ADVERTISEMENT

ಶ್ರವಣಬೆಳಗೊಳ: ಸಂಭ್ರಮದ ದಶ ಲಕ್ಷಣ ಮಹಾಪರ್ವ

24 ತೀರ್ಥಂಕರರಿಗೆ ಸಂಭ್ರಮದ ಕಲ್ಪಧ್ರುಮ ಮಹಾಭಿಷೇಕ

ಬಿ.ಪಿ.ಜಯಕುಮಾರ್‌
Published 23 ಸೆಪ್ಟೆಂಬರ್ 2024, 7:00 IST
Last Updated 23 ಸೆಪ್ಟೆಂಬರ್ 2024, 7:00 IST
<div class="paragraphs"><p>ಶ್ರವಣಬೆಳಗೊಳದ ಭಂಡಾರ ಬಸದಿಯಲ್ಲಿ ದಶ ಲಕ್ಷಣ ಮಹಾಪರ್ವದ ಸಮಾರೋಪ ಸಮಾರಂಭದಲ್ಲಿ ಸಹಸ್ರಕೂಟ ಜಿನಬಿಂಬಕ್ಕೆ ಅಷ್ಟಗಂಧಾಭಿಷೇಕ ನೆರವೇರಿತು.</p></div>

ಶ್ರವಣಬೆಳಗೊಳದ ಭಂಡಾರ ಬಸದಿಯಲ್ಲಿ ದಶ ಲಕ್ಷಣ ಮಹಾಪರ್ವದ ಸಮಾರೋಪ ಸಮಾರಂಭದಲ್ಲಿ ಸಹಸ್ರಕೂಟ ಜಿನಬಿಂಬಕ್ಕೆ ಅಷ್ಟಗಂಧಾಭಿಷೇಕ ನೆರವೇರಿತು.

   

ಶ್ರವಣಬೆಳಗೊಳ: ಇತಿಹಾಸ ಪ್ರಸಿದ್ಧ ಭಂಡಾರ ಬಸದಿಯ ಹರಿಪೀಠದಲ್ಲಿ ವಿರಾಜಮಾನರಾಗಿ ಖಡ್ಗಾಸದಲ್ಲಿರುವ ಚವ್ವೀಸ ತೀರ್ಥಂಕರರಿಗೆ ಏಕಕಾಲದಲ್ಲಿ ಕಲ್ಪಧ್ರುಮ ಮಹಾಭಿಷೇಕ ಮತ್ತು ಹುಳ್ಳ ಸಭಾ ಮಂಟಪದಲ್ಲಿ ದಶ ಧರ್ಮಗಳ ದಶ ಲಕ್ಷಣ ಮಹಾಪರ್ವವು ಶ್ರದ್ಧಾ ಭಕ್ತಿ ಪೂರ್ವಕವಾಗಿ ಸಂಪನ್ನಗೊಂಡಿತು.

10 ದಿನಗಳ ಕಾಲ ಜರುಗಿದ ಅದ್ದೂರಿಯ ಧರ್ಮ ಪ್ರಭಾವನೆಯ ಸ್ಮರಣೀಯ ಕಾರ್ಯಕ್ರಮವು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನ ಮತ್ತು ಚಾತುರ್ಮಾಸ್ಯ ಆಚರಿಸಿದ ತ್ಯಾಗಿಗಳ ಸಮ್ಮುಖದಲ್ಲಿ ನೆರವೇರಿತು.

ADVERTISEMENT

ದಶ ಧರ್ಮಗಳಾದ ಉತ್ತಮ ಕ್ಷಮಾ, ಉತ್ತಮ ಮಾರ್ಧವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ, ಉತ್ತ,ಮ ಬ್ರಹ್ಮಚರ್ಯ ಧರ್ಮಗಳ ದಶ ಲಕ್ಷಣ ಮಹಾಪರ್ವವು ಮಹತ್ವಪೂರ್ಣವಾಗಿದೆ. ಇದನ್ನು ಜೈನ ಧರ್ಮೀಯರು ರಾಜ ಪರ್ವವೆಂದು ಕರೆಯುತ್ತಾರೆ.

