ಶ್ರವಣಬೆಳಗೊಳ: ಉತ್ತಮ ಕ್ಷಮಾ, ಉತ್ತಮ ಮಾರ್ಧವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಉತ್ತಮ ಬ್ರಹ್ಮಚರ್ಯ ಧರ್ಮಗಳ ದಶಲಕ್ಷಣ ಪರ್ವವು ಮಹತ್ವ ಪೂರ್ಣವಾಗಿದೆ. ಪ್ರತಿದಿನವೂ ಒಂದೊಂದು ಧರ್ಮದಂತೆ ಜೈನ ಧರ್ಮೀಯರು ಆಚರಿಸುತ್ತಾರೆ.
ಇದರಲ್ಲಿರುವ ತತ್ವದ ಅನುಷ್ಠಾನ ಎಲ್ಲ ಧರ್ಮೀಯರ ಮತ್ತು ಎಲ್ಲ ಸಮುದಾಯಗಳ ಉನ್ನತಿಗೆ ಕಾರಣವಾಗಿದೆ. ಈ ಪರ್ವದ ವಿಶೇಷವೆಂದರೆ ಧರ್ಮ, ಜಾತಿ, ಮತ, ಪಂಥ ಪಂಗಡಗಳ ಭೇದವನ್ನು ಗಣನೆಗೆ ತೆಗೆದುಕೊಳ್ಳದೇ, ಯಾರ ಹೆಸರಲ್ಲೂ ಆಚರಿಸದೇ, ಪ್ರತಿ ಆತ್ಮನ ವಿಕಾಸ ಉನ್ನತಿಗೆ ಕಾರಣವಾಗುವಂತೆ ಆಚರಿಸುವುದರಿಂದ ಇದನ್ನು ಜೈನ ಧರ್ಮೀಯರು ರಾಜ ಪರ್ವವೆಂದು ಕರೆಯುತ್ತಾರೆ.
ಕ್ಷೇತ್ರದಲ್ಲಿ ವರ್ಷಾಯೋಗ ಚಾತುರ್ಮಾಸ್ಯ ಆಚರಿಸುವ ಯುಗಲ ಮುನಿಗಳಾದ ಅಮೋಘಕೀರ್ತಿ ಮಹಾರಾಜ್, ಅಮರಕೀರ್ತಿ ಮಹಾರಾಜರ ಮತ್ತು ಇತರೆ ತ್ಯಾಗಿಗಳಿಂದ ಇಲ್ಲಿನ ಚಾವುಂಡರಾಯ ಸಭಾ ಮಂಟಪದಲ್ಲಿ ದಶಲಕ್ಷಣ ಪರ್ವದ ದಶ ಧರ್ಮಗಳ ಕುರಿತು ಪ್ರವಚನ, ಪರಸ್ಪರ ಕ್ಷಮಾವಾಣಿ ಆಚರಿಸುವುದರೊಂದಿಗೆ 10 ಧರ್ಮಗಳ ದಶಲಕ್ಷಣ ಪರ್ವ ಶುಕ್ರವಾರ ಸಂಪನ್ನಗೊಂಡಿತು.
ಕ್ಷೇತ್ರದಲ್ಲಿ ಪ್ರತಿವರ್ಷ ಭಾದ್ರಪದ ಶುದ್ಧ ಪಂಚಮಿಯಿಂದ ಚತುರ್ದಶಿ ತನಕ ಜೈನ ಧರ್ಮಿಯರು 10 ದಿನ ದಶಲಕ್ಷಣ ಪರ್ವವನ್ನು ಶ್ರದ್ಧಾ ಭಕ್ತಿ, ವ್ರತ, ಉಪವಾಸಗಳ ಪೂರ್ವಕವಾಗಿ ವೈಭವದಿಂದ ಆಚರಿಸುತ್ತಾರೆ. ಈ ಬಾರಿ ನೂತನ ಶ್ರೀಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಅದ್ಧೂರಿಯಾಗಿ ನಡೆಯಿತು.
ಕ್ಷೇತ್ರದಲ್ಲಿ ವರ್ಷಾಯೋಗ ಚಾತುರ್ಮಾಸ್ಯ ಆಚರಿಸುವ ಯುಗಲ ಮುನಿಗಳು, ಆದಿಸಾಗರ ಮಹಾರಾಜರು, ನಿರ್ದೋಷ ಸಾಗರ ಮಹಾರಾಜರು, ಮತ್ತು ಗಣನಿ ಆರ್ಯಿಕೆರಾದ ವಿಶಿಷ್ಟ ಮತಿ ಮಾತಾಜಿ, ವಿಶುದ್ಧಮತಿ ಮಾತಾಜಿ, ಶಿವಮತಿ ಮಾತಾಜಿ, ಸಂಘಸ್ಥ ಮಾತಾಜಿಯವರು ದಶ ಧರ್ಮಗಳ ಬಗ್ಗೆ ಆಶೀರ್ವಚನ ನೀಡಿದರು.
