ಹಾಸನ: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಬುಧವಾರ ಆರಂಭವಾಗಿದೆ. ನೂರಾರು ಶಿಕ್ಷಕರು ಕೌನ್ಸೆಲಿಂಗ್‌ಗಾಗಿ ಇಲ್ಲಿನ ಮಹಾವೀರ ವೃತ್ತದ ಬಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಕೆ. ಪಾಂಡು, ‘ಇದುವರೆಗೆ ಪ್ರಾಥಮಿಕ 3,422, ಪ್ರೌಢಶಾಲೆಯ 249 ಶಿಕ್ಷಕರು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.
‘ವರ್ಗಾವಣೆ ಕೌನ್ಸೆಲಿಂಗ್ ಮೂರು ದಿನಗಳ ಕಾಲ ನಡೆಯಲಿದೆ. ಬುಧವಾರ ಹಾಗೂ ಗುರುವಾರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಶುಕ್ರವಾರ ಪ್ರೌಢಶಾಲೆಯ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ’ ಎಂದರು.
‘ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಮುಂದುವರಿದಿದ್ದು, ಈಗಾಗಲೇ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂದ ತಿಳಿಸಿದರು.
‘ಯಾವುದೇ ಗೊಂದಲವಿಲ್ಲದಂತೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ಆನ್‌ಲೈನ್ ಮೂಲಕ ಶಿಕ್ಷಕರ ವರ್ಗಾವಣೆ ಮಾಡಲಾಗುತ್ತಿದೆ. ವರ್ಗಾವಣೆಗೆ ಬಂದ ಶಿಕ್ಷಕರು, ತಮ್ಮ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಶಿಕ್ಷಕರು ಹೋದ ಸರ್ಕಾರಿ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಪ್ರಗತಿಗೆ ಶ್ರಮ ವಹಿಸುವಂತೆ ಸಲಹೆ ನೀಡಲಾಗುತ್ತಿದೆ’ ಎಂದರು.
‘ಈ ಬಾರಿ ಕೇವಲ ಶೇ 6ರಷ್ಟು ಅಂದರೆ 3,422ರಲ್ಲಿ 322 ಮಂದಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 292ರಲ್ಲಿ 72 ಮಂದಿ ಶಿಕ್ಷಕರಿಗೆ ವರ್ಗಾವಣೆ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.