ಹಾಸನ: ಬಗರ್ ಹುಕುಂ ಸಮಿತಿ ಮುಂದೆ ಬಾಕಿ ಇರುವ ಅಕ್ರಮ– ಸಕ್ರಮ ಅರ್ಜಿಗಳ ಶೀಘ್ರ ವಿಲೇವಾರಿ ಹಾಗೂ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನೂತನವಾಗಿ ಜಾರಿ ಮಾಡಿರುವ ನಿಯಮಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಮಂಜೂರಾತಿಗೆ ನಮೂನೆ 50, 53, 57ರ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಅದರಂತೆ ರಾಜ್ಯದಲ್ಲಿ ಇದುವರೆಗೆ ಸುಮಾರು 14 ಲಕ್ಷ ಅರ್ಜಿಗಳ ವಿಲೇವಾರಿ ಬಾಕಿ ಇದೆ ಎಂದರು.
2023 ಡಿಸೆಂಬರ್ 1 ರಂದು ಕಂದಾಯ ಇಲಾಖೆಯಿಂದ ಹೊರಡಿಸಿರುವ ಗೊಂದಲದ ಸುತ್ತೋಲೆಯೇ ಸಾವಿರಾರು ಆರ್ಜಿಗಳ ವಿಲೇವಾರಿ ವಿಳಂಬಕ್ಕೆ ಕಾರಣವಾಗಿದೆ. ಇದರ ಅನ್ವಯ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಇರುವ ಅಧಿಕಾರಗಳನ್ನು ಮೊಟಕುಗೊಳಿಸಲಾಗಿದೆ. ನಮೂನೆ 50ಹಾಗೂ 53 ರಲ್ಲಿ ಅರ್ಜಿ ಸಲ್ಲಿಸಿದವರು, 57ರ ಅಡಿ ಅರ್ಜಿ ಸಲ್ಲಿಸಲು ಬರುವುದಿಲ್ಲ. ಇದರಿಂದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದರು.
ವಿಲೇವಾರಿ ಆಗದ ಅರ್ಜಿಗಳು ತಿರಸ್ಕೃತಗೊಂಡ ಸಂದರ್ಭದಲ್ಲಿ ಮೇಲ್ಮನವಿ ಸಲ್ಲಿಸಲು ರೈತರು ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಬದಲಿಗೆ ಕೆಎಟಿ ಮತ್ತು ಹೈಕೋರ್ಟ್ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಭೂ ಕಂದಾಯ ಅಧಿನಿಯಮ 108 ಸಿಸಿಯಂತೆ, ಯಾವುದೇ ನೋಟಿಸ್ ಅಥವಾ ತಿಳಿವಳಿಕೆ ಮಾಹಿತಿ ಕೊಡದೇ ಅಧಿಕಾರಿಗಳ ಹಂತದಲ್ಲಿ ನಮೂನೆ 53 ಮತ್ತು 57 ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ವಜಾ ಮಾಡಬಹುದು. ಹಾಗಾಗಿ ಈ ಕಾನೂನಿಗೆ ಅಮೂಲಾಗ್ರ ಬದಲಾವಣೆ ತರಬೇಕಾಗಿದೆ. ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಶಾಸಕರು ಈ ಕುರಿತು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸಾವಿರಾರು ರೈತರ ಸಮಸ್ಯೆಗಳ ಬಗ್ಗೆ ಸ್ಥಳೀಯ ಶಾಸಕರು, ರಾಜ್ಯದ ಎಲ್ಲ ಜನಪ್ರತಿನಿಧಿಗಳು ಮಾತನಾಡಬೇಕಾಗಿದೆ. ಈ ಹೊಸ ನಿಯಮದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.
ಕಾಫಿ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಲು ಸರ್ಕಾರ ಅರ್ಜಿ ಆಹ್ವಾನಿಸಿದೆ. ಅದರಂತೆಯೇ ಅಕ್ರಮ– ಸಕ್ರಮದಡಿ ರೈತರು ಗುತ್ತಿಗೆ ಪಡೆಯಲು ಸರ್ಕಾರ ಅರ್ಜಿ ಆಹ್ವಾನಿಸಬಹುದು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ಮುಖ್ಯಮಂತ್ರಿ ಗಮನಹರಿಸಬೇಕು ಎಂದು ಆಗ್ರಹಿಸಿದರು.
