ADVERTISEMENT

ಸರ್ಕಾರದ ಐದು ಗ್ಯಾರಂಟಿಗಳು ಲಂಚದಂತೆ: ಸಂತೋಷ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 21:02 IST
Last Updated 20 ಜುಲೈ 2023, 21:02 IST
ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ
ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ   

ಹಾಸನ: ‘ರಾಜ್ಯದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳು ಒಂದು ತರಹದ ಲಂಚ. ಮತ ಪಡೆಯಲು ಲಂಚ ಕೊಟ್ಟಿದ್ದಾರೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.

 ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ಗ್ಯಾರಂಟಿಗಳ ಬಗ್ಗೆ ಈ ಹಿಂದೆಯೇ ಪ್ರತಿಕ್ರಿಯೆ ನೀಡಿದ್ದೇನೆ. ಇದರ ಹೊಣೆ ಜನರ ಮೇಲೆ, ತೆರಿಗೆ ಕಟ್ಟುವವರ ಮೇಲೆ. ಈಗಾಗಲೇ ವಿದ್ಯುತ್‌ ದರ ಹೆಚ್ಚು ಮಾಡಿದ್ದಾರೆ. ಮುಂದೆ ಬಹಳಷ್ಟು ಆರ್ಥಿಕ ತೊಂದರೆ ಬರಬಹುದು. ಅದನ್ನೆಲ್ಲ ಅಧಿಕಾರಕ್ಕೆ ಬರಲು ದುರ್ಬಳಕೆ ಮಾಡಿದ್ದಾರೆ’ ಎಂದರು.

‘ಪ್ರತಿಪಕ್ಷದ ನಾಯಕ ಇಲ್ಲದೇ ಇರುವುದಕ್ಕೂ ಅಧಿವೇಶನಕ್ಕೂ ಸಂಬಂಧವಿಲ್ಲ. ಸಂವಿಧಾನದಲ್ಲೂ ವಿರೋಧ ಪಕ್ಷದ ನಾಯಕನಿಲ್ಲದೆ ಕಲಾಪಗಳು ನಡೆಯಬಾರದು ಎಂದು ಉಲ್ಲೇಖಿಸಿಲ್ಲ, ಎರಡು ತಿಂಗಳಾದರೂ ಆ ಹುದ್ದೆಗೆ ಆಯ್ಕೆ ಮಾಡದೇ ಇರುವುದನ್ನು ನೋಡಿದರೆ, ಆ ನಿರ್ಧಾರಕ್ಕೆ ಬರಲು ಧೈರ್ಯ ಅವರಿಗೆ ಇಲ್ಲ ಎಂದು ಕಾಣುತ್ತದೆ. ಆದರೆ, ಕಲಾಪಗಳು ವಿರೋಧ ಪಕ್ಷದ ನಾಯಕನಿಲ್ಲದೆ ಮುಂದುವರಿಯಬಹುದು’ ಎಂದು ತಿಳಿಸಿದರು.

ADVERTISEMENT

‘ಕೆಲ ಶಾಸಕರು ವಿಧಾನಸಭೆ ಉಪಸಭಾಧ್ಯಕ್ಷರ ಮೇಲೆ ವಿಧೇಯಕ ಪ್ರತಿಗಳನ್ನು ಹರಿದು ಬಿಸಾಡಿರುವುದು ಸಂಪೂರ್ಣ ಬೇಜವಾಬ್ದಾರಿ ವರ್ತನೆ. ವಿಧೇಯಕ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ವೇಳೆ, ನಿಮಗೆ ಸರಿ ಕಾಣದಿದ್ದರೆ ಅದಕ್ಕೆ ಬೇರೆ ದಾರಿ ಇರಬಹುದು, ಆದರೆ ಪ್ರತಿಭಟನೆ ಮಾಡಬಾರದು. ಕಲಾಪದ ಸಮಯ ಹಾಳು ಮಾಡಬಾರದು’ ಎಂದು ಹೆಗ್ಡೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.