ಹಾಸನ: ಕೋವಿಡ್ ಭೀತಿಯಿಂದಾಗಿ ಈ ಬಾರಿ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ ಕಾರಣ ವ್ಯಾಪಾರ– ವಹಿವಾಟು ಸೇರಿದಂತೆ ಹೋಟೆಲ್, ಟ್ರಾವೆಲ್ಸ್ ಉದ್ಯಮಗಳಿಗೆ ಹೊಡೆತ ಬಿದ್ದಿದೆ.
ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಗ್ರಾಹಕರಿಂದ ತುಂಬಿರುತ್ತಿದ್ದ ವಸತಿ ಗೃಹದ ಕೊಠಡಿಗಳು ಖಾಲಿ ಖಾಲಿಯಾಗಿವೆ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲೂ ಗ್ರಾಹಕರ ಸಂಖ್ಯೆ ವೀರಳವಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಭಕ್ತರು ದೇವಿ ದರ್ಶನದ ಬಳಿಕ ಸ್ಥಳೀಯ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ಸಾಮಾನ್ಯವಾಗಿ ಭೇಟಿ ನೀಡುತ್ತಿದ್ದರು. ಆದರೆ, ಈ ಬಾರಿ ದರ್ಶನಕ್ಕೆ ಅವಕಾಶ ಕಲ್ಪಿಸದ ಕಾರಣ ಟ್ಯಾಕ್ಸಿ ಚಾಲಕರು ಬಾಡಿಗೆ ಸಿಗದೆ ಸಂಕಷ್ಟದಲ್ಲಿದ್ದಾರೆ.
ದೇವಾಲಯ ಮುಂಭಾಗ ಪ್ರತಿ ವರ್ಷ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ನೂರಾರು ವ್ಯಾಪಾರಿಗಳು ಬಂದು ವಹಿವಾಟು
ನಡೆಸುತ್ತಿದ್ದರು. ವಸ್ತ್ರದ ಅಂಗಡಿ, ಹೋಟೆಲ್, ಮಕ್ಕಳ ಆಟಿಕೆ ಅಂಗಡಿ, ತಿಂಡಿ, ತಿನಿಸು ವ್ಯಾಪಾರ ಜೋರಾಗಿ ನಡೆಯುತ್ತಿತ್ತು.
ಅಲ್ಲದೇ, ಹಾಸನಾಂಬೆ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂಪಾಯಿ ಆದಾಯ ಹರಿದು ಬರುತ್ತಿತ್ತು.‘ ಎ’
ಶ್ರೇಣಿ ದೇವಾಲಯದ ಪಟ್ಟಿಯಲ್ಲಿ ಹಾಸನಾಂಬೆ ಸ್ಥಾನ ಪಡೆದಿದೆ. ಹುಂಡಿ, ವಿವಿಧ ಸೇವೆ, ನೇರ ದರ್ಶನದ ಮೂಲಕ ವರ್ಷದಿಂದ ವರ್ಷಕ್ಕೆ ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹವಾಗುತ್ತಿದೆ. ದೇಶ, ವಿದೇಶದಲ್ಲೂ ಹಾಸನಾಂಬೆ ಭಕ್ತರು ನೆಲೆಸಿದ್ದಾರೆ ಎಂಬುದಕ್ಕೆ ಹುಂಡಿಯಲ್ಲಿ ಪತ್ತೆಯಾಗಿದ್ದ ವಿದೇಶಿ ಕರೆನ್ಸಿಗಳೇ ಸಾಕ್ಷಿ.
ಈ ಬಾರಿ ಆನ್‌ಲೈನ್‌ನಲ್ಲೇ ದರ್ಶನ ಪಡೆಯಬೇಕಿರುವುದರಿಂದ ಭಕ್ತರು ಬರುತ್ತಿಲ್ಲ. ಭಕ್ತರು ಆನ್‌ಲೈನ್‌ನಲ್ಲಿ ದೇವಿಯನ್ನು
ಕಣ್ತುಂಬಿಕೊಳ್ಳುತ್ತಿದ್ದಾರೆ. ದೇವಾಲಯ ಸುತ್ತಲೂ ಅಳವಡಿಸಿರುವ ಎಲ್‌ಇಡಿ ಪರದೆ ಪಕ್ಕದಲ್ಲಿ ಕಾಣಿಕೆ ಹುಂಡಿ ಇರಿಸಲಾಗಿದೆ. ಹೊರಗಿನಿಂದಲೇ ಕೈ ಮುಗಿದು ಜನರು ಕಾಣಿಕೆ ಸಲ್ಲಿಸಿ ಹೋಗುತ್ತಿದ್ದಾರೆ.
