ADVERTISEMENT

ಸಂತೋಷ್‌ ವಿಧಾನಸಭೆಗೆ, ಅಶೋಕ್‌ ಪರಿಷತ್‌ಗೆ: ಎಚ್.ಡಿ. ದೇವೇಗೌಡ ಘೋಷಣೆ

ಅರಸೀಕೆರೆಯ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಎಚ್.ಡಿ. ದೇವೇಗೌಡ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 14:21 IST
Last Updated 19 ಜನವರಿ 2024, 14:21 IST
ಅರಸೀಕೆರೆಯಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮಾತನಾಡಿದರು
ಅರಸೀಕೆರೆಯಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮಾತನಾಡಿದರು   

ಅರಸೀಕೆರೆ: ‘ನನ್ನ ಜೀವನದ ಕಡೆಯ ಘಟ್ಟದಲ್ಲಿ ಇದ್ದೇನೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ನಾನು ಹೋಗುವ ಮುಂಚೆ ಅರಸೀಕೆರೆಯಲ್ಲಿ ಯಾರನ್ನು ನಿಲ್ಲಿಸಬೇಕು ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಸಂತೋಷ್ ವಿಧಾನಸಭೆಗೆ ಹೋಗಲಿ, ಅಶೋಕ ವಿಧಾನ ಪರಿಷತ್‌ಗೆ ಹೋಗಲಿ ಎಂದು ಈ ಸಭೆಯ ಮೂಲಕ ಪ್ರತಿಯೊಬ್ಬರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

ನಗರದ ಎನ್.ಆರ್. ಸಂತೋಷ್ ಅವರ ನಿವಾಸದ ಬಳಿ ಶುಕ್ರವಾರ ನಡೆದ ಜೆಡಿಎಸ್ ಪಕ್ಷದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವೂ ನಮ್ಮ ಪಕ್ಷ ಅರಸೀಕೆರೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲ ವರ್ಗದವರಿಗೂ ಸಮಾನ ಅವಕಾಶ ಕೊಟ್ಟು ನಮ್ಮದೇ ಆದ ಕೊಡುಗೆ ನೀಡಿದ್ದೇವೆ’ ಎಂದರು.

ADVERTISEMENT

‘ವೀರಶೈವ ಲಿಂಗಾಯತ, ಯಾದವ, ಮುಸ್ಲಿಂ, ಕುರುಬ, ಪರಿಶಿಷ್ಟ ಜಾತಿ, ಪಂಗಡಗಳ ಜನರ ಕಲ್ಯಾಣಕ್ಕೆ ಹಗಲಿರುಳು ದುಡಿದಿದ್ದೇನೆ. ದಿ. ಡಿ.ಬಿ. ಗಂಗಾಧರಪ್ಪ, ಆನಿವಾಳ ನಂಜಪ್ಪರನ್ನು ವಿಧಾನಸಭೆಗೆ ಕಳುಹಿಸಲು ಹೋರಾಟ ನಡೆಸಿದ್ದೇನೆ. ಲಚ್ಚನಾಯ್ಕ್, ವತ್ಸಲ ಶೇಖರಪ್ಪ ಅವರಂತಹ ಹಲವರಿಗೆ ಜಿಲ್ಲಾ ಪಂಚಾಯಿತಿಯಲ್ಲಿ ಸ್ಥಾನಮಾನ ನೀಡುವಲ್ಲಿ ಪಕ್ಷ ಪ್ರಮುಖ ಪಾತ್ರ ವಹಿಸಿದೆ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಫಲ ನೀಡಿದೆ. ಹೀಗೆ ಎಲ್ಲ ಸಮುದಾಯಗಳ ಜನರ ಹಿತ ಬಯಸಿರುವ ತೃಪ್ತಿ ನನಗೆ ಇದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಜೆಡಿಎಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದು ಹೇಳಿದರು

