ಅರಸೀಕೆರೆ: ಬೆಲೆ ಕುಸಿತದಿಂದ ಕಂಗಾಲಾಗಿರುವ ತೆಂಗು ಬೆಳೆಗಾರರಿಗೆ ನೆಮ್ಮದಿಯ ಮಾಹಿತಿ ಸಿಕ್ಕಿದ್ದು, ನಾಫೆಡ್ ಸಂಸ್ಥೆ ಮೂಲಕ ಉಂಡೆ ಕೊಬ್ಬರಿ ಖರೀದಿಗೆ ಜ.20ರಿಂದ ನೋಂದಣಿ ಆರಂಭವಾಗಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 45 ದಿನಗಳ ಕಾಲ ನೋಂದಣಿಗೆ ಅವಕಾಶ ಇದ್ದು, ಮುಂದಿನ ಮೂರು ತಿಂಗಳು ಖರೀದಿಗೆ ಅವಕಾಶ ಮಿತಿಗೊಳಿಸಲಾಗಿದೆ. ಪ್ರತಿ ಎಕರೆಗೆ ಗರಿಷ್ಠ 6 ಕ್ವಿಂಟಲ್, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್
ಕೊಬ್ಬರಿ ಖರೀದಿಸಲಾಗುತ್ತದೆ ಎಂದು ಹೇಳಿದರು.
₹12 ಸಾವಿರ ಎಂಎಸ್‌ಪಿಯೊಂದಿಗೆ ₹1,500 ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ಘೋಷಿಸಿದೆ ಕ್ವಿಂಟಾಲ್‌ಗೆ ₹13,500 ದರದಲ್ಲಿ ಕೊಬ್ಬರಿ ಖರೀದಿಸಲಾಗುವುದು ಹಾಗೂ ಖರೀದಿ ಪ್ರಕ್ರಿಯೇ 6 ತಿಂಗಳವರೆಗೆ ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.
ಕೊಬ್ಬರಿಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ನಂತರದಲ್ಲಿ ಒಂದು ವಾರದಲ್ಲಿ ರೈತರಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಆಗಲಿದೆ. ಆದ್ದರಿಂದ ಕೊಬ್ಬರಿಯನ್ನು ರೈತರೇ ನೇರವಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಯಾವುದೇ ವರ್ತಕರಿಗೆ, ಮಾರುಕಟ್ಟೆಗೆ ಮಾರಾಟ ಮಾಡಬೇಡಿ ಎಂದು ಸೂಚಿಸಿದರು.
ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಹಾಸನ, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ರೈತರಿಂದ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಿವಲಿಂಗೇಗೌಡ ಮನವಿ ಮಾಡಿದರು.
ತಾಲ್ಲೂಕಿನ ಪ್ರಮುಖ ಆದಾಯದ ಮೂಲ ತೆಂಗು ಹಾಗೂ ಕೊಬ್ಬರಿ ಬೆಂಬಲ ಬೆಲೆಯ ಬಗ್ಗೆ ಸದನದ ಒಳಗೂ ಹೊರಗೂ ಸುದೀರ್ಘ ಚರ್ಚೆ ಮಾಡಿ ಗಮನ ಸೆಳೆದಿದ್ದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಸ್ವಾಗತರ್ಹ ಹಾಗೂ ಕೊಬ್ಬರಿ ಖರೀದಿಗೆ ಸಂಬಂಧಪಟ್ಟಂತೆ ಸಚಿವರು ಅಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ನನ್ನ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಬೆಲೆ ಕುಸಿತದಿಂದ ಕಂಗಲಾಗಿದ್ದ ತೆಂಗು ಬೆಳೆಗಾರರಿಗೆ ತುಸು ನೆಮ್ಮದಿ ಕಾಣುವಂತಾಗಿದ್ದೆ ಎಂದು ಹೇಳಿದರು.
₹13,500 ದರದಲ್ಲಿ ಕೊಬ್ಬರಿ ಖರೀದಿ ಖರೀದಿ ಪ್ರಕ್ರಿಯೇ 6 ತಿಂಗಳು ವಿಸ್ತರಣೆಗೆ ಒತ್ತಾಯ ರೈತರ ಖಾತೆಗೆ ನೇರವಾಗಿ ಹಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.