ಹಾಸನ: ಒಂದು ವಾರದಿಂದ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಮಾದರಿಯಾಗಿದೆ.
ಒಂದು ದಶಕದಿಂದಲೂ ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರು, ಸರಾಗವಾಗಿ ದರ್ಶನ ಪಡೆಯಲು ವೃದ್ಧರು, ಅಂಗವಿಕಲರು ಹಾಗೂ ಇತರರಿಗೆ ನೆರವು ನೀಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಈ ತಂಡದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಏಕಲವ್ಯ ಓಪನ್ ಗ್ರೂಪ್, ಒಂಬತ್ತು ರೋವರ್ಸ್‌ಗಳ ತಂಡದೊಂದಿಗೆ ಸೇವೆ ಮಾಡುತ್ತಿದ್ದು, ಸುಮಾರು 1,400 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿತ್ಯ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಪಾಳಿಯಲ್ಲಿ ಕೆಲಸ ಮಾಡುತ್ತಿರುವ ತಂಡವು, ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ ಮತ್ತು ರೇಂಜರ್ಸ್‌ಗಳ ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್ ವೀರಭದ್ರಪ್ಪ ಅವರ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಸೇವೆ ಸಲ್ಲಿಸುತ್ತಿದೆ.
ಭಕ್ತಾದಿಗಳ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ತಂಡವನ್ನು ಮುನ್ನಡೆಸುತ್ತಿರುವ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ನೇತೃತ್ವದಲ್ಲಿ ಹಾಸನದಲ್ಲಿ ರಾಜ್ಯಮಟ್ಟದ ಶಿಬಿರವನ್ನು 2ನೇ ಬಾರಿ ಆಯೋಜಿಸುವ ಮೂಲಕ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಸೇವೆ ಒದಗಿಸುತ್ತಿದ್ದಾರೆ.
ರಾಜ್ಯದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ 22 ಜಿಲ್ಲೆಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಾರ್ಥಿಗಳು ಬಂದಿದ್ದಾರೆ.
ಇದೇ ಶಿಬಿರದಲ್ಲಿ ಎಎಸ್‌ಒ ಎಂ. ಪ್ರಿಯಾಂಕ ಹಾಗೂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ಖಜಾಂಚಿ ರಮೇಶ್ ಹಾಗೂ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ನಿರಂತರ ಶ್ರಮಿಸುತ್ತಿದ್ದಾರೆ. ಈ ಶಿಬಿರದ ಉಸ್ತುವಾರಿಯನ್ನು ರಾಜ್ಯ ಸಹ ಕಾರ್ಯದರ್ಶಿ ಎಲ್.ಟಿ. ಲೋಕೇಶ್ ವಹಿಸಿಕೊಂಡಿದ್ದು, ಸೇವಾ ಶಿಬಿರದಲ್ಲಿ ಏಕಲವ್ಯ ಓಪನ್ ಗ್ರೂಪ್‌ನ ಎಲ್ಲ ರೋವರ್, ಸ್ಕೌಟ್ಸ್ ಲೀಡರ್‌ಗಳು ಸೇವೆಯಲ್ಲಿ ನಿರತರಾಗಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಂಡವು ಸೇವಾ ಶಿಬಿರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಶಿಬಿರಾರ್ಥಿಗಳಲ್ಲಿ ಶ್ರದ್ಧೆ ನಿಷ್ಠೆ ಸೇವಾ ಮನೋಭಾವ ರೂಢಿಸಿಕೊಳ್ಳಲು ಸಹಕಾರಿಯಾಗಿದೆ.ಡಾ.ವೈ.ಎಸ್. ವೀರಭದ್ರಪ್ಪ, ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ
12 ವರ್ಷದಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡ ಸೇವೆ ನೀಡುತ್ತಿದ್ದು. ಜಿಲ್ಲಾಡಳಿತವೂ ಅವಕಾಶ ನೀಡುತ್ತಿದೆ. ಈ ಬಾರಿ ಶಿಬಿರಾರ್ಥಿಗಳಿಗೆ ಊಟ ವಸತಿಯೊಂದಿಗೆ ಅಚ್ಚುಕಟ್ಟಾದ ಸೌಕರ್ಯ ಒದಗಿಸಿದೆ.ಆರ್.ಜಿ. ಗಿರೀಶ್, ಏಕಲವ್ಯ ಗ್ರೂಪ್ ಲೀಡರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.