ADVERTISEMENT

ಏಡ್ಸ್‌ ಬಗೆಗಿನ ಅನುಮಾನ ಪರಿಹರಿಸಿಕೊಳ್ಳಿ: ಡಾ.ವಿ.ಕೆ. ಅಬ್ದುಲ್

ಜನಜಾಗೃತಿ ಜಾಥಾ: ಡಾ.ವಿ.ಕೆ. ಅಬ್ದುಲ್ ಬಶೀರ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 13:01 IST
Last Updated 2 ಡಿಸೆಂಬರ್ 2023, 13:01 IST
ಹಾಸನದ ಜನಪ್ರಿಯ ಆಸ್ಪತ್ರೆ ಬಳಿ ಜಾಥಾಕ್ಕೆ ಚಾಲನೆ ನೀಡಿದ ಜನಪ್ರಿಯ ಫೌಂಡೇಶನ್‌ ಅಧ್ಯಕ್ಷ ಡಾ.ವಿ.ಕೆ. ಅಬ್ದುಲ್‌ ಬಶೀರ್ ಮಾತನಾಡಿದರು
ಹಾಸನದ ಜನಪ್ರಿಯ ಆಸ್ಪತ್ರೆ ಬಳಿ ಜಾಥಾಕ್ಕೆ ಚಾಲನೆ ನೀಡಿದ ಜನಪ್ರಿಯ ಫೌಂಡೇಶನ್‌ ಅಧ್ಯಕ್ಷ ಡಾ.ವಿ.ಕೆ. ಅಬ್ದುಲ್‌ ಬಶೀರ್ ಮಾತನಾಡಿದರು    

ಹಾಸನ: ಎಚ್‌ಐವಿ, ಏಡ್ಸ್‌ ರೋಗಿಯ ಹತ್ತಿರ ಪ್ರೀತಿಯಿಂದ ನಡೆದುಕೊಳ್ಳೋಣ. ಪ್ರತಿಯೊಬ್ಬರನ್ನೂ ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಗೊಳಿಸೋಣ. ಏಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿ ಅನುಮಾನ ಪರಿಹರಿಸಿಕೊಳ್ಳಿ ಎಂದು ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ.ವಿ.ಕೆ. ಅಬ್ದುಲ್ ಬಶೀರ್ ಹೇಳಿದರು.

ಜನಪ್ರಿಯ ಕಾಲೇಜ್ ಆಫ್ ನರ್ಸಿಂಗ್, ಜನಪ್ರಿಯ ಪ್ಯಾರಾ ಮೆಡಿಕಲ್ ಸೈನ್ಸ್‌ ಮತ್ತು ಜನಪ್ರಿಯ ಆಸ್ಪತ್ರೆಗಳ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೋಂಕು ಇದಾಗಿದೆ. ಈ ಸೋಂಕಿಗೆ ಒಳಗಾದವರು ನಡೆಸುವ ಹೋರಾಟದ ಯಶಸ್ಸಿಗೆ ಧೈರ್ಯ ತುಂಬುವ ಸಂಕಲ್ಪ ಮತ್ತು ಜಾಗೃತಿಯ ಮಹತ್ವವಾಗಿ 1988ರಿಂದ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ ಎಂದರು.

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಇದರ ಪ್ರಮಾಣ ಕಡಿಮೆಯಾಗಿದ್ದು, ಶೇ 0.22 ಕ್ಕೆ ಇಳಿದಿದೆ. ಇದು ಖುಷಿ ಪಡುವ ವಿಚಾರವಲ್ಲ. ಜಾಗೃತರಾಗಿ ಸಂಪೂರ್ಣ ಹೋಗಲಾಡಿಸಬೇಕು. ಸರ್ಕಾರದ ಉಚಿತ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಮಾಹಿತಿಗಾಗಿ ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಕೇಂದ್ರ ಸಂಪರ್ಕಿಸಬಹುದು. ಸಹಾಯವಾಣಿ 1097 ಕರೆ ಮಾಡಬಹುದು ಎಂದು ತಿಳಿಸಿದರು.

ಪತ್ರಕರ್ತ ರವಿ ನಾಕಲಗೂಡು ಮಾತನಾಡಿ, ಏಡ್ಸ್‌ಗೆ ಜನಜಾಗೃತಿಯೇ ಮದ್ದು. 20 ವರ್ಷಗಳ ಹಿಂದೆ ಹೆಮ್ಮರವಾಗಿದ್ದ ಈ ರೋಗವು ಇಂದು ಕ್ಷೀಣಿಸುತ್ತಿದೆ. ಎಚ್ಚರವಾಗಿ ಇರಬೇಕಾದ ಅಗತ್ಯವಿದೆ. ಜನಪ್ರಿಯ ಆಸ್ಪತ್ರೆಯು ಇಂತಹ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಆಸ್ಪತ್ರೆಯ ಮೂಳೆತಜ್ಞ ಡಾ.ರಜತ್, ಶಸ್ತ್ರಚಿಕಿತ್ಸಕರಾದ ಡಾ. ಪ್ರವೀಣ್, ಡಾ.ಸಚಿನ್, ಪ್ರಾಂಶುಪಾಲೆ ಡಾ.ಕೃಪಾ, ಆಸ್ಪತ್ರೆಯ ಆಡಳಿತಾಧಿಕಾರಿ ಮೊಹಮದ್ ಕಿಸಾರ್, ಕಾಲೇಜಿನ ಆಡಳಿತಾಧಿಕಾರಿ ಡಾ.ದಯಾನಂದ್, ಅಧ್ಯಾಪಕರು, ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಜನಪ್ರಿಯ ಆಸ್ಪತ್ರೆಯಿಂದ ಪ್ರಾರಂಭವಾದ ಜಾಥಾ, ಸರ್ಕಾರಿ ಆಸ್ಪತ್ರೆ ರಸ್ತೆ ಮಾರ್ಗವಾಗಿ ಆರ್.ಸಿ ರಸ್ತೆ, ಎವಿಕೆ ಕಾಲೇಜು ರಸ್ತೆ, ಹೇಮಾವತಿ ಪ್ರತಿಮೆ, ಎನ್.ಆರ್ ವೃತ್ತ, ಬಿ.ಎಂ. ರಸ್ತೆಯ ಮೂಲಕ ಜನಪ್ರಿಯ ಆಸ್ಪತ್ರೆ ಸೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.