ADVERTISEMENT

ಕೇಸರಿ ಬಣ್ಣ ತ್ಯಾಗ, ಶೌರ್ಯದ ಸಂಕೇತ, ಕುಮಾರಸ್ವಾಮಿ ಸಂಕೋಚ ಪಡಬೇಕಿಲ್ಲ: CT ರವಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 9:25 IST
Last Updated 3 ಫೆಬ್ರುವರಿ 2024, 9:25 IST
   

ಹಾಸನ: ‘ಕೇಸರಿ ಶಾಲು ಹಾಕಿದ್ದಕ್ಕೆ ಎಚ್.ಡಿ. ಕುಮಾರಸ್ವಾಮಿ ಸಂಕೋಚ ಪಡಬೇಕಿಲ್ಲ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಚ್‌.ಡಿ.ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದಿತ್ತು’ ಎಂಬ ಎಚ್.ಡಿ. ದೇವೇಗೌಡರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

‘ಅವರ ಪ‍ಕ್ಷದ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ. ಕೇಸರಿ ನಮ್ಮಲ್ಲರಿಗೂ ಪ್ರೇರಣೆ ಕೊಟ್ಟಿರುವ ಬಣ್ಣ. ಕೇವಲ ಬಣ್ಣ ಮಾತ್ರ ಅಲ್ಲ, ಸಾವಿರ ವರ್ಷದ ಪರಂಪರೆ ಇದೆ. ಭಗವಾ ಎಂದರೆ ತ್ಯಾಗ, ಶೌರ್ಯ, ಕೋಟ್ಯಂತರ ಜನರಿಗೆ ವಿಶ್ವಾಸ ತುಂಬಿದೆ. ಗುರು ಗೋವಿಂದ ಸಿಂಗ್, ಶಿವಾಜಿ ಮಹಾರಾಜರು ಬಳಸಿದ್ದು ಭಗವಾ ಧ್ವಜವನ್ನೇ. ಮಹಾಭಾರತದಲ್ಲಿ ಅರ್ಜುನನ ಧ್ವಜದ ಬಣ್ಣವೂ ಭಗವಾ ಇತ್ತು. ಅದು ತ್ಯಾಗದ ಸಂಕೇತವೂ ಹೌದು’ ಎಂದರು.

ADVERTISEMENT

‘ಋಷಿಮುನಿಗಳು ಅದನ್ನು ತ್ಯಾಗದ ಸಂಕೇತವಾಗಿ ಬಳಸಿದರೆ, ಕ್ಷತ್ರೀಯರು ಅದನ್ನು ಶೌರ್ಯದ ಸಂಕೇತವಾಗಿ ಬಳಸಿದರು. ಅದನ್ನು ಬಳಸಲು ನಮಗೇನೂ ಸಂಕೋಚ ಇಲ್ಲ. ನಮಗೆ ಹೆಮ್ಮೆ ಇದೆ. ಕುಮಾರಸ್ವಾಮಿ ಅವರೂ ಸಂಕೋಚ ಪಡಬೇಕಿಲ್ಲ. ಭಗವಾ ಹಾಕುವುದರಿಂದ ನಮಗೆ ಕೆಟ್ಟದಾಗಲ್ಲ, ಒಳ್ಳೆಯದೇ ಆಗುತ್ತದೆ’ ಎಂದು ಹೇಳಿದರು.

‘ಹಿಂದೂ ವಿರೋಧಿ ನೀತಿಯ ವಿರುದ್ಧ ಹಿಂದೂ ಸಂಘಟನೆಗಳು ಕೆರಗೋಡಿನಲ್ಲಿ ಪಾದಯಾತ್ರೆ ಆಯೋಜಿಸಿದ್ದರು. ಕೇವಲ ರಾಜಕೀಯ ಪಕ್ಷದ ನಾಯಕರು ಭಾಗವಹಿಸಿರಲಿಲ್ಲ. ಅದು ಹಿಂದೂ ಸಂಘಟನೆಗಳು ಕರೆಕೊಟ್ಟ ಪಾದಯಾತ್ರೆಯಾಗಿತ್ತು’ ಎಂದರು.

ಕಾಂಗ್ರೆಸ್‌ಗೆ ಒಟ್ಟುಗೂಡಿಸಿ ಅಭ್ಯಾಸವಿಲ್ಲ:

‘ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕು’ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ, ‘ಒಡೆದು ಆಳುವ ರಾಜಕಾರಣವನ್ನೇ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ಗೆ ಒಟ್ಟುಗೂಡಿಸಿ ಅಭ್ಯಾಸವೇ ಇಲ್ಲ’ ಎಂದರು.

‘ರಾಹುಲ್‌ಗಾಂಧಿ ಅವರ ಯಾತ್ರೆಗೆ ‘ಭಾರತ್ ತೋಡೊ ಯಾತ್ರೆ’ ಅಂತ ಇಟ್ಟಿದ್ದರೆ ಡಿ.ಕೆ.ಸುರೇಶ್ ಅವರ ಹೇಳಿಕೆಗಳಿಗೆ ತಾತ್ವಿಕವಾದ ಬಲ ಬರುತ್ತಿತ್ತು. ಜೋಡೊ ಅಂತ ಹೇಳುವ ಇವರು ಒಡೆಯುವ ಮಾತು ಆಡುತ್ತಾರೆ’ ಎಂದು ಟೀಕಿಸಿದರು.

