ADVERTISEMENT

ಹಾಸನ: ಬಿತ್ತನೆ ಬೀಜಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ

ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಬೀಜ, ಗೊಬ್ಬರ ದಾಸ್ತಾನು: ಜುಲೈ ಅಂತ್ಯಕ್ಕೆ ಶೇ 75 ರಷ್ಟು ಬಿತ್ತನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 7:25 IST
Last Updated 1 ಜುಲೈ 2024, 7:25 IST
ಹಿರೀಸಾವೆಯ ರೈತ ಸಂಪರ್ಕ ಕೇಂದ್ರದಲ್ಲಿ ರಾಗಿ ಸೇರಿದಂತೆ ಬಿತ್ತನೆ ಬೀಜಗಳ ದಾಸ್ತಾನು ಇಡಲಾಗಿದೆ
ಹಿರೀಸಾವೆಯ ರೈತ ಸಂಪರ್ಕ ಕೇಂದ್ರದಲ್ಲಿ ರಾಗಿ ಸೇರಿದಂತೆ ಬಿತ್ತನೆ ಬೀಜಗಳ ದಾಸ್ತಾನು ಇಡಲಾಗಿದೆ    

ಹಾಸನ: ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಕಾರ್ಯವು ಚುರುಕುಗೊಂಡಿದ್ದು, ರೈತ ಸಂಪರ್ಕ ಕೇಂದ್ರ, ಕೆಎಸ್ಎಸ್‌ಸಿಎನ್ಎಸ್‌ಸಿ ಹಾಗೂ ಸ್ಥಳೀಯ ಕೃಷಿ ಇಲಾಖೆಗೆ ಬಂದು ರೈತರು ಬಿತ್ತನೆ ಬೀಜ ಖರೀದಿಯಲ್ಲಿ ನಿರತರಾಗಿದ್ದಾರೆ.

ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಪೂರೈಕೆ ಮಾಡುತ್ತಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ದರದಲ್ಲಿ ಏರಿಕೆಯಾಗಿದೆ. ಇದರಿಂದ ರೈತರಿಗೆ ಸ್ವಲ್ಪಮಟ್ಟಿಗೆ ತೊಂದರೆ ಆಗುತ್ತಿದೆ.

ಪ್ರಸಕ್ತ ವರ್ಷ 2,51,356 ಹೆಕ್ಟೇರ್‌ ಪ್ರದೇಶದಲ್ಲಿ ಏಕದಳ, ದ್ವಿದಳ, ಎಣ್ಣೆ ಹಾಗೂ ವಾಣಿಜ್ಯ ಬೆಳೆಗಳ ಬೀಜ ಬಿತ್ತನೆ ಗುರಿಯನ್ನು ಹೊಂದಲಾಗಿದೆ. ಇದರಲ್ಲಿ ಇಲ್ಲಿಯವರೆಗೂ 81,765 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಉಳಿದಂತೆ ಜುಲೈ ಅಂತ್ಯದ ವೇಳೆಗೆ ಬಹುತೇಕ ಶೇ 75ರಷ್ಟು ಬಿತ್ತನೆ ಕಾರ್ಯ ನಡೆಯುವ ಕುರಿತು ಅಂದಾಜಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

2,17,486 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ ಬಿತ್ತನೆ ಗುರಿ ಹೊಂದಲಾಗಿದ್ದು, 63,491 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. 17,378 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ ಬಿತ್ತನೆ ಗುರಿ ಹೊಂದಲಾಗಿದ್ದು, 6,749 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. 3,687 ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಬೀಜ ಬಿತ್ತನೆ ಗುರಿ ಹೊಂದಲಾಗಿದ್ದು, 458 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆದಿದೆ.

ಹಿರೀಸಾವೆ ಹೋಬಳಿಯಲ್ಲಿ ಜೂನ್ ಅಂತ್ಯವಾದರೂ ಇದುವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ತೊಡಕಾಗಿದೆ. ಮಳೆಯನ್ನು ಆಶ್ರಯಿಸಿ, ಈ ಭಾಗದಲ್ಲಿ ಹೆಚ್ಚು, ರಾಗಿ ಬೆಳೆಯುತ್ತಾರೆ.

ಈ ತಿಂಗಳ ಕೊನೆಯಲ್ಲಿ ಅಥವಾ ಜುಲೈ ತಿಂಗಳಲ್ಲಿ ರಾಗಿ, ಜೋಳ, ಅವರೆ ಬಿತ್ತನೆ ಕಾರ್ಯ ನಡೆಯುತ್ತದೆ. ಅಲ್ಪಸ್ವಲ್ಪ ಬಿದ್ದ ಮಳೆಗೆ ಕೆಲವು ರೈತರು ಹೊಲ ಸಿದ್ಧತೆ ಸಹ ಮಾಡಿದ್ದಾರೆ. 

