ಅರಸೀಕೆರೆ: ನಗರದ 14 ನೇ ವಾರ್ಡ್‌ನಲ್ಲಿ ಆಸ್ತಿಗೆ ಸಂಬಂಧಿಸಿದಂತೆ ನಕಲಿ ಇ–ಸ್ವತ್ತು ತಯಾರಿಸಿ, ನಗರಸಭೆಗೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ನಗರಸಭೆ ಪೌರಾಯುಕ್ತ ಎಚ್.ಟಿ. ಕೃಷ್ಣಮೂರ್ತಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಎಚ್.ಟಿ. ಕೃಷ್ಣಮೂರ್ತಿ, ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಎ.ಬಿ. ಗುರುಸಿದ್ದೇಶ್ ಎಂಬುವರು ನಗರಸಭೆಯ ಖಾತಾ ಸಂಖ್ಯೆ 1764/1581 ರಲ್ಲಿನ ಆಸ್ತಿಯನ್ನು ವ್ಯಾಪಾರಸ್ಥರಿಗೆ ಬಾಡಿಗೆ ನೀಡಿದ್ದಾರೆ. ಬಾಡಿಗೆ ನೀಡುವ ಮೊದಲು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕರಾರು ಪತ್ರ ನೋಂದಾಯಿಸಿದ್ದಾರೆ ಎಂದು ತಿಳಿಸಿದರು.
ಈ ಆಸ್ತಿಯಲ್ಲಿ ಬಾಡಿಗೆ ಪಡೆದಿರುವ ಜಿ.ಎಂ. ಚಂದನ ಎಂಬುವವರು ಉದ್ದಿಮೆ ಪರವಾನಗಿ ಕೋರಿ ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯೊಂದಿಗೆ ಸಲ್ಲಿಸಿದ್ದ ದಾಖಲೆಗಳ ಬಗ್ಗೆ ಅನುಮಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ಉಪ ನೋಂದಣಾಧಿಕಾರಿ ಕಚೇರಿಗೆ ಪತ್ರ ಬರೆದು, ಜಿ.ಎಂ. ಚಂದನ ಅವರ ಕರಾರು ಪತ್ರ ನೋಂದಣಿಗೆ ಸಲ್ಲಿಸಿದ್ದ ದಾಖಲೆಗಳನ್ನು ದೃಢೀಕರಿಸಿ, ಪಡೆಯಲಾಯಿತು. ಈ ದಾಖಲೆಗಳನ್ನು ಪರಿಶೀಲಿಸಿದಾಗ, ಎ.ಬಿ. ಗುರುಸಿದ್ದೇಶ್ ಅವರು, ನಗರಸಭೆಗೆ ಪೂರ್ಣ ಪ್ರಮಾಣದ ತೆರಿಗೆ ಪಾವತಿಸದೇ ನಕಲಿ ಇ-ಸ್ವತ್ತು ಸೃಷ್ಟಿಸಿರುವುದು ಹಾಗೂ ಅದನ್ನೇ ನಗರಸಭೆ, ಉಪ ನೋಂದಣಾಧಿಕಾರಿ ಕಚೇರಿಗೆ ಹಾಜರುಪಡಿಸಿ ಕರಾರು ಪತ್ರ ನೋಂದಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ವಿವರಿಸಿದರು.
ಎ.ಬಿ. ಗುರುಸಿದ್ದೇಶ್ 2018-19 ಸಾಲಿನಿಂದ 2024-25 ನೇ ಸಾಲಿನವರೆಗೆ ಸುಮಾರು ₹16 ಲಕ್ಷಕ್ಕೂ ಅಧಿಕ ಮೊತ್ತದ ತೆರಿಗೆ ಪಾವತಿಸಿ ಅಧಿಕೃತವಾಗಿ ಇ-ಸ್ವತ್ತು ಪಡೆಯಬೇಕಿತ್ತು. ಆದರೆ ತೆರಿಗೆ ಪಾವತಿಸದೇ ನಕಲು ಇ-ಸ್ವತ್ತು ಸೃಷ್ಟಿಸಿ ನಗರಸಭೆಗೆ ವಂಚನೆ ಮಾಡಿದ್ದು, ಗುರುಸಿದ್ದೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನಗರ ಪೊಲೀಸ್ ಠಾಣೆಯಲ್ಲಿ ಅ.15 ರಂದು ದೂರು ಸಲ್ಲಿಸಲಾಗಿದೆ. ಪೊಲೀಸರು ತನಿಖಾ ನಡೆಸಿದ್ದು, ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.