ಹಾಸನ: ಮನುಷ್ಯನ ಕಣ್ಣು ದೇವರು ನೀಡಿರುವ ಒಂದು ವಿಸ್ಮಯ ಅಂಗವಾಗಿದ್ದು, ಕಣ್ಣಿನ ದೃಷ್ಟಿ ಚೆನ್ನಾಗಿದ್ದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಎಂದು ಕಣ್ಣಿನ ನರ ರೋಗ ತಜ್ಞ ಡಾ.ಕೆ. ಸಂದೀಪ್ ಹೇಳಿದರು.
ನಗರದಲ್ಲಿ ಬುಧವಾರ ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಾರದ ಸಭೆಯಲ್ಲಿ ಕಣ್ಣಿನ ಸಂರಕ್ಷಣೆ ವಿಷಯದ ಕುರಿತ ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರತಿಯೊಬ್ಬರು ಮೊಬೈಲ್, ಟಿ.ವಿ, ಕಂಪ್ಯೂಟರ್‌ಗಳ ಬಳಕೆ ಕಡಿಮೆ ಮಾಡಿದರೆ ಒಳ್ಳೆಯದು. ಚಿಕ್ಕ ಮಕ್ಕಳಿಗೆ ಇಂದು ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಹಿಂದೆಲ್ಲ ಒಂದು ಶಾಲೆಯಲ್ಲಿ ಕನ್ನಡಕ ಧರಿಸುವವರ ಸಂಖ್ಯೆ ಅತ್ಯಂತ ಕಡಿಮೆ ಇರುತ್ತಿತ್ತು. ಈಗ ಶಾಲೆಗಳಲ್ಲಿ ಕನ್ನಡಕ ಹಾಕಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ. 15 ವರ್ಷದವರೆಗೆ ಮಕ್ಕಳನ್ನು ಮಣ್ಣಿನೊಂದಿಗೆ ಬೆರೆತು ಆಟ ಆಡುವಂತೆ ಮಾಡಬೇಕು. ಮೊಬೈಲ್ , ಟಿವಿ ಬಿಡಿಸಿ, ಮಕ್ಕಳನ್ನು ಕ್ರೀಡಾಂಗಣಗಳಿಗೆ ಕರೆತರುವ ಕೆಲಸ ಆಗಬೇಕು ಎಂದರು.
ಪ್ರತಿಯೊಬ್ಬರೂ ನೇತ್ರದಾನ ಮಾಡಿ ಇತರರಿಗೆ ಬೆಳಕಾಗಬೇಕು. ವ್ಯಕ್ತಿ ಮೃತಪಟ್ಟು 6 ಗಂಟೆಯೊಳಗೆ ಕಣ್ಣನ್ನು ದಾನ ಮಾಡಬಹುದು. ಯಾರೇ ನೇತ್ರದಾನ ಮಾಡಿದರೂ ಅದನ್ನು ಇತರರಿಗೆ ಅಳವಡಿಸಬಹುದು. ವ್ಯತ್ಯಸ್ತ ರಕ್ತದ ಗುಂಪು ಸಮಸ್ಯೆ ಆಗದು ಎಂದರು.
ಕಣ್ಣಿನ ಅಕ್ಷಿ ಪಟೀಲ ರೋಗಕ್ಕೆ ಮಧುಮೇಹ, ರಕ್ತದೊತ್ತಡ ಕಾರಣವಾಗಿದ್ದು, ಕಣ್ಣಿನ ಕಾಯಿಲೆಯನ್ನು ಕೂಡಲೇ ವೈದ್ಯರಿಗೆ ತೋರಿಸಿ ಪರಿಹರಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಗುಣಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಕಣ್ಣಿನ ಸಮಸ್ಯೆ ವಂಶಪಾರಂಪರ್ಯವಾಗಿ ಬರುವ ಸಾಧ್ಯತೆ ಇದ್ದು, ಆರಂಭಿಕ ಹಂತದಿಂದಲ್ಲಿ ಗುರುತಿಸಿ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.
ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆಯ ಅಧ್ಯಕ್ಷ ಯು.ವಿ. ಸಚ್ಚಿನ್, ಕಾರ್ಯದರ್ಶಿ ಪುನೀತ್, ಖಜಾಂಚಿ ರವಿ ಕುಮಾರ್ ಪಿ., ವಲಯ ಸೇನಾನಿ ಡಾ.ವಿಕ್ರಂ, ಸದಸ್ಯರಾದ ಎಸ್. ಯೋಗೇಶ್, ಶ್ರೀಧರ್, ವೇಣುಗೋಪಾಲ್, ಹರ್ಷ, ಕೆ.ಸಿ. ನವೀನ್, ಡಾ.ಎಂ.ಡಿ. ನಿತ್ಯಾನಂದ, ಸತೀಶ್, ಎಸ್.ಕೆ. ಕುಮಾರ್, ವಿನಯ್, ಗಿರೀಶ್, ಅತಿಥ್, ದಿಲೀಪ್ ಕುಮಾರ್ ಎಚ್.ಕೆ., ಮಹೇಶ್, ಕಿರಣ್, ಶ್ರೀನಂದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.