ಕ್ಷೇತ್ರದಲ್ಲಿ ವರ್ಷಾಯೋಗ ಚಾತುರ್ಮಾಸ್ಯ ಆಚರಿಸುತ್ತಿರುವ ಅನುಪಮಕೀರ್ತಿ ಮಹಾರಾಜ್, ದಿವ್ಯಸಾಗರ ಮಹಾರಾಜ್, ಕ್ಷುಲ್ಲಕ ಮಲ್ಲಿಸಾಗರ ಮಹಾರಾಜ್, ಆರ್ಯಿಕಾ ನಿರ್ಮಲಮತಿ ಮಾತಾಜಿ ಸೇರಿದಂತೆ ಇತರೆ ತ್ಯಾಗಿಗಳ, ವಿದ್ವಾಂಸರಿಂದ ಇಲ್ಲಿನ ಹುಳ್ಳ ಸಭಾ ಮಂಟಪದಲ್ಲಿ ದಶ ಲಕ್ಷಣ ಪರ್ವದ ದಶ ಧರ್ಮಗಳ ಕುರಿತು ಪ್ರವಚನ, ಪರಸ್ಪರ ಕ್ಷಮಾವಾಣಿ, ಆಚರಿಸುವುದರೊಂದಿಗೆ 10 ಧರ್ಮಗಳ ದಶ ಲಕ್ಷಣ ಮಹಾಪರ್ವ ಗುರುವಾರ ಮುಕ್ತಾಯವಾಯಿತು.

ಕ್ಷೇತ್ರದಲ್ಲಿ ಪ್ರತಿವರ್ಷ ಭಾದ್ರಪದ ಶುದ್ಧ ಪಂಚಮಿಯಿಂದ ಚತುರ್ದಶಿ ತನಕ ಜೈನ ಧರ್ಮೀಯರು 10 ದಿನಗಳ ಕಾಲ ಈ ಪರ್ವವನ್ನು ಶ್ರದ್ಧಾ ಭಕ್ತಿ, ವ್ರತ ನಿಯಮ, ಉಪವಾಸಗಳ ಪೂರ್ವಕವಾಗಿ ವೈಭವದಿಂದ ಆಚರಿಸುತ್ತಾರೆ. ಈ ಸಲ ರಾಜ್ಯದ ಎಲ್ಲ ಜಿಲ್ಲೆಗಳ ಮತ್ತು ಅನೇಕ ರಾಜ್ಯಗಳ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಶ್ರವಣಬೆಳಗೊಳದ ಭಂಡಾರ ಬಸದಿಯಲ್ಲಿರುವ ಚವ್ವೀಸ ತೀರ್ಥಂಕರರಿಗೆ ಕಲ್ಪಧ್ರುಮ ಪೂಜೆಯ ಅಷ್ಟಗಂಧದ ಪೂಜೆ ನೆರವೇರಿಸಲಾಯಿತು.

