ಚಿದಂಬರಪ್ರಸಾದ
ಹಾಸನ: ಕಳೆದ ಬಾರಿ ಅತಿವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡ ರೈತರು, ಈ ಬಾರಿ ಮಳೆಯ ಕೊರತೆಯಿಂದ ನಷ್ಟ ಅನುಭವಿಸುವಂತಾಗಿದೆ. ಮೇ ನಲ್ಲಿ ಆರಂಭವಾಗುತ್ತಿದ್ದ ಜಿಲ್ಲೆಯ ಪ್ರಮುಖ ಬೆಳೆ ಆಲೂಗಡ್ಡೆ ಬಿತ್ತನೆಗೆ ಹಿನ್ನಡೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 9.7 ಸೆಂ.ಮೀ. ವಾಡಿಕೆ ಮಳೆ ಇದ್ದು, ಇದುವರೆಗೆ 3 ಸೆಂ.ಮೀ. ಮಳೆ ಬಿದ್ದಿದೆ. ಈ ಬಾರಿ ಮುಂಗಾರು ಪೂರ್ವ ಮಳೆ ಕೊರತೆಯಾಗಿದ್ದು, ಉಷ್ಣಾಂಶದಲ್ಲಿ ಏರಿಕೆಯಾಗಿದ್ದರಿಂದ ಆಲೂಗಡ್ಡೆ ಬಿತ್ತನೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ಈ ವರ್ಷ ಏಪ್ರಿಲ್‍ನಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಇಡೀ ತಿಂಗಳು ಬಿಸಿಲಿನ ಧಗೆಯೇ ಹೆಚ್ಚಿತ್ತು. ಹಾಗಾಗಿ ಜಲಾಶಯ ಹಾಗೂ ಕೆರೆಗಳಲ್ಲಿ ನೀರೂ ಕಡಿಮೆಯಾಗಿದ್ದು, ಮಳೆಯನ್ನೇ ಅವಲಂಬಿಸುವಂತಾಗಿದೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರೆ, ಈ ವೇಳೆಗೆ ಆಲೂಗಡ್ಡೆ ಬಿತ್ತನೆ ಪ್ರಾರಂಭವಾಗುತ್ತಿತ್ತು.
ಈಗಾಗಲೇ ರೈತರು ಭೂಮಿಯನ್ನು ಹದಗೊಳಿಸಿ ಸಿದ್ದಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಆಲೂಗಡ್ಡೆ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ನಗರದ ಎಪಿಎಂಸಿಯಲ್ಲಿ ಮಾರಾಟ ಪ್ರಕ್ರಿಯೆಯೂ ಆರಂಭವಾಗಿದೆ.
ಪ್ರತಿ ವರ್ಷ ಮೇ 15 ರಿಂದ ಮೇ 25 ರೊಳಗೆ ಹಾಸನ ತಾಲ್ಲೂಕಿನ ದುದ್ದ, ಶಾಂತಿಗ್ರಾಮ, ಸಾಲಗಾಮೆ ಹಾಗೂ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯ ಪೂರ್ಣಗೊಳ್ಳುತ್ತಿತ್ತು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ್ದರಿಂದ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರು ಮಳೆಯ ನಿರೀಕ್ಷೆಯಲ್ಲಿ ಕುಳಿತಿದ್ದಾರೆ. ಕೆಲವೆಡೆ ಮಳೆಯಾಗಿದ್ದರೂ, ಭೂಮಿಯಲ್ಲಿ ಹದ ಇಲ್ಲದೇ ಇರುವುದರಿಂದ ಇನ್ನೂ ಬಿತ್ತನೆ ಆರಂಭಿಸಿಲ್ಲ.
ಬೀಜದ ಬೆಲೆ ಇಳಿಕೆ: ರಾಜ್ಯದಲ್ಲೇ ಅತಿ ಹೆಚ್ಚು ಆಲೂಗಡ್ಡೆ ಬೆಳೆಯುವ ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಹಾಸನ ಎಪಿಎಂಸಿಯಿಂದಲೇ ಆಲೂಗಡ್ಡೆ ಬೀಜ ಪೂರೈಕೆಯಾಗುತ್ತದೆ. ಈಗಾಗಲೇ ವರ್ತಕರು ಪಂಜಾಬಿನ ಜಲಂಧರ್‌ನಿಂದ ಕುಪ್ರಿಜ್ಯೋತಿ ಹಾಗೂ ಹಿಮಾಲಿನಿ ತಳಿ ಸೇರಿದಂತೆ ಒಟ್ಟು ನಾಲ್ಕು ಲಕ್ಷ ಚೀಲ ಬಿತ್ತನೆ ಆಲೂಗಡ್ಡೆ ತರಿಸಿ ಶೀತಲೀಕರಣ ಘಟಕದಲ್ಲಿ ಇರಿಸಿದ್ದಾರೆ.