ಜಾತ್ರೆ ವೇಳೆ ಮಕ್ಕಳ ಆಟಿಕೆ, ಗೃಹ ಬಳಕೆ ವಸ್ತು ಮಾರಾಟ ಮಾಡುತ್ತಿದ್ದ ಸಣ್ಣ ವ್ಯಾಪಾರಿಗಳಿಗೆ ತೊಂದರೆ ಆಗಿದೆ. ಹಣ್ಣು, ಹೂವು, ತೆಂಗಿನ ಕಾಯಿ ಸೇರಿದಂತೆ ಪೂಜೆ ಸಾಮಗ್ರಿ ಮಾರಾಟಗಾರರೂ ಕೈ ಕಟ್ಟಿ ಕೂರುವಂತಾಗಿದೆ. ಇದೇ ವೇಳೆ ಸಾಂಸ್ಕೃತಿಕ್ರಮ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಅದಕ್ಕೂ ಅವಕಾಶ ಇಲ್ಲದೇ ಇರುವುದು ಕಲಾವಿದರಿಗೆ ಬೇಸರ ತರಿಸಿದೆ.
‘ಸಾರ್ವನಿಕರ ದರ್ಶನಕ್ಕೆ ಅವಕಾಶವಿಲ್ಲದ ಕಾರಣ ಕಾಣಿಕೆ ಪಡೆಯುತ್ತಿಲ್ಲ. ಮುಂದಿನ ವರ್ಷದಿಂದ ಭಕ್ತರು ತಮ್ಮ ಹರಕೆ
ತೀರಿಸಿಕೊಳ್ಳಬಹುದು’ ಎಂದು ದೇವಾಲಯ ಆಡಳಿತಾಧಿಕಾರಿ ಬಿ.ಎ.ಜಗದೀಶ್ ಹೇಳಿದರು.
‘ಹಾಸನಾಂಬೆ ಉತ್ಸವ ವೇಳೆ ಹೋಟೆಲ್ ತುಂಬಾ ಗ್ರಾಹಕರು ತುಂಬಿರುತ್ತಿದ್ದರು. ಈ ಸಂದರ್ಭದಲ್ಲಿ ಒಳ್ಳೆಯ
ವ್ಯಾಪಾರವಾಗುತ್ತಿತ್ತು. ಭಕ್ತರಿಗೆ ದೇವಿ ದರ್ಶನ ನೀಡದ ಕಾರಣ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ. ಸದ್ಯದ ಸ್ಥಿತಿಯಲ್ಲಿ ಹೋಟೆಲ್ ನಡೆಸುವುದೇ ಕಷ್ಟವಾಗಿದೆ’ಎಂದು ಪತಾಂಜಲಿ ಹೋಟೆಲ್ ಮಾಲೀಕ ಪ್ರದೀಪ್ ಅಳಲು ತೋಡಿಕೊಂಡರು.
‘ಹಾಸನಾಂಬೆ ಜಾತ್ರೆಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುತ್ತಿದ್ದ ಭಕ್ತರು ದೇವಿ ದರ್ಶನ ಪಡೆದ ಬಳಿಕ ಟ್ಯಾಕ್ಸಿಗಳಲ್ಲಿ
ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಕೆಲವರು ಧಾರ್ಮಿಕ ಕ್ಷೇತ್ರಗಳಿಗೂ ಇಲ್ಲಿಂದಲೇ ತೆರಳುತ್ತಿದ್ದರು. ಇದರಿಂದ ಸ್ವಲ್ಪ ಹಣ ಸಂಪಾದನೆ ಆಗುತ್ತಿತ್ತು. ಆದರೆ ಈ ಬಾರಿ ದೇವಾಲಯ ಪ್ರವೇಶ ನೀಡದ ಕಾರಣ ಟ್ಯಾಕ್ಸಿಗಳ ಬಾಡಿಗೆ ಕೇಳುವವರೇ ಇಲ್ಲ’ ಎಂದು ಟ್ಯಾಕ್ಸಿ ಚಾಲಕ ಶಂಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.