ಹೊಳೆನರಸೀಪುರ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ತಂಡ, ಶನಿವಾರ ಇಲ್ಲಿನ ಎಚ್.ಡಿ. ರೇವಣ್ಣ ಅವರ ನಿವಾಸದಲ್ಲಿ ಸ್ಥಳ ಮಹಜರು ನಡೆಸಿತು.
ಡಿವೈಎಸ್‍ಪಿ ಸತ್ಯ ನಾರಾಯಣ್ ಸಿಂಗ್, ಸುಮಾರಾಣಿ ನೇತೃತ್ವದಲ್ಲಿ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪುತ್ರಿಯೊಂದಿಗೆ ಮೂರು ವಾಹನಗಳಲ್ಲಿ ಬಂದ ಎಸ್‌ಐಟಿ ತಂಡದ ಜೊತೆ ಹಾಸನ ಎಎಸ್ಪಿ ತಮ್ಮಯ್ಯ ಹಾಗೂ ಸ್ಥಳೀಯ ಪೊಲೀಸರು ಇದ್ದರು.
‘ರೇವಣ್ಣ ಅವರ ನಿವಾಸದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ನನ್ನ ಮಗಳ ಜೊತೆಗೂ ವಿಡಿಯೊ ಕಾಲ್ ಮಾಡಿ, ಅಸಭ್ಯವಾಗಿ ಪ್ರಜ್ವಲ್ ಮಾತನಾಡುತ್ತಿದ್ದರು’ ಎಂದು ಮಹಿಳೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಹೊಳೆನರಸೀಪುರಕ್ಕೆ ಭೇಟಿ ನೀಡಿದ ತಂಡ ರೇವಣ್ಣ ಅವರ ಮನೆಯ ಅಡುಗೆ ಮನೆ, ಬೆಡ್ ರೂಂ, ಸ್ಟೋರ್ ರೂಂ ಸೇರಿದಂತೆ ಮನೆಯ ಎಲ್ಲೆಡೆ ಶೋಧ ನಡೆಸಿತು.
ಬೆಳಿಗ್ಗೆ 11.30ಕ್ಕೆ ರೇವಣ್ಣ ಅವರ ಮನೆಗೆ ಬಂದ ಎಸ್‌ಐಟಿ ತಂಡದ ಸದಸ್ಯರು, ಸಂಜೆ 4.30 ರವರೆಗೆ ಮನೆಯ ಒಳಗೆ ಹಾಗೂ ಹೊರಗೆ ಇಂಚಿಂಚು ಜಾಗವನ್ನೂ ಪರಿಶೀಲಿಸಿದರು.
ಮಹಜರು ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಮಾಡಲಾಗಿದ್ದು, ಪಂಚನಾಮೆ ಬಳಿಕ ಸ್ಥಳದಲ್ಲಿಯೇ ಸಂತ್ರಸ್ತೆಯರ ಹೇಳಿಕೆ ದಾಖಲು ಮಾಡಿಕೊಂಡರು. ಸ್ಥಳ ಮಹಜರು ವೇಳೆಯಲ್ಲಿ ರೇವಣ್ಣ ಅವರ ಪತ್ನಿ ಭವಾನಿ ಮನೆಯಲ್ಲಿಯೇ ಇದ್ದರು. ಸಂತ್ರಸ್ತೆಯರ ಹೇಳಿಕೆ ದಾಖಲಿಸಿಕೊಳ್ಳಲು ಪಟ್ಟಣದ ಪೊಲೀಸರು ಸಿಪಿಯು, ಮಾನಿಟರ್, ಪ್ರಿಂಟರ್ ಕೊಂಡೊಯ್ದು ವ್ಯವಸ್ಥೆ ಮಾಡಿದ್ದರು. ರೇವಣ್ಣ ಪರ ವಕೀಲರು, ಜೆಡಿಎಸ್ ನಾಯಕರು ಸ್ಥಳದಲ್ಲಿ ಹಾಜರಿದ್ದರು.
ಭವಾನಿ ಅವರಿಗೆ ಪ್ರಸಾದ ನೀಡಲು ಬಂದಿದ್ದ ಹರದನಹಳ್ಳಿ ದೇವೇಶ್ವರ ದೇವಾಲಯದ ಅರ್ಚಕರನ್ನು ತಡೆದ ಪೊಲೀಸರು, ಬ್ಯಾಗ್ ಪರಿಶೀಲನೆ ನಡೆಸಿದ ನಂತರ ಮನೆಯೊಳಗೆ ಬಿಟ್ಟರು.
ಊರು ಬಿಟ್ಟ ಸಂತ್ರಸ್ತೆಯರು
ಎಸ್‌ಐಟಿ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ ಹಲವು ಸಂತ್ರಸ್ತೆಯರು ತಮ್ಮ ಊರುಗಳನ್ನು ತೊರೆದು ಬೇರೆಡೆ ತೆರಳಿದ್ದಾರೆ. ವಿಡಿಯೊಗಳಲ್ಲಿ ಕಾಣಿಸಿಕೊಂಡಿರುವ ಹಲವು ಮಹಿಳೆಯರು ತಮ್ಮ ಊರುಗಳಿಂದ ಹೊರಗೆ ಹೋಗಿದ್ದು ಎಲ್ಲಿದ್ದಾರೆ ಎಂಬ ಮಾಹಿತಿಯೂ ಸಿಗುತ್ತಿಲ್ಲ. ಎಸ್‌ಐಟಿ ತಂಡ ಕೆಲವರನ್ನು ಸಂಪರ್ಕಿಸಿದ್ದು ತನಿಖೆಗೆ ಸಹಕರಿಸುವಂತೆ ಕೇಳಿಕೊಂಡಿದೆ. ಆದರೆ ಸಂತ್ರಸ್ತೆಯರು ಸಹಕಾರ ನೀಡುತ್ತಿಲ್ಲ. ಬದಲಾಗಿ ‘ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟು ಬಿಡಿ. ಈಗಾಗಲೇ ಸಾಕಷ್ಟು ನೊಂದಿದ್ದೇವೆ ಎಂದು ಮನವಿ ಮಾಡುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.