ಹಳೇಬೀಡು: ರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ವಕ್ಪ್ ಜಮೀನು ವಿವಾದ ಇದೀಗ ಹಳೇಬೀಡಿಗೂ ಬಂದಿದೆ. ಹೋಬಳಿಯ ಘಟ್ಟದಹಳ್ಳಿಯಲ್ಲಿ ಭೂ ದಾನ ನೀಡಿದ ಜಮೀನಿನ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದಾಗಿದ್ದು, ಶಾಲಾಭಿವೃದ್ದಿ ಸಮಿತಿ ಹಾಗೂ ಗ್ರಾಮದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
‘ಗೋಣಿಸೋಮನಹಳ್ಳಿ ಸರ್ಕಾರಿ ಶಾಲೆಗೆ ಅನಾದಿ ಕಾಲದಲ್ಲಿ ರೈತ ಚಂದ್ರೇಗೌಡ ಎಂಬುವವರು ಘಟ್ಟದಹಳ್ಳಿ ದಾಖಲೆಯ ಸರ್ವೆ ನಂಬರ್ 435 ರಲ್ಲಿ 38 ಗುಂಟೆ ಜಮೀನನ್ನು ಭೂದಾನ ಕೊಟ್ಟಿದ್ದರು. ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಿಢೀರನೆ ನಮೂದಾಗಿದ್ದು, ಭೂದಾನ ಶಾಲೆಗಾಗಿ ಎಂದೂ ನಮೂದಾಗಿದೆ. ಶಾಲೆಗೆ ಭೂಮಿ ಕೊಟ್ಟಿರುವುದು ಇಂದು ನಿನ್ನೆಯ ಪ್ರಕ್ರಿಯೆಯಲ್ಲ. ದಾನ ಕೊಡುವುದಕ್ಕಿಂತ ಮೊದಲು ರೈತರು ಸಹ ಜಮೀನನ್ನು ಅನುಭವಿಸಿದ್ದಾರೆ. ಈಗ ಪಹಣಿಯಲ್ಲಿ ವಕ್ಪ್ ಆಸ್ತಿಯಾಗಿರುವುದು ಯಕ್ಷ ಪ್ರಶ್ನೆಯಾಗಿದೆ. ಶಾಲೆಯ ಆಸ್ತಿಯನ್ನು ಉಳಿಸಲು ಅವಿರತ ಹೋರಾಟ ಮಾಡುತ್ತೇವೆ’ ಎನ್ನುತ್ತಾರೆ ಗ್ರಾಮದ ಮುಖಂಡ ಜಿ.ವಿ.ಪ್ರಸನ್ನ.
’ಗೋಣಿಸೋಮನಹಳ್ಳಿಯ ದೊಡ್ಡಕೆರೆ ಹಿಂದೆ ಜೀರ್ಣೋದ್ದಾರ ಆಗಿರುವ ಪ್ರಾಚೀನ ಕಾಲದ ಆಂಜನೇಯ ದೇವಾಲಯ ಇದೆ. ದೇವಾಲಯಕ್ಕೂ ಸಹ ಉಂಬಳಿ ಬಿಟ್ಟಿರುವ ಜಮೀನು ಇದೆ. ಜಮೀನಿನಿಂದ ಸ್ವಲ್ಪ ದೂರದಲ್ಲಿಯೇ ಹುಲಿಕಲ್ ವೀರಭದ್ರೇಶ್ವರ ಬೆಟ್ಟ ಸಹ ಇದೆ. ಕೆರೆ ಏರಿಯ ಮೇಲೆ ರಾಜರ ಕಾಲದ ಕಲ್ಲು ಮಂಟಪ ಇದೆ. ಇಷ್ಟೆಲ್ಲ ಪ್ರಾಚೀನ ಹಿನ್ನೆಲೆ ಇರುವ ಜಾಗದಲ್ಲಿರುವ ಶಾಲೆಯ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲು ಯಾವ ರೀತಿ ಸಾಧ್ಯವಾಯಿತು ಎಂಬುದು ಅನುಮಾನಕ್ಕೆ ಅವಕಾಶ ಕಲ್ಪಿಸಿದೆ’ ಎಂದು ವೀಶೈವ ಲಿಂಗಾಯಿತ ಸಂಘ ಬೇಲೂರು ತಾಲ್ಲೂಕು ಯುವ ಘಟಕ ಅಧ್ಯಕ್ಷ ಎಚ್.ಸಿ. ಚೇತನ್ ಹೇಳಿದರು.
‘ಈಗ ವಕ್ಪ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿರುವ ಜಾಗದಲ್ಲಿ ಕುವರಿಹಳ್ಳಿ ಎಂಬ ಊರು ಇತ್ತು. ಸುಮಾರು 15 ಕುಂಟುಂಬಗಳು ವಾಸವಾಗಿದ್ದವು ಎಂದು ಹಿರಿಯರು ಹೇಳುತ್ತಾರೆ. ಉಪ್ಪಾರ ಸಮುದಾಯದ ಕೆಲವರು ಘಟ್ಟದಹಳ್ಳಿಗೆ ಹೋಗಿ ನೆಲೆಸಿದ್ದಾರೆ. ಮತ್ತಷ್ಟು ಕುಟುಂಬ ಗೋಣಿಸೋಮನಹಳ್ಳಿಯಲ್ಲಿ ನೆಲೆಸಿವೆ. ಈ ಸ್ಥಳದಲ್ಲಿ ಲಿಂಗಾಯತರು ಸಹ ವಾಸವಾಗಿದ್ದರು’ ಎನ್ನುತ್ತಾರೆ ಗೋಣಿಸೋಮನಹಳ್ಳಿ ರಾಜಶೇಖರ್.
ಸರ್ಕಾರ ರೈತರ ಜಮೀನುಗಳನ್ನು ಹಂತಹಂತವಾಗಿ ವಕ್ಫ್‌ಗೆ ಬರೆದು ಕೊಡಲು ತುದಿಗಾಲಿನಲ್ಲಿ ನಿಂತಿದೆ. ರೈತರ ಎಚ್ಚರವಹಿಸಿ ಪಹಣಿ ಪರಿಶೀಲಿಸಬೇಕು. ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ.– ಎಚ್.ಕೆ.ಸುರೇಶ್ ಶಾಸಕ
ವಕ್ಪ್ ಗೊಂದಲದಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಅತಿವೃಷ್ಟಿ ಅನಾವೃಷ್ಟಿ ಬೆಲೆ ಕುಸಿತದಿಂದ ತತ್ತರಿಸಿರುವ ರೈತರಿಗೆ ಈ ರೀತಿಯ ಆಘಾತ ಕೊಟ್ಟರೆ ಬದುಕುವುದಾದರೆ ಹೇಗೆ?–ಎಲ್.ವಿ.ಜಯಕುಮಾರ್ ಘಟ್ಟದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ತಂದೆ ತಾಯಿ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿಕೊಳ್ಳುವುದು ಸುಲಭವಿಲ್ಲ. ಸಣ್ಣ ದೋಷವಿದ್ದರೂ ಜಿಲ್ಲಾಡಳಿತದವರೆಗೆ ಅಲೆದಾಡಬೇಕು. ಆದರೆ ರೈತರ ಜಮೀನು ಸುಲಭವಾಗಿ ವಕ್ಫ್ ಆಸ್ತಿಯಾಗುತ್ತಿವೆ.–ಬಾಲಚಂದ್ರ ಎಸ್.ಬಿ. ಘಟ್ಟದಹಳ್ಳಿ ಗ್ರಾಪಂ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.