ADVERTISEMENT

ಅಡಗೂರು ಜೈನರ ಗುತ್ತಿ: ಪಂಚಕಲ್ಯಾಣ ಮಹೋತ್ಸವ ಸಂಪನ್ನ

ಜೈನರಗುತ್ತಿಯಲ್ಲಿ ಜೈನಮುನಿಗಳು, ಭಟ್ಟಾರಕರಿಂದ ಜಿನಮೂರ್ತಿಗಳಿಗೆ ಬೀಜಾಕ್ಷರ ಲೇಪನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 2:09 IST
Last Updated 10 ಫೆಬ್ರುವರಿ 2021, 2:09 IST
ಜೈನಮುನಿ ವೀರಸಾಗರ ಮಹಾರಾಜ್ ಹಾಗೂ ಸೋಂದಾ ಮಠದ ಪೀಠಾಧ್ಯಕ್ಷ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ತೀರ್ಥಂಕರ ಮೂರ್ತಿಗಳಿಗೆ ಬೀಜಾಕ್ಷರ ಲೇಪನ ಮಾಡಿದರು
ಜೈನಮುನಿ ವೀರಸಾಗರ ಮಹಾರಾಜ್ ಹಾಗೂ ಸೋಂದಾ ಮಠದ ಪೀಠಾಧ್ಯಕ್ಷ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ತೀರ್ಥಂಕರ ಮೂರ್ತಿಗಳಿಗೆ ಬೀಜಾಕ್ಷರ ಲೇಪನ ಮಾಡಿದರು   

ಹಳೇಬೀಡು: ಅಡಗೂರು ಜೈನರ ಗುತ್ತಿಯಲ್ಲಿ ಮೂರು ದಿನ ನಡೆದ ಪಂಚಕಲ್ಯಾಣ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು.

ಧರ್ಮ ಧ್ವಜಾರೋಹಣ ನೆರವೇರಿದ ನಂತರ ಜೈನಮುನಿಗಳು ಹಾಗೂ ಭಟ್ಟಾರಕ ಪಟ್ಟಾಚಾರ್ಯರ ಸಮ್ಮುಖದಲ್ಲಿ ಸೂರ್ಯಮಂತ್ರ ಉಪದೇಶ ಮಾಡಿ ತೀರ್ಥಂಕರ ಮೂರ್ತಿಗಳಿಗೆ ಜೀವಕಳೆ ತುಂಬಿದರು. ನಂತರ ವಾದ್ಯವೈಭವ ಹಾಗೂ ಮಾಧರ್ಯ ಪ್ರಧಾನವಾದ ಜಿನಗಾಯನದೊಂದಿಗೆ ಪೂಜಾವಿಧಾನಗಳು ನಡೆದವು.

ತೀರ್ಥಂಕರರಿಗೆ ಕೇವಲ ಜ್ಞಾನಸಂಸ್ಕಾರ ನೆರವೇರಿಸಿದಾಗ ನೆರೆದಿದ್ದ ಜಿನ ಭಕ್ತರು ಚಪ್ಪಾಳೆಯೊಂದಿಗೆ ಘೋಷಣೆ ಕೂಗುತ್ತ ಭಕ್ತಿ ಸಮರ್ಪಿಸಿದರು. ಕೇವಲ ಜ್ಞಾನ ಸಂಸ್ಕಾರದ ಭಾಗವಾಗಿ ತೀರ್ಥಂಕರರ ಮೂರ್ತಿಗಳಿಗೆ ಬೀಜಾಕ್ಷರ ಲೇಪನ ಮಾಡಲಾಯಿತು. ಒಂದೇ ಸಮಯದಲ್ಲಿ 24 ತೀರ್ಥಂಕರರಿಗೆ ಜಲ, ಗಂಧ, ಕ್ಷೀರ, ಎಳನೀರು. ಕಬ್ಬಿನಹಾಲು, ಕಲ್ಕಚೂರ್ಣ. ಅರಿಸಿನ, ಚಂದನ ಹಾಗೂ ಪುಷ್ಪಗಳಿಂದ ಮಸ್ತಕಾಭಿಷೇಕ ನಡೆಯಿತು. ಸಕಲ ಜೀವಿಗಳಿಗೆ ಸುಖ, ಶಾಂತಿ, ನೆಮ್ಮದಿ ಹಾಗೂ ಮುಕ್ತಿ ದೊರಕಲೆಂದು ಮಹಾಂಶಾಂತಿ ಧಾರೆ ನೆರವೇರಿತು.

