ಹಳೇಬೀಡು: ದಿನದಿಂದ ದಿನಕ್ಕೆ ಜಮೀನು ಮಾಲೀಕರು ರಸ್ತೆಯನ್ನು ಒತ್ತುವರಿ ಮಾಡುತ್ತಿದ್ದು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಪರ್ಕ ರಸ್ತೆ ಕಿರಿದಾಗುತ್ತಿದೆ. ಹಳೇಬೀಡಿನಿಂದ ಚಿಕ್ಕಮಗಳೂರು ಜಿಲ್ಲೆಯ ವಡ್ಡರಹಳ್ಳಿ ಬೆಳವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕರಿಕಟ್ಟೆಹಳ್ಳಿ ಬಳಿ ಒತ್ತುವರಿ ಆಗುತ್ತಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ.
ರಸ್ತೆಯ ಎರಡೂ ಬದಿಯ ಚರಂಡಿ ದಾಟಿಕೊಂಡು ಜಮೀನುಗಳು ರಸ್ತೆ ಬದಿಯವರೆಗೂ ವಿಸ್ತರಣೆಯಾಗಿವೆ. ರಸ್ತೆ ಅಂಚಿನವರೆಗೂ ಬೆಳೆ ಮಾಡಿರುವುದರಿಂದ ಕಿರಿದಾದ ರಸ್ತೆಯಲ್ಲಿಯೇ ಆಟೊರಿಕ್ಷಾ, ಕಾರು, ಟ್ರಾಕ್ಟರ್ ಹಾಗೂ ಲಾರಿಗಳು ಸಂಚರಿಸುತ್ತಿವೆ. ಒತ್ತುವರಿ ಮುಂದುವರಿದರೆ ಈ ರಸ್ತೆ, ದ್ವಿಚಕ್ರ ವಾಹನಗಳ ಓಡಾಟಕ್ಕೆ ಮಾತ್ರ ಸಿಮೀತವಾಗುತ್ತದೆ. ಕಂದಾಯ ಇಲಾಖೆ ಒತ್ತುವರಿ ತೆರವು ಮಾಡದಿದ್ದರೆ, ಕಾಲ ಕ್ರಮೇಣ ರಸ್ತೆಯೇ ಇಲ್ಲದಂತಾಗಬಹುದು ಎಂದು ಬೆಳವಾಡಿ ಗ್ರಾಮದ ರೈತ ಬಸವೇಗೌಡ ಆತಂಕ ವ್ಯಕ್ತಪಡಿಸಿದರು.
‘ರಸ್ತೆ ಅಂಚಿನಲ್ಲಿ ಉಳುಮೆ ಮಾಡಿದರೆ ಮಣ್ಣು ಸಡಿಲವಾಗುತ್ತದೆ. ರಸ್ತೆ ಬದಿಗೆ ವಾಹನ ಇಳಿದರೆ, ಮುಂದೆ ಚಲಿಸುವುದಕ್ಕೆ ಕಷ್ಟವಾಗುತ್ತದೆ. ಮಳೆ ಬಂದಾಗ ರಸ್ತೆ ಅಂಚಿನ ಮಣ್ಣು ನೀರು ಕುಡಿದರೆ, ರಸ್ತೆ ಸಹ ಸಡಿಲವಾಗಿ ಹಾಳಾಗುವ ಸಾಧ್ಯತೆ ಇದೆ. ಈಗಾಗಲೇ ರಸ್ತೆಯಲ್ಲಿ ಡಾಂಬರ್ ಕಿತ್ತು ಬಂದಿದ್ದು, ಮುಂದಿನ ದಿನದಲ್ಲಿ ರಸ್ತೆಗೆ ತೊಡಕಾಗುವ ಸಾಧ್ಯತೆ ಇದೆ. ಒತ್ತುವರಿ ತೆರವುಗೊಳಿಸಬೇಕುಲ’ ಎಂದು ಆಗ್ರಹಿಸಿದರು.
