ಸಕಲೇಶಪುರ: ವಿದ್ಯೆ ಕಲಿತ ಶಾಲೆ, ಕಲಿಸಿದ ಗುರು, ಬದುಕು ಕೊಟ್ಟ ತಂದೆ ತಾಯಿ, ಸಮಾಜವನ್ನು ಗೌರವಿಸುವ ಸಂಸ್ಕಾರವೇ ನಿಜವಾದ ಶಿಕ್ಷಣ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸಂತ ಜೋಸೆಫರ ವಿದ್ಯಾ ಸಂಸ್ಥೆಯ ವಾರ್ಷಿಕ ಕ್ರೀಡಾ ಕೂಟದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಜ್ಞಾನ ಸಂಪಾದನೆಗೆ ದೇಹ ಮತ್ತು ಮನಸು ಆರೋಗ್ಯವಾಗಿ ಇರಬೇಕು. ಯೋಗ, ಧ್ಯಾನ, ಕ್ರೀಡಾ ಚಟುವಟಿಕೆಗಳಿಂದ ದೇಹ ಮತ್ತು ಮನಸನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಎಸ್‌ಡಿಆರ್‌ಎಫ್ ಮಂಗಳೂರು ವಿಭಾಗದ ಡೆಪ್ಯೂಟಿ ಕಮಾಂಡರ್ ಎಂ.ಎ. ಶರತ್ ಮಾತನಾಡಿ, ಪಟ್ಟಣದಲ್ಲಿರುವ ಸಂತ ಜೋಸೆಫರ್ ವಿದ್ಯಾ ಸಂಸ್ಥೆ ಈ ಭಾಗದ ಜನರಿಗೆ ಶಿಕ್ಷಣ ಜ್ಯೋತಿಯಾಗಿದೆ. ಶತಮಾನದತ್ತ ಹೆಜ್ಜೆ ಹಾಕಿರುವ ಇದೇ ವಿದ್ಯಾ ಸಂಸ್ಥೆಯಲ್ಲಿ ವಿದ್ಯೆ ಕಲಿತೆ ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ. ಲಕ್ಷಾಂತ ಮಂದಿ ವಿದ್ಯೆ ಕಲಿತು, ಜಗತ್ತಿನಾದ್ಯಂತ ಬದುಕು ಕಟ್ಟಿಕೊಳ್ಳುವುದಕ್ಕೆ ಈ ಶಾಲೆ ಅಡಿಗಲ್ಲು ಆಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳದೆ, ಆಟ ಮತ್ತು ಪಾಠದ ಕಡೆ ಗಮನ ಹರಿಸಬೇಕು ಎಂದರು.
ಇಲ್ಲಿಯ ಚೆಸ್ಕಾಂ ಎಂಜಿನಿಯರ್ ನಿರಂಜನ್ ಮಾತನಾಡಿ, ಮಲೆನಾಡು ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳಿಗೆ ಸಂತ ಜೋಸೆಫರ ವಿದ್ಯಾ ಸಂಸ್ಥೆ ವರವಾಗಿದೆ. ನಾನು ಸಹ ಇದೇ ಶಾಲೆಯಲ್ಲಿ ಶಿಕ್ಷಣ ಪಡೆದು ಇದೇ ತಾಲ್ಲೂಕಿನ ಚೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶಕ್ಕೆ ಈ ಶಾಲೆ ಕಾರಣ ಎಂದರು. ಕಲಿತ ಶಾಲೆಯನ್ನು ಯಾರೂ ಮರೆಯಬೇಡಿ. ಶಾಲೆ ದೇವಾಲಯಕ್ಕಿಂತಲೂ ಶ್ರೇಷ್ಠ, ದೇವರನ್ನು ಕಾಣದೆ ನಂಬಿಕೆಯ ಮೇಲೆ ಭಕ್ತಿ ಇಡುತ್ತೇವೆ. ಶಾಲೆ ನಮ್ಮಗೆ ಬದುಕು ಕಟ್ಟಿಕೊಡುವುದರಿಂದ ಕಣ್ಣಿಗೆ ಕಾಣುವ ದೇವರಿದ್ದಂತೆ ಎಂದರು.
ಇದೇ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ಯಾದ್‌ಗಾರ್ ಇಬ್ರಾಹಿಂ ಮಾನಾಡಿ, ಅಂಕಪಟ್ಟಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದು ಮುಖ್ಯವಲ್ಲ, ಬದುಕಿನಲ್ಲಿ ಮೌಲ್ಯಗಳನ್ನು ಬೆಳೆಸಿಕೊಂಡು ಈ ಸಮಾಜದಲ್ಲಿ ಎಲ್ಲರಿಗೂ ಬೇಕಾಗುವ ವ್ಯಕ್ತಿಯಾಗಿ ಬೇಳೆಯುವುದು ಮುಖ್ಯ ಎಂದರು.
ಸಕಲೇಶಪುರ ದಯಾಳು ಮಾತೆ ದೇವಾಲಯದ ಧರ್ಮಗುರು ಸ್ವಾಮಿ ರಾಜೇಶ್ ಕೋರ್ಡೋಜ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಆರ್.ಎನ್. ಕೃಷ್ಣಮೂರ್ತಿ, ಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್ ಐಡಾ ಡಿ’ ಅಲ್ಮೇಡಾ, ಮುಖ್ಯ ಶಿಕ್ಷಕರಾದ ಸಿ. ಆಶಾ, ಸಿ. ಗೀತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.