ದಾನ ಪಾದಪೂಜೆ ಸನ್ಮಾನ

ಸಾನಿಧ್ಯ ವಹಿಸಿದ್ದ ಮುನಿ ಮಹಾರಾಜರಿಗೆ ಕಂಬಹಳ್ಳಿ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಅಭಿನವ ಚಾರುಕೀರ್ತಿ ಶ್ರೀಗಳು ಪಾದಪೂಜೆ ನೆರವೇರಿಸಿದರು. ತ್ಯಾಗಿಗಳಿಗೆ ನೋಂಪಿ ಮಾಡಿದ ವ್ರತಿಕರಿಂದ ಪಾದಪೂಜೆ ವಸ್ತ್ರ ಶಾಸ್ತ್ರದಾನ ಮಾಡಲಾಯಿತು. ಕ್ಷೇತ್ರದ ವತಿಯಿಂದ ವಿಶೇಷವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಧಕರಿಗೆ ಶಾಸ್ತ್ರೀಯ ಸಂಗೀತ ವರ್ಗದವರಿಗೆ ಕಲೆ ಸಾಹಿತ್ಯ ಸೇವೆ ಸಲ್ಲಿಸಿದವರಿಗೆ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. 24 ತೀರ್ಥಂಕರರ ಕಲ್ಪಧ್ರುಮ ಮಹಾಪೂಜೆ ಪೂಜಾಷ್ಟಕಗಳು ಸಾಂಗ್ಲಿಯ ಕುಬೇರ್ ಚೌಗಲೆಯವರ ಸಂಗೋತದೊಂದಿಗೆ ನೆರವೇರಿತು. ಸಮವಸರಣ ಮಂಟಪದಲ್ಲಿ ಶ್ರುತಪೂಜೆ ನಡೆಯಿತು. ನಿತ್ಯವೂ ಧಾರ್ಮಿಕ ರಸಪ್ರಶ್ನೆ ಆರತಿ ಕಲಾವಿದರಿಂದ ನೃತ್ಯಸೇವೆ ಗುರುವಾರ ಕಲಾತಂಡಗಳೊಂದಿಗೆ ಸ್ವರ್ಣ ರಥದಲ್ಲಿ ಅನಂತನಾಥ ಸ್ವಾಮಿಯ ಮೆರವಣಿಗೆ ಗಮನ ಸೆಳೆದವು.

ದಶ ಧರ್ಮಗಳು ಯಾರಲ್ಲೂ ಕ್ರೋಧವನ್ನು ಮಾಡದೇ ಸರ್ವ ಜೀವಿಗಳಲ್ಲಿ ಕ್ಷಮೆಯನ್ನು ಯಾಚಿಸುವುದೇ ಕ್ಷಮಾಧರ್ಮ. ಅಹಂಕಾರವನ್ನು ಸರ್ವತ್ರವಾಗಿ ತ್ಯಜಿಸುವುದು ಮಾರ್ಧವ ಧರ್ಮ. ಮನ ವಚನ ಕಾಯಗಳಿಂದ ವಂಚನೆ ಮೋಸ ಮಾಡದಿರುವುದೇ ಆರ್ಜವ ಧರ್ಮ. ಅತಿಯಾಸೆಯನ್ನು ತ್ಯಜಿಸುವುದೇ ಶೌಚ ಧರ್ಮ. ಎಲ್ಲರಲ್ಲೂ ಹಿತ– ಮಿತ ಪ್ರಿಯ ಸತ್ಯ ವಚನಗಳನ್ನಾಡುವುದು ಸತ್ಯಧರ್ಮ. ಇಂದ್ರೀಯಗಳನ್ನು ನಿಗ್ರಹಿಸಿಕೊಂಡು ಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಳ್ಳುವುದು ಸಂಯಮ ಧರ್ಮ. ಎಲ್ಲ ಪಾಪ ಕರ್ಮಗಳ ನಿರ್ಜರೆಗಾಗಿ ಆತ್ಮನಲ್ಲಿ ಲೀನವಾಗುವುದು ತಪಧರ್ಮ. ಅಂತರಂಗದಲ್ಲಿ ಮಾನ– ಕಷಾಯಗಳನ್ನು ತ್ಯಜಿಸುವುದು ಮತ್ತು 4 ಪ್ರಕಾರದ ದಾನಗಳು ತ್ಯಾಗ ಧರ್ಮ. ಎಲ್ಲ ತರಹದ ಪರಿಗ್ರಹಗಳನ್ನು ತ್ಯಾಗ ಮಾಡುವುದೇ ಆಕಿಂಚನ್ಯ ಧರ್ಮ. ಇಂದ್ರಿಯಗಳ ವಿಜಯವನ್ನು ಸಾಧಿಸುವುದೇ ಬ್ರಹ್ಮಚರ್ಯ ಧರ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.