ಹಾಸನ: ‘ಸಚಿವ ರೇವಣ್ಣ ಅವರಿಗೂ ಸಿ.ಎಂ ಆಗುವ ಅರ್ಹತೆ ಇದೆ’ ಎಂಬ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೇವಣ್ಣ ಪತ್ನಿ ಭವಾನಿ, ‘ಭಗವಂತನ ಇಚ್ಛೆಗೆ ಬದ್ಧ’ ಎಂದು ಹೇಳಿದರು.
ನಗರದ ಚೈತನ್ಯ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ, ತಮ್ಮ ಮಾವ ಎಚ್.ಡಿ.ದೇವೇಗೌಡರ 87 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮೇ 23 ರ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಅವರನ್ನು ಹಾಸನಕ್ಕೆ ಕರೆಸೋಣ. ಈ ಬಗ್ಗೆ ನಂತರ ಮಾತನಾಡೋಣ’ ಎಂದು ತಿಳಿಸಿದರು.
‘ಸದ್ಯ ನಮ್ಮ ಕುಟುಂಬದ ಸದಸ್ಯರೇ ಆಗಿರುವ ಕುಮಾರಸ್ವಾಮಿ ಸಿ.ಎಂ ಆಗಿದ್ದಾರೆ. ಅವರ ಬದಲಿಗೆ ರೇವಣ್ಣ ಸಿ.ಎಂ ಆಗಬೇಕೆಂಬುದನ್ನು ಬಯಸುವುದಿಲ್ಲ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂಬುದು ನನ್ನ ಆಸೆ’ ಎಂದರು.
‘ರೇವಣ್ಣ ಅವರು ಸಿ.ಎಂ ಆಗ್ತಾರೋ, ಡಿಸಿಎಂ ಆಗ್ತಾರೋ ಅದು ಭಗವಂತನ ಇಚ್ಛೆ. ಆ ಸಮಯ ಬಂದಾಗ ಯಾರೂ ತಡೆಯಲು ಆಗುವುದಿಲ್ಲ’ ಎಂದು ನುಡಿದರು.
‘ಸಿ.ಎಂ ಆಗಿ ಕುಮಾರಸ್ವಾಮಿ ಅವರು, ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರಿದ್ದರೇ ಒಳ್ಳೆಯದು’ ಎಂದ ಭವಾನಿ, ‘ನಾನು ಹೇಳಿದ್ದನ್ನ ಅರೆಬರೆ ತೋರಿಸಬೇಡಿ. ಪೂರ್ಣ ಪ್ರಸಾರ ಮಾಡಿ’ ಎಂದು ನಗುತ್ತಲೇ ಮಾಧ್ಯಮಗಳಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.