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ರೈತರಿಗೆ ಅಗತ್ಯ ಇರುವ ರಾಗಿ, ಮುಸುಕಿನಜೋಳ, ಭತ್ತ ಹಾಗೂ ಸೆಣಬು ಬಿತ್ತನೆ ಬೀಜಗಳ ದಾಸ್ತಾನು ಆರು ರೈತ ಸಂಪರ್ಕ ಕೇಂದ್ರಗಳಲ್ಲಿದೆ.

819 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಇತ್ತು. ಆ ಪೈಕಿ 449 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. 370 ಕ್ವಿಂಟಲ್ ದಾಸ್ತಾನು ಇದೆ. ತಾಲ್ಲೂಕಿನಲ್ಲಿ ಪ್ರಮುಖ ಬೆಳೆ ರಾಗಿ. ಸರ್ಕಾರದ ಕನಿಷ್ಠ ಬೆಂಬಲಯಡಿ ರಾಗಿಯನ್ನು ಖರೀದಿಸುವುದರಿಂದ ರೈತಾಪಿ ವರ್ಗದವರು ಹೆಚ್ಚು ಪ್ರಮಾಣದಲ್ಲಿ  ರಾಗಿ ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ  ಈಚೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇನ್ನು ಮುಂದೆ ಹದ ಮಳೆಯಾಗಬೇಕಿದೆ. ಜುಲೈ ಮೊದಲ ವಾರದಿಂದ ರಾಗಿ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ಅಷ್ಟರಲ್ಲಿ ಸಮರ್ಪಕವಾಗಿ ವರುಣನ ಸಿಂಚನವಾಗಬೇಕಿದೆ.

ಹಳೇಬೀಡು ಭಾಗದಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ ಬೆಳೆಯಲು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಮಾದಿಹಳ್ಳಿ, ಕಸಬಾ ಹೋಬಳಿಯಲ್ಲಿಯೂ ಮುಸುಕಿನ ಜೋಳ ಬಿತ್ತನೆ ಹೆಚ್ಚಾಗಿ ನಡೆದಿದೆ. ಬೇಲೂರು ತಾಲ್ಲೂಕಿನಲ್ಲಿ ರೈತರಿಗೆ 300 ಕ್ವಿಂಟಲ್ ಬಿತ್ತನೆ ಜೋಳ ಪೂರೈಕೆ ಮಾಡಲಾಗಿದೆ. ಶೇ 30 ರಷ್ಟು ರೈತರು ಮಾತ್ರ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ಖರೀದಿಸಿದ್ದಾರೆ. ಖಾಸಗಿ ಅಂಗಡಿಯಲ್ಲಿ ಬಿತ್ತನೆ ಬೀಜ ಹೆಚ್ಚು ಮಾರಾಟವಾಗಿದೆ. ಗುಣಮಟ್ಟದ ಬಿತ್ತನೆ ಬೀಜ, ಮಾರಾಟ ನಡೆಯುತ್ತಿದೆಯೇ ಎಂದು ಕೃಷಿ ಇಲಾಖೆಯಿಂದ ಪರಿಶೀಲನೆ ಮಾಡಲಾಗಿದೆ.

ಬೇಲೂರು ತಾಲ್ಲೂಕಿನಲ್ಲಿ ಅಲಸಂದೆ 10 ಕ್ವಿಂಟಲ್, ತೊಗರಿ 5 ಕ್ವಿಂಟಲ್, ಹೆಸರು 2 ಕ್ವಿಂಟಲ್ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿದೆ. ಸೂರ್ಯಕಾಂತಿ ಬೆಳೆಯಲು ರೈತರು ಆಸಕ್ತಿ ವಹಿಸಿಲ್ಲ. ಹಳೇಬೀಡು ಹೋಬಳಿಯಲ್ಲಿ 200 ಹೆಕ್ಟೇರ್ ಹತ್ತಿ ಬಿತ್ತನೆಯಾಗಿದೆ. ಖಾಸಗಿ ಅಂಗಡಿಯಲ್ಲಿ ಹತ್ತಿ ಬಿತ್ತನೆ ಬೀಜ ಖರೀದಿ ಮಾಡಿ ರೈತರು ಬಿತ್ತನೆ ಮಾಡಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ ವಿವರಿಸಿದರು.

