ಹಾಸನ: ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿನಿಲ್ಲಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎರಡು ವರ್ಷಗಳಿಂದ ಚಿಗಳ್ಳಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಕೆಲವರಿಗೆ ಮಾತ್ರ ಗಣಿಗಾರಿಕೆ ನಡೆಸಲು ಪರವಾನಗಿ ಇದೆ. ಅವರ ಜೊತೆಗೆ ಪರವಾನಗಿ ಇಲ್ಲದವರೂ ಗಣಿಗಾರಿಕೆ ನಡೆಸುತ್ತಿದ್ದು, ಪ್ರತಿ ಬಾರಿಯೂ ಬಂಡೆಗಳನ್ನು ಸಿಡಿಸಿದಾಗ ಮನೆಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ಮನೆಗಳ ಗೋಡೆ ಮತ್ತು ನೆಲ ಬಿರುಕು ಬಿಟ್ಟಿವೆ ಎಂದು ಅಳಲು ತೋಡಿಕೊಂಡರು.
ಕ್ರಷರ್ ದೂಳಿನಿಂದ ಜಾನುವಾರುಗಳು ಹುಲ್ಲು ಮೇಯಲು ತೊಂದರೆ ಆಗುತ್ತಿದೆ. ರಾತ್ರಿ ವೇಳೆ ಗಣಿಗಾರಿಕೆ ಮಾಡುವುದರಿಂದ ಯಂತ್ರಗಳ ಶಬ್ಧದಿಂದ ಗ್ರಾಮಸ್ಥರು ನಿದ್ರೆ ಮಾಡಲು ಆಗುತ್ತಿಲ್ಲ. ಪರವಾನಗಿ ನೀಡಿರುವ ಸ್ಥಳದಲ್ಲಿ ಪಾಂಡುರಂಗ ಸ್ವಾಮಿ ದೇವಸ್ಥಾನವಿದ್ದು, ಪ್ರತಿ ವರ್ಷ ಚಿಗಳ್ಳಿ ಗ್ರಾಮಸ್ಥರು ಜಾತ್ರೆ ನಡೆಸುತ್ತಾರೆ. ಹಾಗಾಗಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಚಿಗಳ್ಳಿ ಗ್ರಾಮಸ್ಥರಾದ ಮಧು, ಮಂಜೇಗೌಡ, ಚಿಗಳ್ಳಿಗೌಡ, ರಾಮೇಗೌಡ, ಉದಯ್, ಸುರೇಶ್, ಧರ್ಮ, ಮೋಹನ್,ಜವರೇಗೌಡ, ರಾಮಣ್ಣ, ರಂಗಸ್ವಾಮಿ, ಸೂರಿ ಕುಮಾರ್, ರಾಜಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.