ಸಾನಿಧ್ಯ ವಹಿಸಿದ್ದ ಎಲ್ಲ ಮುನಿ ಮಹಾರಾಜರಿಗೆ, ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಚಾರುಕೀರ್ತಿ ಶ್ರೀಗಳು ಪಾದಪೂಜೆ ನೆರವೇರಿಸಿದರು. ಮಾತಾಜಿಯವರಿಗೆ ನೋಂಪಿ ಮಾಡಿದ ವ್ರತಿಕರಿಂದ ಪಾದಪೂಜೆ ಹಾಗೂ ವಸ್ತ್ರದಾನ ಹಾಗೂ ಶಾಸ್ತ್ರದಾನ ಮಾಡಲಾಯಿತು.
24 ತೀರ್ಥಂಕರರ ಕಲ್ಪಧ್ರುಮ ಮಹಾಪೂಜೆ, 10 ದಿನಗಳ ಕಾಲ ಸಾಂಗ್ಲಿಯ ಕುಬೇರ್ ಚೌಗಲೆಯವರ ಸಂಗೀತದೊಂದಿಗೆ ನೆರವೇರಿತು. ಚಾವುಂಡರಾಯ ಸಭಾ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಸಮವಸರಣ ಮಂಟಪದಲ್ಲಿ ಶ್ರುತ ಪೂಜೆ ನಡೆಯಿತು. ನಿತ್ಯವೂ ಧಾರ್ಮಿಕ ರಸಪ್ರಶ್ನೆ ಕಾರ್ಯಕ್ರಮ, ಆರತಿ ಕಾರ್ಯಕ್ರಮ ನಡೆದವು.
ಜೀವನದಲ್ಲಿ ಕ್ಷಮಾಗುಣ ಧಾರಣೆ ಮಾಡುವುದರಿಂದ ಎಲ್ಲೆಲ್ಲೂ ಗಾಢ ಮೈತ್ರಿ ಭಾವ ಬೆಳೆಯುತ್ತದೆ.ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರದ ಪೀಠಾಧಿಪತಿ
ದಶ ಧರ್ಮಗಳು ಕ್ರೋಧವನ್ನು ಮಾಡದೇ ಸರ್ವ ಜೀವಿಗಳಲ್ಲಿ ಕ್ಷಮೆಯನ್ನು ನೀಡುವುದೇ ಕ್ಷಮಾ ಧರ್ಮ. ಅಹಂಕಾರ ತ್ಯಜಿಸುವುದು ಮಾರ್ಧವ ಧರ್ಮ. ಮನ ವಚನ ಕಾಯಗಳಿಂದ ಮೋಸ ಮಾಡದಿರುವುದೇ ಆರ್ಜವ ಧರ್ಮ. ಅತಿಯಾಸೆಯನ್ನು ತ್ಯಜಿಸಿ ಪ್ರವೃತ್ತಿ ಬೆಳೆಸಿಕೊಳ್ಳುವುದೇ ಶೌಚ ಧರ್ಮ. ಹಿತ ಮಿತ ಪ್ರಿಯ ಸತ್ಯ ವಚನಗಳನ್ನಾಡುವುದು ಸತ್ಯ ಧರ್ಮ. ಇಂದ್ರಿಯ ಹಾಗೂ ಮನವನ್ನು ವಶದಲ್ಲಿ ಇಟ್ಟುಕೊಳ್ಳುವುದು ಸಂಯಮ ಧರ್ಮ. ಕರ್ಮಗಳ ನಿರ್ಜರೆಗಾಗಿ ಆತ್ಮನಲ್ಲಿ ಲೀನವಾಗುವುದು ತಪ ಧರ್ಮ. ಅಂತರಂಗ ಕಷಾಯಗಳನ್ನು ತ್ಯಜಿಸುವುದು ಮತ್ತು 4 ಪ್ರಕಾರದ ದಾನಗಳನ್ನು ಮಾಡುವುದು ತ್ಯಾಗ ಧರ್ಮ. ಪರಿಗ್ರಹದ ತ್ಯಾಗ ಮಾಡುವುದೇ ಆಕಿಂಚನ್ಯ ಧರ್ಮ. ಇಂದ್ರಿಯಗಳ ವಿಜಯವನ್ನು ಸಾಧಿಸುವುದು ಬ್ರಹ್ಮಚರ್ಯ ಧರ್ಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.