ADVERTISEMENT

ಮುನಿಶ್ರೀ ವೀರಸಾಗರ ಮಹಾರಾಜ್, ಸೋಂದಾ ಮಠದ ಪೀಠಾಧ್ಯಕ್ಷ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಅರೆತಿಪ್ಪೂರು ಜೈನ ಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ನೂತನ ಮಾನಸ್ತಂಭ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ನಂತರ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ಪಾರ್ಶ್ವನಾಥ ತೀರ್ಥಂಕರರಿಗೆ 108 ಕಳಸ, ಚತುಷ್ಕೋನ ಕಳಸ, ಪೂರ್ಣಕುಂಭ ಕಳಸ ಹಾಗೂ ವಿವಿಧ ದ್ರವ್ಯಗಳಿಂದ ಮಸ್ತಕಾಭಿಷೇಕ ನಡೆಯಿತು. ಮೂರು ದಿನ ನಡೆದ ತೀರ್ಥಂಕರರ ಪೂರ್ವದ ರಾಜ್ಯಾಭಿಷೇಕ, ರಾಜ ವೈಭವ, ವೈರಾಗ್ಯ ಹಾಗೂ ತೀರ್ಥಂಕರ ಪದವಿ ಪ್ರಾಪ್ತವಾಗುವ ವಿಧಾನಗಳನ್ನು ಜಿನ ಭಕ್ತರು ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು.

ಜೈನ ಮುನಿಗಳಿಗೆ ಜಿನ ಭಕ್ತರು ಹೊಸ ಪಿಂಛಿಯನ್ನು ನೀಡಿ ಪಿಂಛಿ ಕಾರ್ಯಕ್ರಮ ನಡೆಸಿದರು.

ಧಾರ್ಮಿಕ ಸಭೆ

‘ಜಿನ ಭಕ್ತರು ಜೈನಧರ್ಮದ ತತ್ವಗಳನ್ನು ಅರ್ಥೈಸಿಕೊಂಡು ಅಳವಡಿಸಿ ಕೊಳ್ಳಬೇಕು. ಅಣುವ್ರತಗಳನ್ನು ಜೈನ ಶ್ರಾವಕರು ಅನುಸರಿಸಬೇಕು ಪ್ರಾಚೀನ ಕಾಲದಿಂದ ಜೈನಧರ್ಮ ಜಗತ್ತಿಗೆ ಅಹಿಂಸೆಯ ಸಂದೇಶ ಸಾರುತ್ತಿದೆ. ಜಗತ್ತಿನ ಸಕಲ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿಯನ್ನು ಜೈನ ಧರ್ಮ ಬಯಸುತ್ತದೆ’ ಎಂದು ಮುನಿಶ್ರೀ ವೀರಸಾಗರ ಮಹಾರಾಜ್ ತಿಳಿಸಿದರು.

ಪೂಜಾ ವಿಧಾನದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಹಾಸನ ದೊಡ್ಡಬಸದಿ ಜೈನ ಸಂಘ ಅಧ್ಯಕ್ಷ ಎಂ.ಅಜಿತ್ ಕುಮಾರ್ ಮಾತನಾಡಿ, ‘ಧಾರ್ಮಿಕ ಕಾರ್ಯಗಳು ನಡೆಯುವುದರಿಂದ ಸಮಾಜದ ಆಗು ಹೋಗುಗಳು ಬೆಳಕಿಗೆ ಬರುತ್ತದೆ. ಸಮಾಜಕ್ಕೆ ಅಗತ್ಯವಿರುವ ಧಾರ್ಮಿಕ ಹಾಗೂ ವಿವಿಧ ಕ್ಷೇತ್ರದ ಕೆಲಸ ಕಾರ್ಯಗಳು ಪ್ರಗತಿಯಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಜಿನ ಭಕ್ತರಿಗೆ ಜೈನಮುನಿಗಳು ಭಟ್ಟಾರಕರು ಆಶೀರ್ವಾದ ದೊರಕುತ್ತದೆ’ ಎಂದರು.

ಸೋಂದಾ ಜೈನ ಮಠ ಪೀಠಾಧ್ಯಕ್ಷ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಅರೇತಿಪ್ಪೂರು ಜೈನ ಮಠದ ಪೀಠಾಧ್ಯಕ್ಷ ಸಿದ್ಧಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಗಾಯಕಿ ನಿರೀಕ್ಷಾ ಹೊಸಮಾರು ಅವರು ವಾದ್ಯಗೋಷ್ಠಿಯೊಂದಿಗೆ ಗಾಯನದ ಸುಧೆ ಹರಿಸಿದರು.

ಸಮಾಜದ ಮುಖಂಡರಾದ ಹಾಸನದ ಡಾ.ಭಾಸ್ಕರ್, ಬೆಳಗಾವಿಯ ಡಿ.ಡಿ.ಪಾಟೀಲ್, ಅಡಗೂರಿನ ಎ.ಎ.ನಾಗೇಂದ್ರ ಕುಮಾರ್, ಹೊಂಗೆರೆ ಸನತ್ ಕುಮಾರ್, ಕಡದರವಳ್ಳಿ ಕೆ.ಪಿ.ದಿವಾಕರ, ದೇವಿಹಳ್ಳಿ ಭರತ್ ರಾಜ್, ಅಡಗೂರು ಸುಮತಿಕುಮಾರ್, ಜೈನರಗುತ್ತಿ ಟ್ರಸ್ಟ್ ನಿರ್ದೇಶಕ ವಿಜಯ್‌ಕುಮಾರ್ ದಿನಕರ್ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.