ಹಳೇಬೀಡು ಭಾಗದಲ್ಲಿ ಶುಂಠಿ ಬೆಳೆಯತ್ತ ರೈತರು ಆಸಕ್ತಿ ವಹಿಸಿದ್ದಾರೆ. ಸಾಕಷ್ಟು ಜಮೀನುಗಳಲ್ಲಿ ಶುಂಠಿ ಬಿತ್ತನೆಯಾಗಿದೆ. ಶುಂಠಿ ಬೆಳೆಯಲು ಹಲವು ರೈತರು ಬೇರೆಯವರಿಗೆ ಜಮೀನು ಗುತ್ತಿಗೆ ಕೊಟ್ಟಿದ್ದಾರೆ. ಮುಂಗಾರು ಕೃಷಿ ಮಾಡುವವರ ಸಂಖ್ಯೆ ಈ ವರ್ಷ ಕಡಿಮೆಯಾಗಿದೆ. ಬಿತ್ತನೆ ಬೀಜ ಖರೀದಿಗೆ ಹೆಚ್ಚು ಶ್ರಮ ಆಗಲಿಲ್ಲ ಎಂದು ರೈತ ಹಳೇಬೀಡಿನ ಚಂದ್ರಶೇಖರ್ ತಿಳಿಸಿದರು.

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಿ.ಬಿ. ಸಂತೋಷ್‌, ಜಿ. ಚಂದ್ರಶೇಖರ್‌, ಹಿ.ಕೃ. ಚಂದ್ರು, ಸಿದ್ದರಾಜು, ಎಚ್‌.ಎಸ್‌. ಅನಿಲ್‌ಕುಮಾರ್‌.

ಬಿತ್ತನೆ ಬೀಜಗಳ ವಿವರ (ಕ್ವಿಂಟಲ್‌ಗಳಲ್ಲಿ)

