ಅರಸೀಕೆರೆ: ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಸೂಚಿಸುವ ಮೂಲಕ ಮಾಜಿ ಸಚಿವ ಬಿ.ಶಿವರಾಂ ಅಚ್ಚರಿ ಮೂಡಿಸಿದ್ದಾರೆ.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರು ಸಮರ್ಥ ಅಭ್ಯರ್ಥಿ ಎನ್ನುವ ಪ್ರಶ್ನೆ ನಮ್ಮಲ್ಲಿದೆ. ಜನಾಭಿಪ್ರಾಯ ಸಂಗ್ರಹಿಸಿದ್ದೇವೆ. ಇಡೀ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಮರ್ಥರು ಎನ್ನುವ ಅಭಿಪ್ರಾಯ ಬರುತ್ತಿದೆ. ಎಲ್ಲರ ಪರವಾಗಿ ಅವರ ಹೆಸರನ್ನು ಸೂಚಿಸುತ್ತಿದ್ದೇನೆ’ ಎಂದು ತಿಳಿಸಿದರು.
‘ಈ ವಿಷಯದಲ್ಲಿ ಅವರನ್ನು ಕೇಳಿಲ್ಲ. ಇದು ಜನಾಭಿಪ್ರಾಯ. ಹೈಕಮಾಂಡ್ ಗಮನಕ್ಕೂ ತರುತ್ತೇನೆ. ಯಾವ ಜಿಲ್ಲೆಯಲ್ಲಿ ಸಮರ್ಥ ಅಭ್ಯರ್ಥಿ ಇಲ್ಲವೋ, ಅಲ್ಲಿ ಸಚಿವರನ್ನು ಕಣಕ್ಕಿಳಿಸಲು ಹೈಕಮಾಂಡ್ ತೀರ್ಮಾನಿಸಿದೆ’ ಎಂದರು.
‘ಶಿವಲಿಂಗೇಗೌಡರು ಜೆಡಿಎಸ್ ಬಿಟ್ಟು ಬಂದು ಗೆದ್ದಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಮಣಿಸಲೇಬೇಕೆಂದರೆ ಅವರಿಗಿಂತ ಸಮರ್ಥ ಅಭ್ಯರ್ಥಿ ಇಲ್ಲ. ಜೆಡಿಎಸ್-ಬಿಜೆಪಿ ಒಂದಾಗಿವೆ. ಆ ಕುಟುಂಬದ ವಿರುದ್ಧ ಯಾರಾದರೊಬ್ಬ ಸಮರ್ಥ ಅಭ್ಯರ್ಥಿ ಇದ್ದರೆ ಶಿವಲಿಂಗೇಗೌಡರು ಮಾತ್ರ’ ಎಂದರು.
‘ಒಂದು ಹೆಜ್ಜೆ ಮುಂದಿಡಲೂ ಸಂಪನ್ಮೂಲ ಅವಶ್ಯ. ಸಾಕಷ್ಟು ಸಂಪನ್ಮೂಲ ಇರುವುದು ಶಿವಲಿಂಗೇಗೌಡರ ಹತ್ತಿರ ಮಾತ್ರವೇ’ ಎಂದರು.
‘40 ವರ್ಷ ರಾಜಕೀಯದಲ್ಲಿ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ನನಗೂ ಅಧಿಕಾರ ವಂಚನೆ ಆಗುತ್ತಿದೆ. ಮೂಲೆ ಗುಂಪಾಗುತ್ತಿದ್ದೇನೆ ಎನಿಸುತ್ತಿದೆ. ಏನೇ ಇದ್ದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲೇಬೇಕು’ ಎಂದು ಹೇಳಿದರು.
ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿರುವ ಶಿವರಾಂ ಅವರಿಂದ ಈ ರೀತಿಯ ಹೇಳಿಕೆ ಬಂದಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.