ಎನ್ ಆರ್. ಸಂತೋಷ್ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನತೆ 80 ಸಾವಿರ ಮತ ಕೊಟ್ಟಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ಹಾಗೂ ತಾಲ್ಲೂಕಿನ ಸಮಸ್ಯೆಯಾದ ಬೆಂಡೇಕೆರೆ ಗ್ರಾಮದ ರೈತರಿಗಾಗಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಮಾಡುತ್ತೇನೆ. ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ತಾಲ್ಲೂಕಿನಲ್ಲಿ 1 ಲಕ್ಷಕ್ಕೂ ಅಧಿಕ ಮತವನ್ನು ಹಾಕಿಸಿ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸುತ್ತೇವೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವಾರ ಅಶೋಕ್, ವತ್ಸಲಾ ಶೇಖರಪ್ಪ ಮಾತನಾಡಿದರು. ಮುಖಂಡ ರಾಂಪುರ ಶೇಖರಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ನಗರಸಭೆ ಸದಸ್ಯ ಈಶ್ವರಪ್ಪ, ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್, ಹೊಸೂರು ಗಂಗಾಧರ್, ಶೇಖರ್ ನಾಯ್ಕ, ಕೆಂಕೆರೆ ಕೇಶವಮೂರ್ತಿ, ಪುಟ್ಟಸ್ವಾಮಿ, ದೇವಕುಮಾರ್, ಮಾಜಿ ಅಧ್ಯಕ್ಷ ಪಂಚಾಕ್ಷರಿ, ಭೋಜನಾಯ್ಕ್, ಬಸವಲಿಂಗಪ್ಪ ಭಾಗವಹಿಸಿದ್ದರು.

Quote - ದೇಶದ ಸಮಗ್ರ ಅಭಿವೃದ್ಧಿ ಕುರಿತು ಯೋಚಿಸಿದಾಗ ನರೇಂದ್ರ ಮೋದಿಯವರೇ ಸೂಕ್ತ ಎನಿಸುತ್ತದೆ. ಅವರ ಆಡಳಿತ ದೇಶವನ್ನು ಪ್ರಗತಿ ಪಥದತ್ತ ಸಾಗಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಚ್.ಡಿ. ದೇವೇಗೌಡ ಜೆಡಿಎಸ್‌ ವರಿಷ್ಠ

Cut-off box - ತಾರತಮ್ಯ ಮಾಡಿಲ್ಲ: ಪ್ರಜ್ವಲ್‌ ಆ ಸಮಾಜ ಈ ಸಮಾಜ ಎಂಬ ತಾರತಮ್ಯ ಮಾಡದೇ ಎಲ್ಲರನ್ನು ಸಮಾನರಾಗಿ ಕಾಣಬೇಕು ಎಂದು ದೇವೇಗೌಡರು ನನಗೆ ಹೇಳಿದ್ದಾರೆ. ಆ ಪ್ರಕಾರ ಯಾವ ಸಮುದಾಯಕ್ಕೂ ನಾವೂ ಅನ್ಯಾಯ ಮಾಡಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು. ಕೆಲವರು ಮಾತನಾಡುತ್ತಾರೆ. ಜಿಲ್ಲೆಗೆ ನಮ್ಮ ಕೊಡುಗೆ ಏನು ಎಂದು ಕೇಳುತ್ತಾರೆ. ರಸ್ತೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ₹ 8500 ಕೋಟಿ ಜಿಲ್ಲೆಗೆ ಕೊಟ್ಟಿದ್ದಾರೆ. ಜಿಲ್ಲೆಯ 4 ರೈಲು ನಿಲ್ದಾಣಗಳ ಅಭಿವೃದ್ದಿಗೆ ಅನುದಾಣ ಒದಗಿಸಲಾಗಿದೆ. ಅದರಲ್ಲೂ ಅರಸೀಕೆರೆಯಲ್ಲಿ ರೈಲ್ವೆ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಆರಂಭಗೊಂಡಿದೆ. ಈಗ 4 ಟ್ರ್ಯಾಕ್‌ ಇದ್ದು ಇನ್ನೂ ಎರಡು ಟ್ರ್ಯಾಕ್‌ ನಿರ್ಮಿಸಲಾಗುವುದು. ವಂದೇ ಭಾರತ್ ರೈಲು ನಿಲುಗಡೆಗಾಗಿ ರೈಲ್ವೆ ವಲಯ ಮಹಾಪ್ರಬಂಧಕರನ್ನು ಭೇಟಿ ಮಾಡಲು ತೀರ್ಮಾನಿಸಲಾಗಿದೆ. ಇದು ಕೇಂದ್ರ ಸರ್ಕಾರದ ಸಂಸದರ ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದರು. ವಿದ್ಯುತ್ ಪರಿವರ್ತಕ ಒದಗಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ನಾವು ಯಾವಾಗಲೂ ರೈತರ ಪರ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೆ ಕೆಲವರು ನಾವೇ ಎಲ್ಲವನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿ ಅರಸೀಕೆರೆ ಕ್ಷೇತ್ರದ ಜನತೆಯಿಂದ ನಮ್ಮನ್ನು ದೂರವಿಟ್ಟರು ಎಂದು ಶಾಸಕ ಶಿವಲಿಂಗೇಗೌಡರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.