ಹಾಸನ: ‘ಯಡಕುಮೇರಿ–ಕಡಗರವಳ್ಳಿ ನಡುವಿನ ಭೂಕುಸಿತದ ಸ್ಥಳದಲ್ಲಿ ಮೂರು ಏಜೆನ್ಸಿಗಳ ಪ್ರತಿನಿಧಿಗಳು ತಾಂತ್ರಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆ ಹಾಗೂ ರೈಲುಗಳ ಸಂಚಾರಕ್ಕೆ ಅನುಕೂಲವಾಗುವಂತೆ ದುರಸ್ತಿ ಮಾಡುವುದೇ ಪ್ರಥಮ ಆದ್ಯತೆ’ ಎಂದು ನೈರುತ್ಯ ರೈಲ್ವೆ ಮಹಾಪ್ರಬಂಧಕ ಅರವಿಂದ ಶ್ರೀವಾತ್ಸವ ತಿಳಿಸಿದರು.
ಭೂಕುಸಿತದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ದುರಸ್ತಿ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದ ಅವರು, ‘ಪ್ರಯಾಣಿಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸಲು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಭೂಕುಸಿತದ ಸ್ಥಳ ಸುರಕ್ಷಿತ ಎಂದು ಖಚಿತವಾದ ನಂತರವೇ ರೈಲುಗಳ ಸಂಚಾರ ಆರಂಭಿಸಲಾಗುವುದು. ದುರಸ್ತಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ’ ಎಂದರು.
ವಿಶೇಷ ರೈಲಿನಲ್ಲಿ ಭಾನುವಾರ ರಾತ್ರಿ ಹುಬ್ಬಳ್ಳಿಯಿಂದ ಹೊರಟು ಸೋಮವಾರ ಬೆಳಿಗ್ಗೆ 9 ಗಂಟೆಗೆ ಅವರು ಭೂಕುಸಿತ ಸ್ಥಳಕ್ಕೆ ತಲುಪಿದರು. ಹಿರಿಯ ರೈಲ್ವೆ ಅಧಿಕಾರಿಗಳು ಹಾಜರಿದ್ದರು.
ನಿರಂತರ ಭೂಕುಸಿತ: ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ರಾಷ್ಟ್ರೀಯ ಹೆದ್ದಾರಿ –75 ರಲ್ಲಿ ಮಣ್ಣು ಕುಸಿಯುತ್ತಲೇ ಇದೆ. ಸ್ಥಳದಲ್ಲಿ ಎರಡು ಜೆಸಿಬಿಗಳನ್ನು ನಿಯೋಜಿಸಿದ್ದು, ಮಣ್ಣನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.