ಹಾಸನ: ಇತ್ತೀಚಿನ ದಿನ ನ್ಯಾಯಾಲಯಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಶೀಘ್ರ ನ್ಯಾಯದಾನ ಕ್ಕಾಗಿ ಲೋಕ್ ಅದಾಲತ್ ತೆರೆಯಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.
ನಗರದ ಚನ್ನಪಟ್ಟಣದಲ್ಲಿರುವ ನೂತನ ಜಿಲ್ಲಾ ನ್ಯಾಯಾಲಯದ ಆವಣದ ಎ.ಡಿ.ಆರ್. ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರಕಾರಿ ಕಾನೂನು ಕಾಲೇಜು, ಎಂ. ಕೃಷ್ಣ ಕಾನೂನು ಕಾಲೇಜು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ಯಾನಲ್ ವಕೀಲರು, ಕಾನೂನು ಸ್ವಯಂ ಸೇವಕರು ಮತ್ತು ಕಾನೂನು ನೆರವು ಅಭಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ಸಲಹೆ ನೀಡಲು ಇಬ್ಬರು ವಕೀಲರನ್ನು ನಿಯೋಜಿಸಲಾಗಿದೆ ಇವರ ಮೂಲಕ ಕಾನೂನು ನೆರವು ಹಾಗೂ ಮಾಹಿತಿಯನ್ನು ಪಡೆಯಬಹುದಾಗಿದೆ ಅರ್ಹ ಕಕ್ಷಿದಾರರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.
ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಕ್ರಿಮಿನಲ್ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳಿಗೂ ನ್ಯಾಯದಾನ ಒದಗಿಸಲಾಗುವುದು. ತ್ವರಿತ ನ್ಯಾಯದಾನಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಲೋಕ ದಾಲತ್ ಕೂಡ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಲೋಕ ಅದಾಲತ್ ಕುರಿತು ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಸರ್ಕಾರದಿಂದ ರೂಪಿಸಲಾಗುವ ನಾನಾ ಯೋಜನೆಗಳು ಬಹಳಷ್ಟು ಮಂದಿಗೆ ತಿಳಿಯುವುದಿಲ್ಲ, ಆದ್ದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡಬಹುದಾಗಿದೆ ಎಂದರು.
ಪ್ರತಿ ಹಂತದಲ್ಲಿಯೂ ಎಲ್ಲರೂ ಅನೇಕ ವಿಚಾರಗಳನ್ನು ಅರಿತಿರಬೇಕು ದಿನೇ ದಿನೇ ಕಾನೂನು ಹಾಗೂ ಇತರ ವಿಷಯಗಳು ಬದಲಾವಣೆ ಆಗುತ್ತಿದ್ದು ಈ ಬಗ್ಗೆ ಜನರಲ್ಲಿ ಅರಿವು ಮುಖ್ಯ ಎಂದರು.
ವಕೀಲರ ಸಂಘದ ಜಂಠಿ ಕಾರ್ಯದರ್ಶಿ ರೂಪ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ, ಎಂ. ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ವಿ. ಶ್ರೀನಿವಾಸ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ. ಚಂದ್ರಶೇಖರ್, ಜೀವನ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.