ADVERTISEMENT

ಶ್ರವಣಬೆಳಗೊಳ: ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 7:41 IST
Last Updated 27 ಮಾರ್ಚ್ 2023, 7:41 IST
   

ಶ್ರವಣಬೆಳಗೊಳ (ಹಾಸನ): ಇಲ್ಲಿನ ದಿಗಂಬರ ಜೈನಮಠದ ನೂತನ ಪೀಠಾಧಿಕಾರಿಯಾಗಿ ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾಕರ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವವು ಸೋಮವಾರ ನೆರವೇರಿತು.

ಸ್ವರ್ಗೀಯ ಸ್ವಸ್ತಿಶ್ರೀ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರದ ಸ್ವಸ್ತಿಶ್ರೀ ಆಗಮಕೀರ್ತಿ ಸ್ವಾಮೀಜಿ, ಸಕಲ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಟ್ಟವನ್ನು ಅಲಂಕರಿಸಿದರು.

ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಅರಹಂತಗಿರಿಯ ಧವಲಕೀರ್ತಿ ಸ್ವಾಮೀಜಿ, ಆರತಿಪುರದ ಸಿದ್ಧಾಂತ ಕೀರ್ತಿ ಸ್ವಾಮೀಜಿ, ಸೋಂದಾ ಜೈನ ಮಠದ ಭಟ್ಟಾಕಲಂಕ ಸ್ವಾಮೀಜಿ, ಕನಕಗಿರಿಯ ಭುವನಕೀರ್ತಿ ಸ್ವಾಮೀಜಿ, ಕಂಬದಹಳ್ಳಿಯ ಭಾನುಕೀರ್ತಿ ಸ್ವಾಮೀಜಿ, ಕಾರ್ಕಳದ ಲಲಿತಕೀರ್ತಿ ಸ್ವಾಮೀಜಿ, ಎನ್‌.ಆರ್‌.ಪುರದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆಯ ಚಾರುಕೀರ್ತಿ ಸ್ವಾಮೀಜಿ, ದೇಶದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ADVERTISEMENT

ಪೂರ್ವಾಶ್ರಮದಲ್ಲಿ ಆಗಮ ಇಂದ್ರ ಆಗಿದ್ದ ಅವರು, ಅಭಿನವ ಸ್ವಸ್ತಿಶ್ರೀ ಆಗಮ ಕೀರ್ತಿ ಭಟ್ಟಾರಕ ಸ್ವಾಮೀಜಿಯಾಗಿ ಪೀಠಾರೋಹಣ ಮಾಡಿದರು. ನಾಲ್ಕು ತಿಂಗಳ ಹಿಂದೆಯೇ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಇವರಿಗೆ ವಿಚಾರಪಟ್ಟ ಕ್ಷುಲ್ಲಕ ದೀಕ್ಷೆ ನೀಡಿದ್ದು, ಆಗಮ ಕೀರ್ತಿ ಎಂದು ನಾಮಕರಣ ಮಾಡಿದ್ದರು. ತಮ್ಮ ಬಳಿಯೇ ಇರಿಸಿಕೊಂಡು ಮಠದ ಪರಂಪರೆ, ಸಂಸ್ಕಾರ, ಕ್ಷೇತ್ರದ ಪರಿಚಯ ಮಾಡಿಸಿದ್ದರು.

ನೂತನ ಶ್ರೀಗಳ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲು, ಶುಕ್ರವಾರ (ಮಾ.24) ನಡೆದ ವಿನಯಾಂಜಲಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಇದೀಗ ಕಾರ್ಯಕ್ರಮ ನೆರವೇರಿಸಿದ್ದು, ಸಾರ್ವಜನಿಕ ಸಮಾರಂಭವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಹೊಂಬುಜ ಮಠದ ದೇವೇಂದ್ರ ಕೀರ್ತಿ ಭಟ್ಟಾರ ಸ್ವಾಮೀಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.