ಹಾಸನ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ 8ನೇ ವರ್ಷದಿಂದಲೇ ಕರಾಟೆಯಲ್ಲಿ ಆಸಕ್ತಿ ಹೊಂದಿದ್ದ ಆರ್ಯನ್ ಇದೀಗ, ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾನೆ.
ನಗರದ ಯುನೈಟೆಡ್ ಅಕಾಡೆಮಿ ಶಾಲೆಯ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಿ.ವಿ. ಆರ್ಯನ್, ನಾಲ್ಕೈದು ವರ್ಷಗಳಿಂದ ನಗರದ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ತರಬೇತುದಾರ ಮಹದೇವ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾನೆ.
ವ್ಯಾಸಂಗದ ಜೊತೆಗೆ ಕರಾಟೆ ಕಲೆಯನ್ನು ಕರಗತ ಮಾಡಿಕೊಂಡಿರುವ ಈತ, ಮಲ್ಲಕಂಬ ಅಭ್ಯಾಸ ಮಾಡಿಕೊಂಡಿದ್ದು, ಈ ಬಾರಿ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾನೆ.
ಇದುವರೆಗೂ 15ಕ್ಕೂ ಅಧಿಕ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕಟಾ ಹಾಗೂ ಕುಮಿತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಐಸಿಎಸ್‌ಇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ, ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ.
ಕಳೆದ ವರ್ಷ ಶಿಕ್ಷಣ ಇಲಾಖೆಯಿಂದ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಇದಲ್ಲದೇ ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಪಂದ್ಯಾವಳಿಗಳಲ್ಲೂ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾನೆ.
ಅರಕಲಗೂಡು: ತಾಲ್ಲೂಕಿನ ಮೋಕಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಎಂ. ಯು. ನಿಶಾನ್, 17 ವರ್ಷ ವಯೋಮಿತಿಯ ಮಕ್ಕಳ ರಾಜ್ಯ ಮಟ್ಟದ ಕ್ರೀಡಾಕೂಟದ ಟ್ರಿಪಲ್ ಜಂಪ್‌ನಲ್ಲಿ ಸಾಧನೆ ಮೆರೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾನೆ.
ತಾಲ್ಲೂಕಿನ ಮಾದಿಹಳ್ಳಿ ಎಂಬ ಪುಟ್ಟ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ನಿಶಾನ್, ಉಮೇಶ್– ಆಶಾ ದಂಪತಿಯ ಪುತ್ರ. 8 ನೇ ತರಗತಿಯಲ್ಲಿದ್ದಾಗಲೇ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಿ.ಎಸ್. ಪುರುಷೋತ್ತಮ್, ಈತನಲ್ಲಿದ್ದ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಲಾಂಗ್ ಜಂಪ್ ಮತ್ತು ಟ್ರಿಪಲ್ ಜಂಪ್ ಸ್ಫರ್ಧೆಗೆ ತರಬೇತಿಗೊಳಿಸಲು ಆರಂಭಿಸಿದರು. ಇದರ ಪರಿಣಾಮ ತಾಲ್ಲೂಕು ಮಟ್ಟದ ಸ್ಫರ್ಧೆಗೆ ಆಯ್ಕೆಗೊಂಡಿದ್ದ.
ಶಿಕ್ಷಕರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ನಡೆಸಿದ ಕಾರಣ 9 ನೇ ತರಗತಿಯಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದಲ್ಲದೇ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದ.
10 ನೇ ತರಗತಿಯಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟದ ಲಾಂಗ್ ಜಂಪ್, ಟ್ರಿಪಲ್ ಜಂಪ್ ಹಾಗೂ 100 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಲ್ಲದೇ ತಾಲ್ಲೂಕು ಮಟ್ಟದ ಕ್ರೀಡಾ ಕೂಟದ ಈ ಮೂರು ಸ್ಫರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡ.
2024-25 ನೇ ಸಾಲಿನ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 100 ಮೀ ಓಟ, ಟ್ರಿಪಲ್ ಜಂಪ್ ಸ್ಫರ್ಧೆಯಲ್ಲಿ ದ್ವಿತೀಯ, ಲಾಂಗ್ ಜಂಪ್ ಸ್ಫರ್ಧೆಯಲ್ಲಿ ಮೂರನೇ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ.
ಕೋಲಾರದಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಶಾಲಾ ಮಕ್ಕಳ ಕ್ರೀಡಾಕೂಟದ ಟ್ರಿಪಲ್ ಜಂಪ್‌ನಲ್ಲಿ 12.77 ಮೀ ಜಿಗಿದು ದ್ವಿತೀಯ ಸ್ಥಾನ ಪಡೆದಿದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿದ್ದಾನೆ.
15 ನೇ ವರ್ಷದಲ್ಲೇ ಈ ಸಾಧನೆ ಮಾಡುವ ಮೂಲಕ ಶಾಲೆಗೆ, ಪೋಷಕರಿಗೆ ಹಾಗೂ ತನ್ನ ಗ್ರಾಮಕ್ಕೆ ಕೀರ್ತಿ ತಂದಿರುವ ಈತ ರಾಷ್ಟ್ಟಮಟ್ಟದಲ್ಲೂ ಉತ್ತಮ ಸಾಧನೆ ಮಾಡಲಿ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್. ಎಂ. ಕೊಟ್ಟೂರಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಜಿ. ಎಸ್. ಪುರುಷೋತ್ತಮ್ ಹಾಗೂ ಶಿಕ್ಷಕರು ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.