ADVERTISEMENT

ರಾಮನಾಥಪುರ ತಂಬಾಕು ಮಾರುಕಟ್ಟೆ: 10 ದಿನ ಕಳೆದರೂ ₹290 ದಾಟದ ಗರಿಷ್ಠ ಬೆಲೆ

ಬಿ.ಪಿ.ಗಂಗೇಶ್‌
Published 21 ಅಕ್ಟೋಬರ್ 2024, 7:55 IST
Last Updated 21 ಅಕ್ಟೋಬರ್ 2024, 7:55 IST
ಕೊಣನೂರು ಸಮೀಪದ ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹರಾಜಿನ ನಂತರ ರೈತರು ತಮ್ಮ ಬೇಲ್‍ಗಳಿಗೆ ನೀಡಿರುವ ಬೆಲೆ ಪರಿಶೀಲಿಸುತ್ತಿರುವುದು.
ಕೊಣನೂರು ಸಮೀಪದ ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹರಾಜಿನ ನಂತರ ರೈತರು ತಮ್ಮ ಬೇಲ್‍ಗಳಿಗೆ ನೀಡಿರುವ ಬೆಲೆ ಪರಿಶೀಲಿಸುತ್ತಿರುವುದು.   

ಕೊಣನೂರು: ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ ಮಾರಾಟ ವಹಿವಾಟು ಪ್ರಾರಂಭವಾಗಿದ್ದು, ತಂಬಾಕನ್ನು ಗ್ರೇಡ್ ಮಾಡುವ ಕಾರ್ಯ ಚುರುಕಾಗಿ ಸಾಗಿದೆ.

ಅರಕಲಗೂಡು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತಂಬಾಕಿನ 2024-25 ನೇ ಸಾಲಿನ ಹರಾಜು ವಹಿವಾಟು ಅಕ್ಟೋಬರ್ 7 ರಿಂದ ಪ್ರಾರಂಭವಾಗಿದೆ. ಬಹುತೇಕ ತಂಬಾಕು ಬೆಳೆಗಾರರು  ಗ್ರೇಡಿಂಗ್ ಮುಗಿಸಿ ಮಾರುಕಟ್ಟೆಗೆ ತಂಬಾಕು ಬಿಡಲು ಪ್ರಾರಂಭಿಸಿದ್ದು, ಇದುವೆರಗೂ ಗ್ರೇಡಿಂಗ್ ಮಾಡದ ಬೆಳೆಗಾರರು ಗ್ರೇಡಿಂಗ್ ಕಾರ್ಯವನ್ನು ಚುರುಕಾಗಿಸಿದ್ದಾರೆ.

ವಿರಳವಾದ ಆಂಧ್ರದ ಕಾರ್ಮಿಕರು: ಕೆಲ ವರ್ಷಗಳ ಹಿಂದೆ ಸೆಪ್ಟೆಂಬರ್ ಬಂತೆಂದರೆ ತಂಬಾಕನ್ನು ಹೆಚ್ಚು ಉತ್ಪಾದಿಸುವ ಕೊಣನೂರು ಮತ್ತು ರಾಮನಾಥಪುರ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲೂ ತಂಬಾಕು ಗ್ರೇಡ್ ಮಾಡಲು ಆಂಧ್ರಪ್ರದೇಶದ ಕಾರ್ಮಿಕರ ನೂರಾರು ಗುಂಪುಗಳು ತಿಂಗಳುಗಟ್ಟಲೆ ಬೀಡುಬಿಟ್ಟು ತಂಬಾಕು ಗ್ರೇಡಿಂಗ್ ಮಾಡುತ್ತಿದ್ದರು.

ADVERTISEMENT

ಸುಮಾರು 2 ತಿಂಗಳ ಕಾಲ ವಾಸ್ಯವ್ಯ ಹೂಡಿ ತಾವು ಗುತ್ತಿಗೆ ಪಡೆದ ಬೆಳೆಗಾರರ ಎಲ್ಲ ಮನೆಗಳಲ್ಲಿನ ತಂಬಾಕು ಗ್ರೇಡ್ ಕಾರ್ಯವನ್ನು ಮುಗಿಸಿದ ನಂತರವಷ್ಟೇ ತಮ್ಮ ರಾಜ್ಯಕ್ಕೆ ವಾಪಸಾಗುತ್ತಿದ್ದರು.