ಬಿತ್ತನೆ ಬೀಜ;ಬೇಡಿಕೆ;ವಿತರಣೆ;ದಾಸ್ತಾನು

ಭತ್ತ;5300;1465;2527

ರಾಗಿ;3593;607;3269

ಉದ್ದು;56;21;117

ಹೆಸರು;240;40;173

ಅಲಸಂದೆ;625;369;611

ತೊಗರಿ;40;16;34

ಮುಸುಕಿನ ಜೋಳ;4472;1,129;616

ಸೂರ್ಯಕಾಂತಿ;24;1;34

ಒಟ್ಟು;14,680;3,648;7380

ಬೆಲೆ ಹೆಚ್ಚಿಸಿದ ಸರ್ಕಾರ
ಕಳೆದ ವರ್ಷ 5 ಕೆ.ಜಿ. ರಾಗಿ ಬಿತ್ತನೆ ಬೀಜದ ಬೆಲೆ ₹ 190 ಇತ್ತು. ಸರ್ಕಾರ ಈ ವರ್ಷ ₹ 45 ಹೆಚ್ಚಿಗೆ ಮಾಡಿ ₹ 235 ಆಗಿದೆ. 2022–23 ರಲ್ಲಿ ಹಿರೀಸಾವೆ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಬಂದಿಲ್ಲ. ಸರ್ಕಾರ ಬೆಳೆ ವಿಮೆ ಪರಿಹಾರ ನೀಡುವಾಗ ತಾರತಮ್ಯ ಮಾಡಬಾರದು. ಶ್ರೀನಿವಾಸ್ ರೈತ ತೂಬಿನ ಕೆರೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ. ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ. ರಾಜಸುಲೋಚನಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಬಿತ್ತನೆ ಬೀಜದ ಕೊರತೆ ಇಲ್ಲ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 42 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಲಾಗುತ್ತದೆ. ಈಗಾಗಲೇ 3569 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಬಿತ್ತನೆ ಬೀಜದ ಕೊರತೆ ಇಲ್ಲ. ಎಂ.ಎಸ್. ಜನಾರ್ದನ್ ಸಹಾಯಕ ಕೃಷಿ ನಿರ್ದೇಶಕ ಚನ್ನರಾಯಪಟ್ಟಣ ಬೆಲೆ ಕಡಿಮೆ ಮಾಡಿ ರಾಗಿ ಹೆಸರು ಮುಸುಕಿನಜೋಳ ಅಲಸಂದೆ  ಬಿತ್ತನೆ ಬೀಜದ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ರೈತರ ಹಿತಕ್ಕೆ ಮಾರಕವಾಗುವಂತೆ ನಡೆದುಕೊಳ್ಳಬಾರದು. ಈ ಹಿಂದಿನಂತೆ  ಬಿತ್ತನೆ ಬೀಜದ ದರ ಕಡಿಮೆ ಮಾಡುವ ಮೂಲಕ ಸರ್ಕಾರ ನೆರವಿಗೆ  ಧಾವಿಸಬೇಕು. ಸಿ.ಜಿ.ರವಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನರಾಯಪಟ್ಟಣ ಬೀಜ ಗೊಬ್ಬರದ ಕೊರತೆ ಇಲ್ಲ ಹಿರೀಸಾವೆ ರೈತ ಸಂಪರ್ಕ ಕೇಂದ್ರದಲ್ಲಿ 540 ಕೆ.ಜಿ. ರಾಗಿ 600 ಕೆ.ಜಿ. ಮುಸುಕಿನ ಜೋಳ 1ಸಾವಿರ ಕೆ.ಜಿ. ಸೆಣಬು 100 ಕೆ.ಜಿ. ಹೆಸರಿನ ಬಿತ್ತನೆ ಬೀಜಗಳ ದಾಸ್ತಾನು ಇದೆ. ಗೊಬ್ಬರದ ಕೊರತೆಯೂ ಇಲ್ಲ. ಜಹಾನ್ ತಾಜ್ ಹಿರೀಸಾವೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ 12 ಸಾವಿರ ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆ 12805 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳಾದ ತಂಬಾಕು ಕಬ್ಬು ಹಾಗೂ ಹತ್ತಿ ಬಿತ್ತನೆ ಗುರಿ ಹೊಂದಲಾಗಿದ್ದು 11067 ಹೆಕ್ಟೇರ್‌ನಲ್ಲಿ ಬಿತ್ತನೆ ಪ್ರಗತಿಯಲ್ಲಿದೆ. ಮಂಜುನಾಥ್ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಅಗತ್ಯ ದಾಸ್ತಾನು ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಕೊರತೆಯಾಗಿಲ್ಲ. ಆಗಸ್ಟ್‌ವರೆಗೂ ಪೂರೈಕೆ ಮಾಡಲು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಆಗಸ್ಟ್ ನಂತರ ಪೂರೈಕೆ ಮಾಡಲು ರಾಗಿ ಬೀಜ ದಾಸ್ತಾನು ಮಾಡಲು ಸಿದ್ದತೆ ನಡೆದಿದೆ.  ರಂಗಸ್ವಾಮಿ ಸಹಾಯಕ ಕೃಷಿ ನಿರ್ದೇಶಕ ಬೇಲೂರು ತಾಲ್ಲೂಕು
ಅರಕಲಗೂಡು: ಬಿತ್ತನೆ ಬೀಜದ ಕೊರತೆ ಇಲ್ಲ
ಅರಕಲಗೂಡು ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆ ಚುರುಕಾಗಿದೆ. ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ. ಕವಿತಾ ತಿಳಿಸಿದರು. ಮುಸುಕಿನ ಜೋಳದ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ವಿವಿಧ ತಳಿಯ ಮುಸುಕಿನ ಜೋಳದ 223 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದ್ದು ಈ ವರೆಗೆ 75.90 ಕ್ವಿಂಟಲ್ ವಿತರಣೆಯಾಗಿದೆ. ಉಳಿದಂತೆ ಅಲಸಂದೆ 62.8 ಕ್ವಿಂಟಲ್ ದಾಸ್ತಾನಿದ್ದು 35.2 ಕ್ವಿಂಟಲ್ ವಿತರಣೆ ತೊಗರಿ 60 ಕೆ.ಜಿ. ದಾಸ್ತಾನು 25 ಕೆ.ಜಿ. ವಿತರಣೆ ರಾಗಿ ದಾಸ್ತಾನು 85 ಕ್ವಿಂಟಲ್ 4.65 ಕ್ವಿಂಟಲ್ ವಿತರಣೆ ಹೆಸರು ದಾಸ್ತಾನು 2.40 ಕ್ವಿಂಟಲ್ 60 ಕೆ.ಜಿ. ವಿತರಣೆಯಾಗಿದೆ. ಹೈಬ್ರೀಡ್ ಭತ್ತ ದಾಸ್ತಾನು 67.5 ಕ್ವಿಂಟಲ್ ಇದ್ದು 11.30 ಕ್ವಿಂಟಲ್ ವಿತರಣೆ ಮಾಡಲಾಗಿದೆ. ಸಾಮಾನ್ಯ ಭತ್ತ ದಾಸ್ತಾನು 75  ಕ್ವಿಂಟಲ್ 8.5 ಕ್ವಿಂಟಲ್ ವಿತರಣೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಲ್ಲ ಬಿತ್ತನೆ ಬೀಜದ ದರಗಳಲ್ಲಿ ಹೆಚ್ಚಳವಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ 43640 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು ಈವರೆಗೆ 27040 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತಂಬಾಕು 7450 ಹೆಕ್ಟೇರ್ ಮುಸುಕಿನ ಜೋಳ 18700 ಹೆಕ್ಟೇರ್  ಅಲಸಂದೆ 700 ಹೆಕ್ಟೇರ್ ಹೆಸರು 40 ಹೆಕ್ಟೇರ್ ತೊಗರಿ 45 ಹೆಕ್ಟೇರ್ ಉದ್ದು 30 ಹೆಕ್ಟೇರ್ ಮತ್ತು ನೆಲಗಡಲೆ 75 ಹೆಕ್ಠೆರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.