ಬೆಳವಾಡಿ, ವಡ್ಡರಹಳ್ಳಿ, ಗೋವಿಂದಪುರ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಗ್ರಾಮಗಳ ಜನರು ವ್ಯವಹಾರಗಳಿಗೆ ಹಳೇಬೀಡನ್ನು ಅವಲಂಬಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅನೇಕ ರೈತರು ಕರೀಕಟ್ಟೆಹಳ್ಳಿ ಮೂಲಕ ಪ್ರತಿದಿನ ಹಳೇಬೀಡಿಗೆ ಬಂದು ಹೋಗುತ್ತಾರೆ. ಬೆಳವಾಡಿ ಹಾಗೂ ಸುತ್ತಲಿನ ಸಾಕಷ್ಟು ಮಂದಿ ಹಳೇಬೀಡು ಭಾಗದಲ್ಲಿ ಸಂಬಂಧಿಕರನ್ನು ಹೊಂದಿದ್ದಾರೆ.
‘ಪರಸ್ಪರ ಎದುರಿನಿಂದ ವಾಹನಗಳು ಬಂದಾಗ ರಸ್ತೆ ಬದಿಗೆ ಯಾವುದಾದರೂ ಒಂದು ವಾಹನ ಇಳಿಸಲು ಜಾಗ ಇಲ್ಲದಂತಾಗಿದೆ. ಎರಡೂ ವಾಹನಗಳ ಚಾಲಕರು ಪರಸ್ಪರ ಜಗಳ ಮಾಡುವುದು ಇಲ್ಲಿ ಮಾಮೂಲಿಯಾಗಿದೆ. ರಸ್ತೆ ಬದಿಗೆ ಇಳಿಸಲು ಜಾಗ ಸಿಗದೇ ಎರಡೂ ವಾಹನಗಳಿಗೆ ಪರಸ್ಪರ ಡಿಕ್ಕಿ ಸಂಭವಿಸುವ ಸಾಧ್ಯತೆ ಇದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ಭಾಗದಲ್ಲಿ ತರಕಾರಿ, ಜೋಳ, ರಾಗಿ, ಹತ್ತಿ, ಸೂರ್ಯಕಾಂತಿಯನ್ನು ರೈತರು ಬೆಳೆಯುತ್ತಾರೆ. ದವಸ ಧಾನ್ಯ ಸಾಗಿಸುವುದಕ್ಕೆ ಲಾರಿಗಳು, ಟ್ರಾಕ್ಟರ್‌ಗಳು ಸಂಚರಿಸುತ್ತವೆ. ರಸ್ತೆ ಒತ್ತುವರಿ ತೆರವುಗೊಳಿಸಿ, ವಿಸ್ತರಣೆ ಮಾಡಬೇಕು’ ಎನ್ನುವುದು ರೈತರು ಆಗ್ರಹ.
ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಳ್ಳಲು ಅಭ್ಯಂತರ ಇಲ್ಲ. ಚರಂಡಿ ಮುಚ್ಚಿ ರಸ್ತೆ ಅಂಚಿನವರೆಗೂ ಬೇಸಾಯ ಮಾಡಿದರೆ ಮಳೆ ನೀರು ಜಮೀನಿಗೆ ನುಗುತ್ತದೆ. ರೈತರು ಅರ್ಥ ಮಾಡಿಕೊಳ್ಳಬೇಕು.-ಬಸವೇಗೌಡ ರೈತ. ಬೆಳವಾಡಿ
ಒಬ್ಬರನ್ನು ನೋಡಿಕೊಂಡು ಮತ್ತೊಬ್ಬರು ರಸ್ತೆ ಅಂಚಿನವರೆಗೂ ಉಳಿಮೆ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಬೆಳೆ ಮೇಲೆ ವಾಹನಗಳು ಸಂಚರಿಸುವ ಸಾಧ್ಯತೆ ಇದೆ.-ಕೋದಂಡರಾಮು ವರ್ತಕ ವಡ್ಡರಹಳ್ಳಿ
ವಡ್ಡರಹಳ್ಳಿ ಬೆಳವಾಡಿ ರಸ್ತೆ ಒತ್ತುವರಿ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕಂದಾಯ ನಿರೀಕ್ಷಕ ಗ್ರಾಮ ಲೆಕ್ಕಾಧಿಕಾರಿ ಜತೆ ಮಾತನಾಡುತ್ತೇನೆ.-ಮೋಹನ್‌ಕುಮಾರ್ ಉಪ ತಹಶೀಲ್ದಾರ್ ಹಳೇಬೀಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.