ಕೆಲ ವರ್ಷಗಳಿಂದ ಸ್ಥಳೀಯ ರೈತ ಮಹಿಳೆಯರೇ ಗ್ರೇಡಿಂಗ್ ಮಾಡುವುದನ್ನು ಚೆನ್ನಾಗಿ ಕಲಿತಿದ್ದು, ಆಂಧ್ರಪ್ರದೇಶದ ಕಾರ್ಮಿಕರ ಅವಲಂಬನೆ ಸಂಪೂರ್ಣ ಕಡಿಮೆಯಾಗಿದೆ. ಮೊದಲಿಗೆ ಅವರು ಕೇಳಿದಷ್ಟು ಹಣ ತೆತ್ತು ಗ್ರೇಡಿಂಗ್ ಮಾಡಿಸಿಕೊಳ್ಳಬೇಕಿದ್ದ ಅನಿವಾರ್ಯತೆಯೂ ತಪ್ಪಿದೆ. ಅವರಿಗಾಗಿಯೇ ಕಾದು, ಅವರು ಬಂದ ದಿನಗಳಲ್ಲಿ ಗ್ರೇಡ್ ಮಾಡಿಸಿಕೊಳ್ಳಬೇಕಿದ್ದ ಸಂದಿಗ್ಧ ಪರಿಸ್ಥಿತಿಯೂ ತಪ್ಪಿದೆ ಎಂದು ಬೆಳೆಗಾರರು ಹೇಳುತ್ತಾರೆ.

ಆಂಧ್ರಪ್ರದೇಶದಲ್ಲಿ ₹400 ದರ: ನೆರೆಯ ರಾಜ್ಯ ಅಂಧ್ರಪ್ರದೇಶದಲ್ಲಿ ಈಗಾಗಲೇ 2024 ನೇ ಸಾಲಿನ ತಂಬಾಕು ಮಾರಾಟ ವಹಿವಾಟು ಮುಕ್ತಾಯಗೊಂಡಿದ್ದು, ಅಲ್ಲಿನ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ತಂಬಾಕಿಗೆ ಗರಿಷ್ಠ ₹400 ದರ ಸಿಕ್ಕಿದೆ. ರಾಜ್ಯದ ರೈತರೂ ತಮ್ಮ ತಂಬಾಕಿಗೂ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆ ಇದುವರೆಗೂ ಫಲಿಸಿಲ್ಲ.

ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಈ ವರ್ಷ 10 ದಿನಗಳ ವಹಿವಾಟು ನಡೆದಿದ್ದು, ಪ್ರತಿ ಕೆ.ಜಿ. ತಂಬಾಕಿಗೆ ಗರಿಷ್ಠ ₹290 ದಾಟುತ್ತಿಲ್ಲ. ಹೀಗಾಗಿ ಬೆಳೆಗಾರರಲ್ಲಿ ನಿರಾಸೆ ಮೂಡಿಸುತ್ತಿದೆ.

2023-24 ನೇ ಸಾಲಿನಲ್ಲಿಯೂ ಪ್ರತಿ ಕೆ.ಜಿ. ಗರಿಷ್ಠ ಬೆಲೆ ₹290 ದೊರೆತಿದ್ದು, ಈ ವರ್ಷ ಅತಿವೃಷ್ಟಿಯ ಹಿನ್ನೆಲೆಯಲ್ಲಿ ತಂಬಾಕು ಉತ್ಪಾದನೆ ಕಡಿಮೆ ಆಗಿರುವುದರಿಂದ ಹೆಚ್ಚಿನ ಬೆಲೆ ಸಿಗಬಹುದು ಎಂಬ ಬೆಳೆಗಾರರ ನಿರೀಕ್ಷೆ ಹುಸಿಯಾಗುತ್ತಿದೆ.

ತಂಬಾಕು ಖರೀದಿಸಲು ಪ್ರತಿವರ್ಷ 10 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿದ್ದು, ಸದ್ಯ ಸುಮಾರು 6 ಕಂಪನಿಯ ಪ್ರತಿನಿಧಿಗಳು ತಂಬಾಕು ಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ದೀಪಾವಳಿ ಕಳೆದ ನಂತರ ಹೆಚ್ಚಿನ ಕಂಪನಿಗಳು ವಹಿವಾಟಿನಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ತಂಬಾಕು ಬೆಲೆ ಮತ್ತಷ್ಟು ಹೆಚ್ಚಬಹುದು ಎಂಬುದು ಮಾರುಕಟ್ಟೆ ಅಧಿಕಾರಿಗಳು ಮತ್ತು ಬೆಳೆಗಾರರ ಅಂದಾಜು.

