ADVERTISEMENT

ನನಗೂ ಏಕವಚನದಲ್ಲಿ ಮಾತನಾಡುವುದು ಗೊತ್ತು: ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 7:25 IST
Last Updated 23 ಏಪ್ರಿಲ್ 2023, 7:25 IST
ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಎಂ. ಶಿವಲಿಂಗೇಗೌಡ
ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಎಂ. ಶಿವಲಿಂಗೇಗೌಡ   

ಅರಸೀಕೆರೆ: ‘ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ರೋಡ್ ಶೋದಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಅವರು ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು, ನನ್ನ ಮೇಲೆ ಕೆಲವು ಸುಳ್ಳು ಆಪಾದನೆ ಮಾಡಿರುವುದನ್ನು ಸಹಿಸಲಾರೆ. ರೇವಣ್ಣ ನನ್ನನ್ನು ಕಳ್ಳ ಎಂದು ಸಂಬೋಧಿಸಿದ್ದಾರೆ. ನಾನೂ ಎಚ್.ಡಿ. ರೇವಣ್ಣ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಅನಿವಾರ್ಯವಾಗುತ್ತದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ. ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವೇಗೌಡರು ನನ್ನ ಬಗ್ಗೆ ಏನೇ ಅಂದರೂ ಅದನ್ನು ನನ್ನ ಆಶೀರ್ವಾದ ಎಂದುಕೊಳ್ಳುತ್ತೇನೆ. ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಮುಖ ನೋಡಿ ಯಾರೂ ಮತ ಹಾಕುವುದಿಲ್ಲ ಎಂದು ನಾನು ಹೇಳಿದ್ದೇನೆ ಎಂಬುದು ಸುಳ್ಳು’ ಎಂದರು.

‘ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ನನ್ನ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರನ್ನು ಬಿಟ್ಟು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಭೆ ನಡೆಸುವ ಅನಿವಾರ್ಯತೆ ಏನಿತ್ತು? ಹಾಸನದಲ್ಲಿ ನಡೆದ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ನನ್ನನ್ನು, ಶಿವಲಿಂಗೇಗೌಡ ಒಬ್ಬ ನಾಟಕಕಾರ ಎಂದು ಎಚ್.ಡಿ. ದೇವೇಗೌಡರು ಏಕೆ ಮಾತನಾಡಬೇಕಿತ್ತು? ಇದನ್ನು ಮೊದಲು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

’ತೆಂಗಿನ ಬೆಳೆ ಹಾನಿಯಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ ರೈತರಿಗೆ ಪರಿಹಾರ ಕೊಡಿಸಲು ಕ್ಷೇತ್ರದ ರೈತರೊಂದಿಗೆ ಅಮರಣಾಂತ ಸತ್ಯಾಗ್ರಹ ಧರಣಿ ಕುಳಿತು ಹೋರಾಟ ಮಾಡಿದ್ದೆ. ಕ್ಷೇತ್ರದ ತೆಂಗು ಬೆಳೆಗಾರರಿಗೆ ಸರ್ಕಾರದಿಂದ ₹38 ಕೋಟಿ ರೂಪಾಯಿ ಪರಿಹಾರ ಕೊಡಿಸಿದ್ದನ್ನೇ, ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನು ನಾಟಕಕಾರ ಎಂದಿದ್ದು ಮನಸ್ಸಿಗೆ ನೋವಾಗಿದೆ. ಹಾಗಾದರೆ ಎಚ್.ಡಿ. ದೇವೇಗೌಡರಿಗೆ ನನ್ನ ಕ್ಷೇತ್ರದ ರೈತರು ಮತ್ತು ತೆಂಗು ಬೆಳೆಗಾರರ ಬಗ್ಗೆ ಕಾಳಜಿ ಇರಲಿಲ್ವಾ? ಕಾಳಜಿ ಇದ್ದಿದ್ದರೆ ನನ್ನ ಅಮರಣಾಂತ ಸತ್ಯಾಗ್ರಹವನ್ನು ನಾಟಕ ಎನ್ನುತ್ತಿರಲಿಲ್ಲ’ ಎಂದರು.

‘ನನ್ನನ್ನು ನಾಟಕಕಾರ, ಕಳ್ಳ ಎನ್ನುವ ನಿಮಗೆ, ನನ್ನಂಥ ನಾಟಕಕಾರ ಏಕೆ ಬೇಕು? ನನ್ನ ತಂಟೆಗೆ ಏಕೆ ಬರುತ್ತೀರಾ? ನಿಮ್ಮ ಪಾಡಿಗೆ ನೀವಿರಿ. ನನ್ನ ಪಾಡಿಗೆ ನಾನಿರುತ್ತೇನೆ. ಜೆಡಿಎಸ್‌ನವರು ನನ್ನನ್ನು ಬೆಳೆಸಿಲ್ಲ. ಕ್ಷೇತ್ರದ ಜನರ ಆಶೀರ್ವಾದ ಹಾಗೂ ನನ್ನ ಪರಿಶ್ರಮದಿಂದ ನಾನು ಬೆಳೆದಿದ್ದೇನೆ’ ಎಂದರು.

‘ಈ ಚುನಾವಣೆಯಲ್ಲಿ ಜೆಡಿಎಸ್‌ನವರು ತಮ್ಮ ತಾಕತ್ತು ತೋರಿಸಲಿ. ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚು ಮತ ಹಾಕಿಸುತ್ತಿದ್ದೆ. ಇನ್ನು ಜೆಡಿಎಸ್‌ಗೆ ಮತ ಹಾಕಿಸಿಕೊಳ್ಳಲಿ ನೋಡೋಣ‘ ಎಂದು ಕೆ.ಎಂ. ಶಿವಲಿಂಗೇಗೌಡ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.