. ಆದರೆ, ಹಿಂದೂ ಸನಾತನ ಧರ್ಮಕ್ಕೆ ಭಾರಿ ಹಿನ್ನಡೆಯಾಗಲಿದೆ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಪ್ರತಿಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಕೂಡಲೇ ಸಂವಿಧಾನ ತಜ್ಞರು, ಕಾನೂನು ಪಂಡಿತರೊಂದಿಗೆ ಚರ್ಚಿಸಿ ರಾಮ ಮಂದಿರ ಕುರಿತು ನಿಲುವು ಪ್ರಕಟಿಸಬೇಕು. ರಾಮ ಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಯಾವುದೇ ತೀರ್ಪು ನೀಡುತ್ತಿಲ್ಲ. ಕೇವಲ ಪ್ರಕರಣ ವಿಚಾರಣೆ ನಡೆಸುತ್ತಿದೆ’ ಎಂದು ಹೇಳಿದರು.

‘ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂಬುದು ಕೋಟ್ಯಂತರ ಜನರ ಬೇಡಿಕೆ. ಈ ವಿಚಾರದಲ್ಲಿ ಕಾನೂನು ರೂಪಿಸಲು ಸುಗ್ರಿವಾಜ್ಞೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಇದಕ್ಕಾಗಿ ಸಮಯ ನೀಡಲಾಗಿದೆ. ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದರು.

ADVERTISEMENT

‘ಜನವರಿ ಅಂತ್ಯಕ್ಕೆ ಧರ್ಮ ಸಂಸತ್ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸುವ ನಿರೀಕ್ಷೆಯಿದೆ. ರಾಮ ಮಂದಿರದ ಬಗ್ಗೆ ನಮ್ಮ ನಿಲುವನ್ನು ಅಲ್ಲಿ ಬಹಿರಂಗಪಡಿಸುತ್ತೇವೆ’ ಎಂದು ಹೇಳಿದರು.

‘ಎಲ್ಲ ವಯೋಮಾನದ ಮಹಿಳೆಯರ ಪ್ರವೇಶದಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಸಂಪ್ರದಾಯಕ್ಕೆ ಭಾರಿ ಹೊಡೆತವಾಗುತ್ತದೆ. ಶಬರಿಮಲೆ ಸಂಪ್ರದಾಯ ಬೇರೆಯಾಗಿರುವುದರಿಂದ ಈ ವಿಷಯದಲ್ಲಿ ನಾನು ಪರ ಅಥವಾ ವಿರೋಧ ಇಲ್ಲ. ತಟಸ್ಥ ನಿಲುವು ಹೊಂದಿದ್ದೇನೆ. ಕೆಲವರು ಉದ್ದೇಶ ಪೂರ್ವಕವಾಗಿ ದೇವಾಲಯ ಪ್ರವೇಶ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.