ತಂಬಾಕು ಬೇಲ್ ಕಟ್ಟಲು ರೈತರು ಗೋಣಿಚೀಲದ ತಾಟುಗಳನ್ನು ಪಡೆಯುತ್ತಿರುವುದು.
ತಂಬಾಕಿನ ಕಡಿಮೆ ಉತ್ಪಾದನೆ: ಹೆಚ್ಚಿನ ಬೆಲೆಯ ನಿರೀಕ್ಷೆ ದೀಪಾವಳಿ ನಂತರ ಹೆಚ್ಚಿನ ಕಂಪನಿಗಳಿಂದ ಖರೀದಿ ಅಂದಾಜು
10 ದಿನ ಕಳೆದಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ಖರೀದಿಯಲ್ಲಿ ಭಾಗವಹಿಸಲಿದ್ದು ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಸವಿತಾ ರಾಮನಾಥಪುರ ಮಾರುಕಟ್ಟೆ ಅಧೀಕ್ಷಕಿ
ಈ ವರ್ಷ ಅತಿವೃಷ್ಟಿಯಿಂದಾಗಿ ತಂಬಾಕು ಉತ್ಪಾದನೆ ತ್ರಾಸದಾಯವಾಗಿದ್ದು ಉತ್ಪಾದನೆ ಪ್ರಮಾಣ ಕುಸಿತವಾಗಿದೆ. ಬೆಲೆ ಹೆಚ್ಚದಿದ್ದರೆ ನಷ್ಟವಾಗುತ್ತದೆ.
ಮಹೇಶ್‌ ತಂಬಾಕು ಬೆಳೆಗಾರ ಮಲ್ಲಾಪುರ
ಬೆಲೆಯ ಮೇಲೆ ಪರಿಣಾಮ ಬೀರದ 2ನೇ ಬೆಳೆ
ಈ ಭಾಗದಲ್ಲಿ ಇದೀಗ ವರ್ಷಕ್ಕೆ ಎರಡು ಬಾರಿ ತಂಬಾಕು ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೂನ್ ಮತ್ತು ಜುಲೈನಲ್ಲಿ ಹೆಚ್ಚಿನ ಮಳೆಯಾದಾಗ ತೆಗ್ಗು ಪ್ರದೇಶದ ಜಮೀನಿನಲ್ಲಿದ್ದ ಬಹುತೇಕ ತಂಬಾಕು ಬೆಳೆಯು ಹೆಚ್ಚಿದ ತೇವಾಂಶದಿಂದ ಹಾನಿಗೀಡಾಯಿತು. ಕೆಲ ರೈತರು ಉತ್ಪಾದಿಸುತ್ತಿದ್ದ ತಂಬಾಕಿನ ಪ್ರಮಾಣ ಕಡಿಮೆ ಆಗಿದ್ದರಿಂದ 2ನೇ ಬೆಳೆ ಬೆಳೆಯಲು ತಂಬಾಕು ನಾಟಿ ಮಾಡಿದ್ದಾರೆ. ಈಗಾಗಲೇ ಕೆಲ ರೈತರು ನಾಟಿ ಮಾಡಿರುವ ತಂಬಾಕಿನ ಸಸಿಗಳು ವಿವಿಧ ರೋಗಬಾಧೆಗೆ ತುತ್ತಾಗಿದ್ದು ತಂಬಾಕು ನಾಟಿ ಮಾಡಿದ್ದ ಸಸಿಗಳನ್ನು ಸೇರಿಸಿ ಉಳುಮೆ ಮಾಡುತ್ತಿದ್ದಾರೆ. ಹೀಗಾಗಿ ಎರಡು ಬಾರಿ ನಾಟಿ ಮಾಡಿದರೂ ಉತ್ಪಾದನೆಯ ಪ್ರಮಾಣ ಹೆಚ್ಚದೇ ಇರುವುದರಿಂದ ಬೆಲೆ ಕುಸಿತದ ಆತಂಕ ಕಡಿಮೆಯಾಗಿದೆ ಎನ್ನುವುದು ಬೆಳೆಗಾರರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.