‘ರಾಷ್ಟ್ರ ಒಡೆಯುವ ಮಾತನ್ನು ಡಿ.ಕೆ.ಸುರೇಶ್ ಹೇಳಿದರೆ, ಜಾತಿ- ಜಾತಿ ನಡುವೆ ಒಡೆಯುವ ರಾಜಕಾರಣವನ್ನು ಸಿದ್ದರಾಮಯ್ಯ ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಅವರು ಅಪರೂಪಕ್ಕೊಮ್ಮೆ ಮನುಷ್ಯತ್ವ ಇರಬೇಕು ಎನ್ನುತ್ತಾರೆ. ಆದರೆ ಮಾಡುವುದೆಲ್ಲ ಜಾತಿ ರಾಜಕಾರಣ’ ಎಂದು ವಾಗ್ದಾಳಿ ನಡೆಸಿದರು.

‘ಬಡವರು ಎಲ್ಲ ಜಾತಿಯಲ್ಲೂ ಇದ್ದಾರೆ. ಅವರು ಬಡವರ ಪರ ಏಕೆ ಯೋಚನೆ ಮಾಡುವುದಿಲ್ಲ. ಬಡವರ ಪರವಾಗಿ ಏಕೆ ಮಾತನಾಡುವುದಿಲ್ಲ ? ಜಾತಿಯನ್ನೆ ಇಟ್ಟುಕೊಂಡು ಏಕೆ ಮಾತನಾಡುತ್ತಾರೆ’ ಎಂದು ಪ್ರಶ್ನಿಸಿದರು.

‘ಎಲ್ಲ ಜಾತಿಯಲ್ಲೂ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಹಾಗಾದರೆ ಜಾತಿ ದ್ವೇಷ ಏಕೆ? ಜಾತಿ ದ್ವೇಷ, ಜಾತಿ ಒಡೆದು ರಾಜಕಾರಣ ಮಾಡುವುದು, ಭಾಷೆ ಹೆಸರಿನಲ್ಲಿ ರಾಜಕಾರಣ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಆ ಕಾಂಗ್ರೆಸ್ ಸಂಸ್ಕೃತಿಯನ್ನೇ ಡಿ.ಕೆ.ಸುರೇಶ್ ಹೇಳಿದ್ದಾರೆ’ ಎಂದರು.

‘ಸಂಕುಚಿತ ಮನೋಭಾವ ಇರುವವರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ. ದೇಶ ಒಡೆಯುತ್ತೇವೆ ಎಂದು ಹೊರಟ ಜಿನ್ನಾಗೆ ಇವರು ಬೆಂಬಲ ಕೊಟ್ಟರು. ಅದಾದ ನಂತರ ಸರ್ದಾರ್ ಪಟೇಲ್ ದೇಶವನ್ನು ಒಗ್ಗೂಡಿಸಿದರು’ ಎಂದರು.

‘ರಜಾಕಾರರು, ಹೈದರಾಬಾದ್ ನಿಜಾಮನ ಮನಸ್ಥಿತಿಯವರಂತೆ ಡಿ.ಕೆ.ಸುರೇಶ್, ಡಿ.ಕೆ. ಶಿವಕುಮಾರ್ ವರ್ತಿಸಬಾರದು. ಈ ರೀತಿ ವರ್ತಿಸಿದರೆ ನಿಜಾಮನನ್ನೇ ಬಗ್ಗು ಬಡಿದ ಸರ್ದಾರ್ ವಲ್ಲಭಭಾಯಿ ಪಟೇಲ್ ರೀತಿಯ ನೇತೃತ್ವ ಬಿಜೆಪಿಯಲ್ಲಿದೆ. ನಿಮ್ಮ ನಿಜಾಮಗಿರಿ ಇಲ್ಲಿ ನಡೆಯಲ್ಲ’ ಎಂದರು.

‘ಫೆ.7 ರಂದು ದೆಹಲಿಯಲ್ಲಿ ಅವರು ಪ್ರತಿಭಟನೆ ಮಾಡಲಿ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಅಂಕಿ-ಅಂಶಗಳನ್ನು ಮುಂದಿಟ್ಟು ಜನರಿಗೆ ಮನವರಿಕೆ ಮಾಡುತ್ತೇವೆ. ಅವರು ಹೇಳುವುದರಲ್ಲಿ ಎಷ್ಟು ಸತ್ಯ ಇದೆ, ಎಷ್ಟು ಸುಳ್ಳು ಎನ್ನುವುದನ್ನು ಜನರ ಮುಂದೆ ಇಡುತ್ತೇವೆ. ಇಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ. ಆದರೆ ದೇಶ ಒಡೆಯುವ ಹಕ್ಕಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.