ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯ ಎರಡನೇ ಅವಧಿಯ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗದೇ, ಒಂದು ವರ್ಷದಿಂದ ಚುನಾಯಿತ ಸದಸ್ಯರು ಆಡಳಿತದಿಂದ ಹೊರಗೆ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ.
2023ರ ಮೇ 6ಕ್ಕೆ ಮೊದಲ ಹಂತದ ಮೀಸಲಾತಿ ಅವಧಿ ಮುಗಿದಿದ್ದು, ವರ್ಷ ಪೂರ್ಣಗೊಂಡರೂ ಎರಡನೇ ಅವಧಿಗೆ ಮೀಸಲಾತಿ ನಿಗದಿಯಾಗಿಲ್ಲ. ರಾಜ್ಯದ ಎರಡು ಕಡೆ ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿರುವುದೇ ಮೀಸಲಾತಿ ನಿಗದಿ ಆಗದಿರಲು ಕಾರಣವೆಂದು ಹೇಳಲಾಗುತ್ತಿದೆ.
‘ಚುನಾಯಿತ ಸದಸ್ಯರಿದ್ದರೂ, ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ತಹಶೀಲ್ದಾರ್ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಜನರಿಂದ ಆಯ್ಕೆಯಾದವರು ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸಾವರ್ಜನಿಕರು ಹೇಳುತ್ತಿದ್ದಾರೆ.
2019ರ ಮೇ 29ರಂದು ಪಟ್ಟಣ ಪಂಚಾಯಿತಿಯ 17 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ನ 5, ಬಿಜೆಪಿಯ 6 ಹಾಗೂ ಜೆಡಿಎಸ್‌ನ 6 ಸದಸ್ಯರು ಚುನಾಯಿತರಾಗಿದ್ದರು. ಚುನಾವಣೆ ನಡೆದರೂ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗದ ಕಾರಣ ಆರಂಭದಲ್ಲಿಯೇ ಒಂದೂವರೆ ವರ್ಷ ಸದಸ್ಯರು ಅಧಿಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆಗಲೂ ಆಡಳಿತಾಧಿಕಾರಿಗಳೇ ಅಧಿಕಾರ ನಡೆಸಿದ್ದರು.
2020ರ ನವೆಂಬರ್‌ನಲ್ಲಿ ಸರ್ಕಾರದ ಮೀಸಲಾತಿ ಆದೇಶ ಪ್ರಕಟವಾಗಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಬಿಸಿಎಂಬಿ ವರ್ಗಕ್ಕೆ ನಿಗದಿಯಾಗಿತ್ತು. ಯಾವುದೇ ಪಕ್ಷ ಬಹುಮತ ಪಡೆಯದ ಕಾರಣ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್‌ನ ಹೂವಣ್ಣ ಅಧ್ಯಕ್ಷರಾದರೆ, ಮೀಸಲಾತಿಯ ಲಾಭ ಪಡೆದ ಬಿಜೆಪಿಯ ನಿಖಿಲ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಳಿಕ ಪಕ್ಷಗಳ ಒಪ್ಪದಂತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಅಬ್ಬುಲ್ ಬಾಸಿತ್ ಮತ್ತು ಶಾರದಾ ಪೃಥ್ವಿರಾಜ್ ಅಧ್ಯಕ್ಷರಾದರೆ, ಬಿಜೆಪಿಯ ಲಕ್ಷ್ಮೀ ಹಾಗೂ ಎಚ್.ಎಸ್. ರಶ್ಮಿ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು.
ಇವರ ಅಧಿಕಾರದ ಅವಧಿ ಮುಗಿದು ಒಂದು ವರ್ಷ ಕಳೆದರೂ, ಎರಡನೇ ಸರದಿಯ ಮೀಸಲಾತಿ ನಿಗದಿಯಾಗದ ಕಾರಣ ಜನಪ್ರತಿನಿಧಿಗಳು ಆಡಳಿತದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಅಧಿಕಾರಿಗಳದ್ದೇ ಆಡಳಿತವಾಗಿದೆ. ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದೇ,ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಜನರ ಅಲವತ್ತುಕೊಳ್ಳುತ್ತಿದ್ದಾರೆ.
ಮೀಸಲಾತಿ ಪ್ರಕಟವಾಗದೇ ಜನಪ್ರತಿನಿಧಿಗಳು ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳದೇ ದರ್ಬಾರ್ ನಡೆಯುತ್ತಿದೆ. ಯಜಮಾನನಿಲ್ಲದ ಮನೆಯಂತಾಗಿದೆ.
-ಅನಿಕೇತನ್ ಪಟ್ಟಣ ಪಂಚಾಯಿತಿ ಸದಸ್ಯ
ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಸರ್ಕಾರಗಳು ನಿರ್ಲಕ್ಷ ತೋರುತ್ತಿದ್ದು ಇದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರ ಈ ಕುರಿತು ಕೂಡಲೇ ಗಮನ ಹರಿಸಬೇಕು.
-ಹೂವಣ್ಣ ಪಟ್ಟಣ ಪಂಚಾಯಿತಿ ಸದಸ್ಯ
ಅಧಿಕಾರ ನೌಕರರ ಹಿಡಿತದಲ್ಲಿ ಇರುವುದರಿಂದ ಪಾರದರ್ಶಕ ಆಡಳಿತ ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳ ಹಕ್ಕಿಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ.
-ರಮೇಶ್ ವಾಟಾಳ್ ಪಟ್ಟಣ ಪಂಚಾಯಿತಿ ಸದಸ್ಯ
ಜನಪ್ರತಿನಿಧಿಗಳು ಆಡಳಿತದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಮರ್ಜಿ ಹಿಡಿಯಬೇಕಾದ ಪರಿಸ್ಥಿತಿ ಬೇಸರ ತರಿಸಿದೆ.
-ಎಚ್.ಎಸ್.ರಶ್ಮಿ ಪಟ್ಟಣ ಪಂಚಾಯಿತಿ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.