ADVERTISEMENT

ಸಿಎಂ ಸಿದ್ದರಾಮಯ್ಯ ಹಾಲಿನಷ್ಟೇ ಪರಿಶುದ್ಧವಾಗಿದ್ದಾರೆ: ಸಂಸದ ಶ್ರೇಯಸ್ ಪಟೇಲ್

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 13:47 IST
Last Updated 25 ಸೆಪ್ಟೆಂಬರ್ 2024, 13:47 IST
ಶ್ರೇಯಸ್ ಪಟೇಲ್‌
ಶ್ರೇಯಸ್ ಪಟೇಲ್‌   

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದ್ದು, ಅವರು ಹಾಲಿನಷ್ಟೇ ಪರಿಶುದ್ಧವಾಗಿದ್ದಾರೆ. ಮುಡಾ ಪ್ರಕರಣದಿಂದ ಆರೋಪ ಮುಕ್ತರಾಗಿ ಹೊರಬರಲಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಎಂದಿಗೂ ಕ್ಷಣಿಕ. ಕೊನೆಗೆ ಉಳಿಯುವುದು ಸತ್ಯ ಮಾತ್ರ. ರಾಜ್ಯ ಹೈಕೋರ್ಟ್‌ ನೀಡಿರುವ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಸಿದ್ದರಾಮಯ್ಯ ಅವರು ಆರೋಪದಿಂದ ಮುಕ್ತರಾಗಿ ಹೊರಬರುತ್ತಾರೆ ಎಂಬ ಭರವಸೆ ರಾಜ್ಯ, ದೇಶದ ಜನರಿಗೆ ಇದೆ ಎಂದರು.

ಅವರ ವಿರುದ್ಧ ಸಿಬಿಐ ಸೇರಿದಂತೆ ಯಾವುದೇ ರೀತಿಯ ತನಿಖೆ ಮಾಡಿದರೂ ತಪ್ಪಿತಸ್ಥರಾಗಲು ಸಾಧ್ಯವಿಲ್ಲ ಎಂದ ಅವರು, ಸಿದ್ದರಾಮಯ್ಯ ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು? ವಿಪಕ್ಷದವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನು ಸರಿ ಮಾಡಿಕೊಳ್ಳದೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.

ADVERTISEMENT

ಬಿಜೆಪಿ– ಜೆಡಿಎಸ್‌ನವರು ಇಲ್ಲಿಯವರೆಗೆ ಎಷ್ಟು ಹಗರಣ ಮಾಡಿಲ್ಲ? ಎಷ್ಟು ಹಗರಣದಲ್ಲಿ ಭಾಗಿಯಾಗಿಲ್ಲ? ಹಾಗಿದ್ದರೆ ಎಷ್ಟು ಮುಖ್ಯಮಂತ್ರಿಗಳು ಇಲ್ಲಿಯವರೆಗೂ ರಾಜೀನಾಮೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಮೇಯ ಬರುವುದಿಲ್ಲ. ಶಾಸಕರು, ಸಂಸದರು, ನಾವೆಲ್ಲರೂ ಸಿದ್ದರಾಮಯ್ಯ ಅವರ ಜೊತೆಗೆ ನಿಲ್ಲುತ್ತೇವೆ ಎಂದರು.

ತನಿಖೆ ಮಾಡಲು ಕೋರ್ಟ್ ಆದೇಶ ನೀಡಿದೆ. ತನಿಖೆ ನಂತರ ಸತ್ಯ ಹೊರಬರುತ್ತದೆ. ಕಾನೂನಿನ ಮುಂದೆ ನಾವ್ಯಾರೂ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ ಎಂದರು.

ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಹೆಸರು ಇರುವುದು ಶುದ್ಧ ಸುಳ್ಳು. ಜಮೀನು ಕೊಟ್ಟು ನಿವೇಶನ ತೆಗೆದುಕೊಳ್ಳುವುದರಲ್ಲಿ ತಪ್ಪೇನಿದೆ? ಎಲ್ಲ ಸತ್ಯ ಮುಂದಿನ ದಿನಗಳಲ್ಲಿ ಜನತೆಗೆ ಗೊತ್ತಾಗಲಿದ್ದು, ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಕೆಲಸವನ್ನು ವಿಪಕ್ಷದವರು ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ರಾಜೀನಾಮೆ ನೀಡಲಿ

ಹಾಸನ: ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಶಾಸಕ ಸ್ವರೂಪ್ ಪ್ರಕಾಶ್ ಒತ್ತಾಯಿಸಿದರು.

ಮುಡಾ ಹಗರಣ ವಿಚಾರವಾಗಿ ಹೈಕೋರ್ಟ್ ಆದೇಶ ನೀಡಿದೆ. ಹಗರಣ ಸಂಬಂಧ ಸೂಕ್ತ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ಬಿಜೆಪಿ ಜೆಡಿಎಸ್ ಪಕ್ಷದಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಲಾಗಿದೆ‌. ಇದೀಗ ನ್ಯಾಯಾಲಯದಿಂದ ಆದೇಶ ಬಂದಿರುವುದು ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದರು. ಕೋರ್ಟ್‌ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಸಹ ಹಗರಣದಲ್ಲಿ ಸಿಲುಕಿದ ನಂತರ ರಾಜೀನಾಮೆ ನೀಡಿದ್ದಾರೆ ಎಂದರು.

ಪ್ರತಿಪಕ್ಷಗಳ ಷಡ್ಯಂತ್ರಕ್ಕೆ ಹೆದರುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಇದರಲ್ಲಿ ಷಡ್ಯಂತ್ರ ಎಲ್ಲಿದೇ? ಹಗರಣವನ್ನು ವಿಧಾನಸಭೆ ಅಧಿವೇಶನದಲ್ಲಿಯೂ ಪ್ರಸ್ತಾಪಿಸಲಾಗಿತ್ತು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಮುಂದಿನ ಹೋರಾಟದ ಸಂಬಂಧ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಭೆ ಕರೆದು ಚರ್ಚಿಸಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.