ಹಾಸನ: ‘ಅಭಿವೃದ್ಧಿ ಹೆಸರಿನಲ್ಲಿ ಮಹಾರಾಜ ಉದ್ಯಾನದಲ್ಲಿ ಮರ ಕಡಿದಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯ ಕರ್ತರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.
‘ಮರಗಳನ್ನು ಕಡಿದು, ಉದ್ಯಾನ ದಲ್ಲಿ ಕಾಂಕ್ರೀಟೀಕರಣ ಮಾಡುತ್ತಿ ರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಅರಣ್ಯ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಪ್ರತಿಭಟನ ಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಕಟ್ಟಡ ಕಟ್ಟುವ ಸಲುವಾಗಿ ಉದ್ಯಾನದಲ್ಲಿ ಮರಗಳನ್ನು ಕಡಿದು ಬೇರೆಡೆ ಸಾಗಿಸಲಾಗಿದೆ. ಕೆಲವು ಮರಗಳನ್ನು ಸುಟ್ಟು ಹಾಕಲಾಗಿದೆ. ಮರ ಕಡಿಯಲು ಗುತ್ತಿಗೆ ಪಡೆದಿರುವವರು ಹಾಗೂಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟರಮಣಪ್ಪ ಇದಕ್ಕೆ ಕಾರಣ. ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.
‘ಮಹಾರಾಜ ಉದ್ಯಾನದಲ್ಲಿ ಮರಗಳನ್ನು ಕಡಿದು ಟ್ರಾಕ್ಟರ್ ಮೂಲಕ ಸಾಗಿಸಿರುವ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡ ಅಗಿಲೆ ಯೋಗೇಶ್ ಮಾತನಾಡಿ, ‘ಉದ್ಯಾನದಲ್ಲಿ ಯಥಾಸ್ಥಿತಿ ಕಾಪಾಡಬೇಕು. ಒಂದು ಮರ ಕಡಿದಿಲ್ಲ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳುತ್ತಾರೆ. ಆದರೆ, ಮರ ಕಡಿದಿರು ವುದನ್ನು ತೋರಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸುಮ್ಮನಿದ್ದಾರೆ. ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದರೂ ಮನ್ನಣೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಗೊಳಿಸಲಾಗುವುದು’ ಎಂದು ಎಚ್ಚರಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್. ಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಬಿದರೆಕೆರೆ ಜಯರಾಮ್, ಹನೀಫ್, ಶಿವು, ವಾಸೀಮ್, ನಜರ್, ಮನು ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.