ಹಾಸನ: ಸ್ವಯಂ ಉದ್ಯೋಗದಿಂದ ಮಹಿಳೆಯರ ಸ್ವಾವಲಂಬಿ ಬದುಕು ಹಾಗೂ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಶಾಸಕ ಸ್ವರೂಪ ಪ್ರಕಾಶ್ ಹೇಳಿದ್ದಾರೆ.
ತಾಲೂಕಿನ ದೇವರಕೊಪ್ಪಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ - ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ್ದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಸಂಜೀವಿನಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತ ಎಂಬ ಕಾಲ ಮರೆಯಾಗಿದೆ. ಮಹಿಳೆಯರು ಕೂಡ ಪುರುಷರಂತೆ ಸಮಾನಾಗಿ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ವ್ಯಾಪಾರ, ಕೈಗಾರಿಕೆ ಯಂತಹ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿಯೂ ಉತ್ತಮ ಸ್ಥಾನಮಾನಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿಕೊಡಲು ಮಾರಾಟ ಮೇಳ ಆಯೋಜಿಸಲು ಸರ್ಕಾರದಿಂದ ನಿಯಮಗಳಿವೆ. ಸರಿಯಾದ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಮಾತನಾಡಿ, ಮಹಿಳಾ ಒಕ್ಕೂಟದ ಸದಸ್ಯರು ಮನೆಯಲ್ಲೇ ಹಲವು ಉತ್ಪನ್ನ ಗಳನ್ನು ಉತ್ಪಾದನೆ ಮಾಡುತ್ತಾರೆ. ಆದರೆ ಮಾರಾಟ ಮಾಡಲು ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕರ ಸಹಕಾರದಿಂದ 17.5 ಲಕ್ಷ ಅನುದಾನದಲ್ಲಿ ಈಗಾಗಲೇ ಸಂಜೀವಿನಿ ಭವನ ಉದ್ಘಾಟನೆ ಮಾಡಲಾಗಿದ್ದು ಇದು ಮಹಿಳಾ ಸಹಕಾರ ಸಂಘಗಳ ಸದಸ್ಯರು ಉತ್ಪಾದಿಸುವ ಉತ್ಪನ್ನಗಳ ಮಾರಾಟಕ್ಕೆ ವೇದಿಕೆಯಾಗಲಿದೆ.ತಾಲೂಕಿನಲ್ಲಿ 6 ಭವನಗಳನ್ನು ಸ್ಥಾಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.
ನರೇಗಾ ಸಹಾಯಕ ನಿರ್ದೇಶಕರಾದ ದಿನೇಶ್.ಎಇಇ ಪುರುಷೋತ್ತಮ್. ವೇಣುಗೋಪಾಲ್. ಒಕ್ಕೂಟದ ಅಧ್ಯಕ್ಷೆ ಸವಿತಾ. ಗ್ರಾಮದ ಮುಖಂಡರಾದ ಶಾಂತೇಗೌಡ, ಕೃಷ್ಣೇ ಗೌಡ ,ಬೆಟ್ಟೇಗೌಡ, ಗೋವಿಂದರಾಜು, ಪಿಡಿಓ ಶಿವಾನಂದ್, ಕಾರ್ಯದರ್ಶಿ ಕೃಷ್ಣೇಗೌಡ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.