ಅದರಲ್ಲಿ ಒಂದು ಲಕ್ಷ ಚೀಲ (ಒಂದು ಚೀಲದಲ್ಲಿ 50 ಕೆ.ಜಿ.) ಬಿತ್ತನೆ ಆಲೂಗಡ್ಡೆ ಹೊರತೆಗೆದಿದ್ದು, ಇದುವರೆಗೆ 60 ಸಾವಿರ ಚೀಲದಷ್ಟು ಮಾರಾಟ ಮಾಡಲಾಗಿದೆ. ಜಿಲ್ಲಾಡಳಿತ ವರ್ತಕರು ಹಾಗೂ ರೈತ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ, ಕ್ವಿಂಟಲ್‌ಗೆ ₹1,500 ರಿಂದ ₹1,600 ದರ ನಿಗದಿಪಡಿಸಿದೆ.
ಮಳೆಯ ಕೊರತೆಯಿಂದ ರೈತರು ಬಿತ್ತನೆ ಆಲೂಗಡ್ಡೆ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಇದೀಗ ವರ್ತಕರೇ ದರ ಕಡಿಮೆ ಮಾಡಿದ್ದಾರೆ. ₹1,300 ರಿಂದ ₹ 1,500 ರವರೆಗೆ ಮಾರಾಟ ಮಾಡಲಾಗುತ್ತಿದೆ.
ಮಳೆಯ ನಿರೀಕ್ಷೆಯಲ್ಲಿ ರೈತರು: ಈ ಬಾರಿಯ ಮುಂಗಾರು ಹಂಗಾಮಿನ ಆಲೂಗಡ್ಡೆ ಬೀಜದ ಮಾರಾಟ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ, ಮಳೆ ನಿರೀಕ್ಷೆಯಲ್ಲಿರುವ ರೈತರು, ಬಿತ್ತನೆ ಕಾರ್ಯ ಪ್ರಾರಂಭಿಸಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
22 ಸಾವಿರ ಟನ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಇದು 15 ಸಾವಿರ ಹೆಕ್ಟೇರ್‌ಗೆ ಸಾಕಾಗಲಿದೆ. ಮಳೆ ಕೊರತೆಯಿಂದ ಬಿತ್ತನೆ ಶುರುವಾಗಿಲ್ಲ. 2–3 ಮಳೆಯಾದಲ್ಲಿ ಬಿತ್ತನೆ ಆರಂಭವಾಗಬಹುದು.ಪ್ರಭುರಾಜ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಹಾಸನ
2 ದಿನಗಳಿಂದ ಉತ್ತಮ ಮಳೆಯಾಗಿದ್ದರೂ ಬಿತ್ತನೆಯ ಹದವಿಲ್ಲ. 3–4 ಹದ ಮಳೆಯಾದರೆ ಉಳುಮೆ ಮಾಡಿ ಬಿತ್ತನೆ ಮಾಡಬಹುದು. ಮಳೆ ವಿಳಂಬವಾಗಿದ್ದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.ದರ್ಶನ್ ಆಲೂರು ತಾಲ್ಲೂಕು ಮರಸು ಹೊಸಳ್ಳಿ ರೈತ
ಕಳೆದ ವರ್ಷ ಅಪಾರ ಪ್ರಮಾಣದ ಮಳೆ ಸುರಿದಿದ್ದರಿಂದ ಬಹುತೇಕ ಆಲೂಗಡ್ಡೆ ಬೆಳೆ ನಾಶವಾಗಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದ ಆಲೂಗಡ್ಡೆ ಬಿತ್ತನೆಗೆ ಹಿನ್ನಡೆ ಉಂಟಾಗಿದೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ 6970.47 ಹೆಕ್ಟೇರ್ ಹಾಗೂ ಹಿಂಗಾರು ಹಂಗಾಮಿನಲ್ಲಿ 345.60 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗಿತ್ತು. ಮಳೆಯಿಂದಾಗಿ ಒಟ್ಟು 5650 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಆಲೂಗಡ್ಡೆ ನಾಶವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.