ರೈತರ ಹಿತ ಕಾಪಾಡಿ: ಇತ್ತೀಚಿಗೆ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶೀಘ್ರ ಬಗರ್ ಹುಕುಂ ಅಕ್ರಮ– ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಹೆಚ್ಚು ಅರ್ಜಿಗಳ ವಿಲೇವಾರಿ ಮಾಡಿದ ಅಧಿಕಾರಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ ರೈತರಿಗೆ ನ್ಯಾಯ ದೊರೆಯುವ ನಿಟ್ಟಿನಲ್ಲಿ ಹೊಸ ಸುತ್ತೋಲೆ ತೊಡಕುಂಟು ಮಾಡಿದ್ದು, ಈ ಬಗ್ಗೆ ಕಂದಾಯ ಸಚಿವರು ಗಮನ ಹರಿಸಬೇಕು ಎಂದು ಬಿ. ಶಿವರಾಂ ಮನವಿ ಮಾಡಿದರು.
ಬೆಳಗಾವಿ ಅಧಿವೇಶನಕ್ಕೂ ಮುನ್ನ ಬಗರ್ ಹುಕುಂ ನಿಯಮಾವಳಿ ಪರಿಷ್ಕರಣೆ ಮಾಡಬೇಕು. ಇಲ್ಲವಾದರೆ ಬೇಲೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.ಬಿ.ಶಿವರಾಂ ಮಾಜಿ ಸಚಿವ
ಹೊಸದಾಗಿ ತಂದಿರುವ ಸುತ್ತೋಲೆಯಂತೆ ಒಮ್ಮೆ ಮಂಜೂರಾದವರಿಗೆ ಮತ್ತೊಮ್ಮೆ ಮಂಜೂರಾತಿ ದೊರೆಯುತ್ತಿಲ್ಲ. ಅನುಭವದಲ್ಲಿ ಇರದಿರುವುದು ಹೆಚ್ಚುವರಿ ಭೂಮಿ ಹೊಂದುವುದು ಸಾಕಷ್ಟು ಗೋಮಾಳ ಇಲ್ಲ ಎಂಬ ಕಾರಣ ನೀಡಿ ಸಾವಿರಾರು ಅರ್ಜಿಗಳನ್ನು ಬೇಲೂರು ತಾಲ್ಲೂಕಿನಲ್ಲಿಯೇ ವಜಾ ಮಾಡಲಾಗಿದೆ ಎಂದು ಬಿ. ಶಿವರಾಂ ಆರೋಪಿಸಿದರು. ಈ ಹಿಂದೆ ಸಮಿತಿ ಮುಂದೆ ಬರುತ್ತಿದ್ದ ಅರ್ಜಿಗಳ ಪೈಕಿ ಶೇ 90 ರಷ್ಟು ಮಂಜೂರಾತಿ ದೊರೆಯುತ್ತಿತ್ತು. ಆದರೆ ಇತ್ತೀಚಿನ ಮಾನದಂಡಗಳಿಂದಾಗಿ ಶೇ 10ರಷ್ಟು ಪ್ರಗತಿ ಕಾಣುತ್ತಿಲ್ಲ. ಬೇಲೂರು ತಾಲ್ಲೂಕಿನಲ್ಲಿಯೇ ನಮೂನೆ 53ರಡಿ 4115 ಅರ್ಜಿಗಳು ಸಲ್ಲಿಕೆಯಾಗಿವೆ. ನಮೂನೆ 57ರಲ್ಲಿ 14229 ಸೇರಿದಂತೆ ಒಟ್ಟು 18344 ಅರ್ಜಿಗಳು ಸಲ್ಲಿಕೆಯಾಗಿದ್ದು ಈ ಪೈಕಿ ಕೇವಲ 549 ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.