ADVERTISEMENT

ಅಶ್ಲೀಲ ವಿಡಿಯೋ ಹಂಚಿಕೆ: ಕ್ರಮಕ್ಕೆ ಒತ್ತಾಯಿಸಿದ ಜೆಡಿಎಸ್ ಮುಖಂಡ ಕವನ್ ಗೌಡ

​ಪ್ರಜಾವಾಣಿ ವಾರ್ತೆ
Published 2 ಮೇ 2024, 14:17 IST
Last Updated 2 ಮೇ 2024, 14:17 IST

ಹಾಸನ: ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದವರು ಹಾಗೂ ಸಂತ್ರಸ್ತ ಮಹಿಳೆಯರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಮುಖಂಡ  ಕವನ್ ಗೌಡ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಮಾಹಿತಿ ತಂತ್ರಜ್ಞಾನ ಅಧಿನಿಯಮ 2000 ಕಲಂ 67 ಎ ಅಡಿ ಈ ಕೃತ್ಯ ಎಸಗಿದವರಿಗೆ ಐದು ವರ್ಷಗಳ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದರು.

ವಿಡಿಯೋ ಹಂಚುವವರು ಅದರಲ್ಲಿರುವ ಮಹಿಳೆಯರ ಗುರುತು ಮರೆ ಮಾಡಿಲ್ಲ. ಇದರಿಂದ ಅವರ ಗೌರವಕ್ಕೆ ಧಕ್ಕೆ ಬಂದಿದೆ. ಈ ಪ್ರಕರಣ ಸಂಬಂಧ ನವೀನ್ ಗೌಡ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೂ ಆತನನ್ನು ವಶಕ್ಕೆ ಪಡೆದಿಲ್ಲ. ಆತನಿಗೆ ವಿಡಿಯೋಗಳು ಹೇಗೆ ಸಿಕ್ಕವು. ಆತನಿಗೆ ಆಶ್ರಯ ನೀಡಿದ್ದು ಯಾರು ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಕೂಡ ಈಗ ಬಹಿರಂಗವಾಗಿದೆ. ಮಹಿಳಾ ಆಯೋಗದವರು ಈಗ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷ ವಿಡಿಯೋ ಪ್ರಕರಣ ಸಂಬಂಧ ಈಗಾಗಲೇ ಕ್ರಮ ಜರುಗಿಸಿದೆ. ಕಾಂಗ್ರೆಸ್ ಕೂಡ ಕೂಡಲೇ ಶಾಸಕ ಇಕ್ಬಾಲ್ ಅವರನ್ನು ಅಮಾನತು ಮಾಡಬೇಕು. ನವೀನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಯಾರೂ ವಿಡಿಯೋಗಳನ್ನು ಹಂಚುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು. ವಿಡಿಯೋ ಫಾರ್ವರ್ಡ್ ಮಾಡುವ ವಿಷಯದಲ್ಲಿ ಎಲ್ಲರೂ ಸ್ವಯಂ ನಿಯಂತ್ರಣ ಅಳವಡಿಸಿಕೊಂಡು ಮಹಿಳೆಯರ ಮಾನ ಹಾನಿ ಆಗುವುದನ್ನು ತಡೆಗಟ್ಟಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ರೋಹಿತ್, ರಂಜಿತ್ ಕ್ಯಾಮನಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.