ADVERTISEMENT

ಹಾಸನ | ಗುಂಡಿನ ದಾಳಿ ಪ್ರಕರಣ: ನಂಬಿಸಿ ಶರಾಫತ್‌ ಅಲಿ ಕೊಲೆ; ಪತ್ನಿಯ ದೂರು

ಗುಂಡಿನ ದಾಳಿ: ರಿಯಲ್‌ ಎಸ್ಟೇಟ್‌ ವ್ಯವಹಾರವೇ ಕಾರಣ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 13:41 IST
Last Updated 21 ಜೂನ್ 2024, 13:41 IST
Pavitra Bhat
   Pavitra Bhat

ಹಾಸನ: ‘ಇಲ್ಲಿನ ಹೊಯ್ಸಳ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರವೇ ಕಾರಣ’ ಎಂದು ಘಟನೆಯಲ್ಲಿ ಮೃತಪಟ್ಟಿರುವ ಅರಾಫತ್‌ ಅಲಿ ಅವರ ಪತ್ನಿ ಖುರತ್‌ ಮಸಿಹಾ ದೂರಿದ್ದಾರೆ.

ನಗರದ ಹಾಸನ ಬಡಾವಣೆ ಠಾಣೆಗೆ ದೂರು ನೀಡಿರುವ ಅವರು, ‘ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಉಂಟಾದ ಮನಸ್ತಾಪದ ದ್ವೇಷದಿಂದ, ಪುನಃ ಒಟ್ಟಿಗೆ ವ್ಯವಹಾರ ಮಾಡೋಣವೆಂದು ನಂಬಿಸಿದ ಆಸೀಫ್‌, ತನ್ನ ಪತಿಯನ್ನು ಕೊಲೆ ಮಾಡಿ, ತಾನೂ ಅದೇ ರಿವಾಲ್ವಾರ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ಶರಾಫತ್ ಆಲಿ ಉತ್ತರಪ್ರದೇಶ ರಾಜ್ಯದ ಸಹಾರನ್‍ಪುರ ಜಿಲ್ಲೆಯ ಖಾನ್ಪುರ ಗ್ರಾಮದವರಾಗಿದ್ದು, 30 ವರ್ಷಗಳಿಂದ ಹಾಸನದಲ್ಲಿ ವ್ಯವಹಾರ ಮಾಡಿಕೊಂಡಿದ್ದರು. 15 ವರ್ಷಗಳ ಹಿಂದೆ ಶರಾಫ್‌ತ್‍ ಅಲಿ ಅವರು ಖುರತ್‌ ಮಸಿಹಾ ಅವರೊಂದಿಗೆ ವಿವಾಹವಾಗಿದ್ದರು. ಮದುವೆ ಆದಾಗಿನಿಂದ ರಿಯಲ್‍ಎಸ್ಟೇಟ್ ವ್ಯವಹಾರದ ಜೊತೆಗೆ ಶುಂಠಿ ವ್ಯಾಪಾರ ಮಾಡುತ್ತಿದ್ದರು.

ADVERTISEMENT

ಹಾಸನದ ಫಯಾಜ್ ಅಹ್ಮದ್ ಷರೀಫ್ ಎಂಬುವವರ ಅಳಿಯ, ಬೆಂಗಳೂರಿನ ಆಸೀಫ್‌ ಅಲಿ ಅವರೊಂದಿಗೆ ಶರಾಫತ್‌ ಅಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. 9 ವರ್ಷಗಳ ಹಿಂದೆ ಇಬ್ಬರ ನಡುವೆ ಹೊಂದಾಣಿಕೆಯಾಗದೆ ವ್ಯವಹಾರ ನಿಲ್ಲಿಸಿದ್ದರು. ಆಸಿಫ್‍, ಶರಾಫತ್‍ ಅಲಿ ಅವರಿಗೆ ₹40 ಲಕ್ಷ ಕೊಡಬೇಕಾಗಿತ್ತು. ಈ ಬಗ್ಗೆ ಶರಾಫತ್‍ ಅಲಿ ಹಾಗೂ ಅವರ ಪತ್ನಿ ಆಸೀಫ್‌ ಅವರ ಮನೆಗೆ ಹೋಗಿ ಮಾತನಾಡಿದ್ದರು. ಹಣದ ಬದಲು ಅರಸೀಕೆರೆಯಲ್ಲಿರುವ ಸೈಟ್ ಅನ್ನು ಆಸೀಫ್‌, ಶರಾಫ್‌ತ್‍ ಅಲಿ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಟ್ಟಿದ್ದರು.

ಇದಾದ ನಂತರ 8-9 ವರ್ಷಗಳಿಂದ ಇಬ್ಬರ ನಡುವೆ ಮಾತುಕತೆ ಇರಲಿಲ್ಲ. ರಂಜಾನ್‍ಗಿಂತ ತಿಂಗಳು ಮುಂಚೆ ಕುಟುಂಬ ಸಮೇತ ಕೇರಳಕ್ಕೆ ಹೋಗಿದ್ದ ಸಮಯದಲ್ಲಿ ಆಸೀಫ್‌ ಅವರು, ಶರಾಫತ್‍ ಅಲಿ ಅವರಿಗೆ ಕರೆ ಮಾಡಿದ್ದರು. ‘ನನ್ನನ್ನು ಕ್ಷಮಿಸು, ನನ್ನಿಂದಲೇ ತಪ್ಪಾಗಿದೆ. ನಾನು ವ್ಯವಹಾರಿಕವಾಗಿ ತೊಂದರೆಯಲ್ಲಿದ್ದೇನೆ. ಒಟ್ಟಿಗೆ ವ್ಯವಹಾರ ಮಾಡೋಣ’ ಎಂದು ಹೇಳಿದ್ದ ಆಸೀಫ್‌, ಆಗಾಗ ಕರೆ ಮಾಡಿ ಮಾತನಾಡುತ್ತಿದ್ದರು.

ಇದೇ ಸಮಯದಲ್ಲಿ, ‘ಹಾಸನದಲ್ಲಿ ಪ್ರಾಪರ್ಟಿ ಇದೆ. ಯಾರಾದರೂ ಇದ್ದರೆ ತೋರಿಸು’ ಎಂದು ಆಸೀಫ್‌ ಹೇಳಿದ್ದು, ಅದರಂತೆ ಅರಾಫತ್‌ ಅಲಿ ನಿವೇಶನ ಮಾರಿಸಲು ಮುಂದಾಗಿದ್ದರು. ಗುರುವಾರ ಮಧ್ಯಾಹ್ನ ಮನೆಗೆ ಬಂದ ಅರಾಫತ್‌  ಅಲಿ, ಕಾರು ತೆಗೆದುಕೊಂಡು ಹೋಗಿದ್ದರು. ಅದಾದ ನಂತರ ಹೊಯ್ಸಳ ಬಡಾವಣೆಯಲ್ಲಿ ಗುಂಡಿನ ದಾಳಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.