ADVERTISEMENT

62 ಸಾವಿರ ಟನ್ ಕೊಬ್ಬರಿ ಖರೀದಿಗೆ ಕೇಂದ್ರ ನಿಗದಿ: ನೋಂದಣಿಗೆ ಮುಗಿ ಬಿದ್ದ ರೈತರು

1 ಲಕ್ಷ ಟನ್‌ಗೂ ಅಧಿಕ ದಾಸ್ತಾನು: ನೋಂದಣಿಗೆ ಮುಗಿ ಬಿದ್ದ ರೈತರು

ಹಿ.ಕೃ.ಚಂದ್ರು
Published 7 ಫೆಬ್ರುವರಿ 2024, 5:28 IST
Last Updated 7 ಫೆಬ್ರುವರಿ 2024, 5:28 IST
ಹಾಸನ ಜಿಲ್ಲೆಯ ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ರೈತರು ಹೆಸರು ನೋಂದಾಯಿಸಿದರು.
ಹಾಸನ ಜಿಲ್ಲೆಯ ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ರೈತರು ಹೆಸರು ನೋಂದಾಯಿಸಿದರು.   

ಹಿರೀಸಾವೆ : ರಾಜ್ಯದಿಂದ 62 ಸಾವಿರ ಟನ್ ಕೊಬ್ಬರಿಯನ್ನಷ್ಟೇ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದ್ದು, ತೆಂಗು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

‘ಮೊದಲು ನೋಂದಾಯಿಸಿದವರಿಂದಷ್ಟೇ ಕೊಬ್ಬರಿ ಖರೀದಿಸುತ್ತಾರೆ’ ಎಂಬ ಆತಂಕದಲ್ಲಿ ರೈತರು, ಎರಡು ದಿನದಿಂದ ನಾಫೆಡ್ ಖರೀದಿ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದಾರೆ. ನೋಂದಣಿಗೆ ಸರ್ಕಾರ 45 ದಿನ ಸಮಯ ನೀಡಿದೆ.

‘ಹೆಚ್ಚು ದಾಸ್ತಾನು ಮಾಡಿರುವ ವರ್ತಕರು, ಕಮಿಷನ್ ಆಮಿಷ ಒಡ್ಡಿ, ರೈತರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಹೆಸರು ನೋಂದಣಿ ಮಾಡಿಸು‌ತ್ತಿದ್ದಾರೆ’ ಎಂದು ರೈತರು ಇದೇ ವೇಳೆ ಆರೋಪಿಸಿದ್ದಾರೆ.

ADVERTISEMENT

‘ರೈತರ ಬಳಿ 1 ಲಕ್ಷ ಟನ್‌ಗೂ ಅಧಿಕ ಕೊಬ್ಬರಿ ದಾಸ್ತಾನಿದೆ. ಹೆಚ್ಚು ಕೊಬ್ಬರಿ ಖರೀದಿಸಲು ರಾಜ್ಯದ ಜನಪ್ರತಿನಿಧಿಗಳು, ಕೇಂದ್ರದ ಮೇಲೆ ಒತ್ತಡ ತರಬೇಕು’ ಎನ್ನುತ್ತಾರೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಪುಟ್ಟಸ್ವಾಮಿಗೌಡ.

ಸರ್ವರ್‌ ಸಮಸ್ಯೆ: ರೈತರಿಗೆ ಟೋಕನ್‌ ನೀಡಿದ್ದರೂ ಬೆರಳಚ್ಚು, ಸರ್ವರ್ ಸಮಸ್ಯೆಯಿಂದ ನೋಂದಣಿಗೆ ವಿಳಂಬವಾಗುತ್ತಿದೆ.

‘ಅಧಿಕಾರಿಗಳು ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ, ಹೆಚ್ಚು ರೈತರನ್ನು ನೋದಾಯಿಸಿಕೊಳ್ಳಬೇಕು’ ಎಂದು ನಿಂಬೇಹಳ್ಳಿಯ ರೈತ ರವಿ ಆಗ್ರಹಿಸಿದರು.

‘ಶಾಸಕ ಸಿ.ಎನ್‌. ಬಾಲಕೃಷ್ಣ ಅವರ ಸೂಚನೆಯಂತೆ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶಾಮಿಯಾನ, ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ತಿಳಿಸಿದರು.

ಹಾಸನ ಜಿಲ್ಲೆಯ ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ಮಂಗಳವಾರ ಬೆಳಿಗ್ಗೆ ಹೆಸರು ನೋಂದಾಯಿಸಲು ಕಾಯುತ್ತಿದ್ದ ಬೆಳೆಗಾರರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯಿಂದ ಕೇಂದ್ರ ಸರ್ಕಾರ ನಿಗದಿಪಡಿಸಿದಷ್ಟು ಕೊಬ್ಬರಿ ಖರೀದಿಗೆ ಹೆಸರು ನೋಂದಾಯಿಸಿಕೊಳ್ಳುತ್ತೇವೆ.

-ಸಿ.ಎನ್. ಪುಟ್ಟಸ್ವಾಮಿಗೌಡ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ

ವೃದ್ಧರು ಮಹಿಳೆಯರು ಅಂಗವಿಕಲ ರೈತರು ಹೆಸರು ನೋಂದಾಯಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಮಧ್ಯವರ್ತಿಗಳ ಹಾವಳಿ ತಡೆಯಬೇಕು

-ಅಣ್ಣಪ್ಪಸ್ವಾಮಿ ರೈತ ಅಂತನಹಳ್ಳಿ

ಪೊಲೀಸರ ನೆರವಿನಲ್ಲಿ ಟೋಕನ್‌ ವಿತರಣೆ

ಹಿರೀಸಾವೆಯ ಕೇಂದ್ರಕ್ಕೆ ಮಂಗಳವಾರ ಬೆಳಿಗ್ಗೆ ಹೆಚ್ಚು ಬೆಳೆಗಾರರು ಬಂದಿದ್ದರಿಂದ ಗೊಂದಲ ಉಂಟಾಗಿತ್ತು. ನಂತರ ಪೊಲೀಸರ ಸಮ್ಮುಖದಲ್ಲಿ 500 ಮಂದಿಗೆ ಟೋಕನ್‌ ನೀಡಲಾಯಿತು. ಬೆಳಗಿನ ಜಾವ 5 ಗಂಟೆಯ ವೇಳೆಗೇ ಚಳಿಯಲ್ಲಿ ಮಹಿಳೆಯರು ವೃದ್ಧರು ಸೇರಿದಂತೆ 500ಕ್ಕೂ ಹೆಚ್ಚು ರೈತರು ಸೇರಿದ್ದರು. 9 ಗಂಟೆಗೆ ಸಾವಿರಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು. ದಿನಕ್ಕೆ 100 ರೈತರಿಗೆ ಟೋಕನ್ ನೀಡಲು ಮಾರಾಟ ಮಂಡಳಿಯ ಅಧಿಕಾರಿಗಳು ಮುಂದಾದರು. ಅದರಿಂದ ಮಾತಿನ ಚಕಮುಕಿ ಮತ್ತು ತಳ್ಳಾಟ ನಡೆಯಿತು. ಕೊನೆಗೆ ಮುಂದಿನ ಮಂಗಳವಾರದವರೆಗೆ ಟೋಕನ್ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.